ಬೆಂಗಳೂರು: ರಾಜ್ಯ ವಿಧಾನ ಮಂಡಲದ ಉಭಯ ಸದನದಲ್ಲಿ ಅಂಗೀಕೃತವಾಗಿದ್ದ 'ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ಎರಡನೇ ತಿದ್ದುಪಡಿ) ಅಧಿನಿಯಮ' ಸಂಬಂಧ ರಾಜ್ಯ ಸರ್ಕಾರ ರಾಜ್ಯಪತ್ರದ ಮೂಲಕ ಅಧಿಸೂಚನೆ ಹೊರಡಿಸಿದೆ. ಈ ಕಾಯ್ದೆಯಡಿ 1.5 ಟನ್‌ನಿಂದ 12 ಟನ್‌ವರೆಗಿನ ತೂಕದ ಹಾಗೂ 10 ಲಕ್ಷದಿಂದ 15 ಲಕ್ಷ ರೂ. ವರೆಗಿನ ಮೋಟಾರ್ ಕ್ಯಾಬ್ ಮತ್ತು ಸರಕು ಸಾಗಣೆ ವಾಹನಗಳಿಗೆ ಜೀವಿತಾವಧಿ ತೆರಿಗೆ ಬದಲಿಗೆ ತ್ರೈಮಾಸಿಕ ತೆರಿಗೆ ಪಾವತಿ ಪದ್ಧತಿ ಪುನಃ ಅನುಷ್ಠಾನಕ್ಕೆ ಬರಲಿದೆ. 10ರಿಂದ 15 ಲಕ್ಷ ರೂ. ಬೆಲೆಯ ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್ ಹಾಗೂ ಸಾರ್ವಜನಿಕ ಸೇವಾ ವಾಹನಗಳು ಹಾಗೂ 1.5 ಟನ್‌ನಿಂದ 12 ಟನ್‌ನವರೆಗಿನ ಸರಕು ಸಾಗಣೆ ವಾಹನಗಳಿಂದ ಜೀವಿತಾವಧಿ ತೆರಿಗೆ ಸಂಗ್ರಹ ಕೈಬಿಟ್ಟು ತ್ರೈಮಾಸಿಕ ತೆರಿಗೆ ಪಾವತಿಗೆ ಅವಕಾಶ ಮಾಡಿಕೊಡಲಾಗಿದೆ. ಹೊಸದಾಗಿ ನೋಂದಣಿಯಾಗುವ ವಾಹನಗಳಿಗೆ ಮಾತ್ರ ಜೀವಿತಾವಧಿ ತೆರಿಗೆ ಅನ್ವಯ.
ಧನಿ ವಿನಿಯೋಗ ಅಧಿನಿಯಮದ ಅಧಿಸೂಚನೆ: ಉಭಯ ಸದನಗಳಲ್ಲಿ ಅಂಗೀಕೃತ 2023-24ನೇ ಸಾಲಿನ ಮೊದಲನೇ ಪೂರಕ ಅಂದಾಜುಗಳ 3542.10 ಕೋಟಿ ರೂ. ಮೊತ್ತದ ಧನಿವಿನಿಯೋಗ ಸಂಖ್ಯೆ-4ರ ಕಾಯ್ದೆಗೆ ರಾಜ್ಯ ಸರ್ಕಾರದಿಂದ ಅಧಿಸೂಚನೆಯಾಗಿದೆ. ಮೊದಲನೇ ಪೂರಕ ಅಂದಾಜಿನಲ್ಲಿ ಒದಗಿಸಿರುವ ಒಟ್ಟು ಮೊತ್ತ 3542.10 ಕೋಟಿಯಲ್ಲಿ 17.66 ಕೋಟಿ ಪ್ರಭೃತ ವೆಚ್ಚ ಮತ್ತು 3,524.44 ಕೋಟಿ ರೂ. ಪುರಸ್ಕೃತ ವೆಚ್ಚಗಳು ಸೇರಿವೆ. ಇದರಲ್ಲಿ 326.98 ಕೋಟಿ ರೂಪಾಯಿ ರಿಸರ್ವ್ ಫಂಡ್ ಠೇವಣಿ ಹಾಗೂ ಎಸ್.ಎನ್.ಎ ಖಾತೆಗಳಿಂದ ಭರಿಸಲಾಗುವುದು. ಪೂರಕ ಅಂದಾಜಿನಲ್ಲಿ 915 ಕೋಟಿ ರೂ. ಬಂಡವಾಳ ವೆಚ್ಚವಾಗಿ ಅಭಿವೃದ್ಧಿ ಕಾರ್ಯಗಳಿಗೆ ವ್ಯಯಿಸಲಾಗುತ್ತದೆ.
ಇದನ್ನೂ ಓದಿ: ಮೋಟಾರು ವಾಹನಗಳ ತೆರಿಗೆ ಪರಿಷ್ಕರಣೆ ತಿದ್ದುಪಡಿ ವಿಧೇಯಕ ಅಂಗೀಕಾರ: ಇನ್ಮುಂದೆ ತೆರಿಗೆ ಹೆಚ್ಚಳ, ಯಾವ ವಾಹನಕ್ಕೆ ಎಷ್ಟು?
ಸಮಾಜ ಕಲ್ಯಾಣ ಇಲಾಖೆಯ ಎಸ್.ಇ.ಪಿ ಹಾಗೂ ಟಿ.ಎಸ್.ಪಿ ಯೋಜನೆಗೆ 508 ಕೋಟಿ ರೂ., ರಾಜ್ಯ ವಿಪತ್ತು ನಿರ್ವಹಣೆ ಪ್ರಾಧಿಕಾರಕ್ಕೆ 502 ಕೋಟಿ, ಸಮಗ್ರ ಶಿಶು ಅಭಿವೃದ್ದಿ ಯೋಜನೆಗೆ 310 ಕೋಟಿ, ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯ ಸಾಗಣಿಕೆ ವೆಚ್ಚಗಳಿಗೆ ರೂ. 297 ಕೋಟಿ, ಎಸ್.ಸಿ.ಡಿ.ಎಸ್‌ಗೆ 284 ಕೋಟಿ, ಉಗ್ರಾಣ ನಿಗಮಕ್ಕೆ ಸಾಲವಾಗಿ ರೂ.229 ಕೋಟಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಆರೋಗ್ಯ ಕ್ಷೇಮ ಕೇಂದ್ರಗಳಾಗಿ ಮೇಲ್ದರ್ಜೆಗೆ ಏರಿಸಲು ರೂ.189 ಕೋಟಿ, ನಬಾರ್ಡ್ ರಸ್ತೆಗಳಿಗೆ ರೂ.150 ಕೋಟಿ, ಕೇಂದ್ರದ ಹದಿಹರಿಯದ ಗ್ರಂಥಾಲಯ ಇ-ಲೈಬ್ರರಿ ಯೋಜನೆಗೆ ರಾಜ್ಯದ ಪಾಲಾಗಿ ರೂ.132 ಕೋಟಿ, ಕೃಷಿ ಭಾಗ್ಯ ಯೋಜನೆಗೆ ರೂ.100 ಕೋಟಿ ಸೇರಿದಂತೆ ತೋಟಗಾರಿಕೆ, ಪಶುಸಂಗೋಪನೆ ಮತ್ತು ಮೀನುಗಾರಿಕೆ, ಕಂದಾಯ, ಶಿಕ್ಷಣ, ಆಹಾರ ಮತ್ತು ನಾಗರಿಕ ಸರಬರಾಜು, ವಾಣಿಜ್ಯ ಮತ್ತು ಕೈಗಾರಿಕೆ, ನಗರಾಭಿವೃದ್ಧಿ ಮತ್ತು ವಸತಿ, ಲೋಕೋಪಯೋಗಿ, ನೀರಾವರಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಆರ್ಥಿಕ ಇಲಾಖೆಗಳಿಗೆ ಅನುದಾನ ನೀಡಲಾಗಿದೆ.