ಬೆಂಗಳೂರು: ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆಗೆ ಅವಕಾಶ ಕಲ್ಪಿಸುವಂತೆ ಬಿಜೆಪಿ ಸದಸ್ಯರು ಆಗ್ರಹಿಸಿದ್ದು, ಅವಕಾಶ ನೀಡದಂತೆ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದರು. ಇದರಿಂದಾಗಿ ಕಲಾಪವನ್ನು ಒಂದು ಗಂಟೆ ಮುಂದೂಡಿಕೆ ಮಾಡಲಾಯಿತು.
ವಿಧಾನ ಪರಿಷತ್ ನ ಬೆಳಗಿನ ಕಲಾಪ ಆರಂಭಗೊಳ್ಳುತ್ತಿದ್ದಂತೆ ಶಾಸನ ರಚನೆಗೆ ಅವಕಾಶ ನೀಡಲಾಯಿತು. ಆದರೆ ಅದಕ್ಕೂ ಮುನ್ನವೇ ಸಭಾಪತಿಗಳ ವಿರುದ್ಧ ಅವಿಶ್ವಾಸ ನಿರ್ಣಯ ಚರ್ಚೆಗೆ ಅವಕಾಶ ನೀಡಿ ಎಂದು ಸಭಾಪತಿಗಳಿಗೆ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಮನವಿ ಮಾಡಿದರು.
11 ಜನ ಸದಸ್ಯರು ಅವಿಶ್ವಾಸ ನಿರ್ಣಯ ಮಾಡಿ ನೋಟಿಸ್ ನೀಡಿ 14 ದಿನ ಆಗಿದೆ. ಹಾಗಾಗಿ ಇಂದಿನ ಕಲಾಪಕ್ಕೆ ಸೇರಿಸಿ ಚರ್ಚೆಗೆ ಅವಕಾಶ ಕೊಡಬೇಕು. ನಿನ್ನೆಗೇ 14 ದಿನ ಮುಗಿದಿದ್ದು, ಹಾಗಾಗಿ ಚರ್ಚೆಗೆ ಅವಕಾಶ ನೀಡಿ ಎಂದು ಬಿಜೆಪಿ ಸದಸ್ಯರು ಆಗ್ರಹಿಸಿದರು. ಬಿಜೆಪಿ ಸದಸ್ಯರ ಬೇಡಿಕೆಗೆ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಆಕ್ಷೇಪ ವ್ಯಕ್ತಪಡಿಸಿದರು. ಇಂದು ಸಂಜೆಗೆ 14 ದಿನ ಆಗುತ್ತದೆ, ನಂತರ ಚರ್ಚೆ ಆಗಬೇಕು ಎಂದರು. ಪ್ರತಿಪಕ್ಷ ನಾಯಕರಿಗೆ ಬಿ.ಕೆ. ಹರಿಪ್ರಸಾದ್ ಸಾಥ್ ನೀಡಿದ್ರು.
ಓದಿ:ಮೂರನೇ ದಿನದ ವಿಧಾನಮಂಡಲ ಅಧಿವೇಶನ: ನೇರ ಪ್ರಸಾರ
ಇದಕ್ಕೆ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಸ್ಪಷ್ಟೀಕರಣ ನೀಡಿದರು. 14 ದಿನಗಳ ನಂತರ ಚರ್ಚೆಗೆ ತೆಗದುಕೊಳ್ಳಬಹುದು ಎಂದು ರೂಲ್ ಬುಕ್ ನಲ್ಲಿದೆ ಎಂದು ರೂಲ್ ನಲ್ಲಿನ ಅಂಶ ಓದಿ ಸದನಕ್ಕೆ ತಿಳಿಸಿದರು. ನಿಯಮ 165 ರ ಪ್ರಕಾರ ನೋಟಿಸ್ ನೀಡಿ 14 ದಿನದ ನಂತರ ಯಾವುದೇ ದಿನದಂದು ಕಾರ್ಯಕಲಾಪ ಪಟ್ಟಿಗೆ ಸೇರಿಸಲು ಸಭಾಪತಿಗಳಿಗೆ ಅಧಿಕಾರ ಇದೆ. ಬಿಜೆಪಿ ಬೇಡಿಕೆ ಕುರಿತು ನಾನು ಪರಿಶೀಲಿಸುತ್ತೇನೆ, ಕಾನೂನು ತಜ್ಞರ ಅಭಿಪ್ರಾಯ ಪಡೆದು ನಂತರ ದಿನಾಂಕ ನಿಗದಿಪಡಿಸುತ್ತೇನೆ, ಅಲ್ಲಿಯವರೆಗೂ ದಿನಾಂಕ ನಿಗದಿ ಮಾಡಲ್ಲ, ನನ್ನ ತೀರ್ಮಾನ ಇಷ್ಟೇ ಎಂದು ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಖಡಕ್ ಉತ್ತರವನ್ನು ನೀಡಿದರು.
ಆದರೂ ಪಟ್ಟು ಬಿಡದ ಬಿಜೆಪಿ ಸದಸ್ಯರು ನಾಳಿನ ಕಾರ್ಯಕಲಾಪ ಪಟ್ಟಿಗೆ ಸೇರಿಸುವ ಭರವಸೆಯನ್ನಾದರೂ ನೀಡಿ ಎಂದು ಆಗ್ರಹಿಸಿದರು. ಬಿಜೆಪಿ ಬೇಡಿಕೆ ಖಂಡಿಸಿದ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದರು. ಸದನದಲ್ಲಿ ಗದ್ದಲದ ಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಕಲಾಪವನ್ನು ಮಧ್ಯಾಹ್ನ 1ಗಂಟೆವರೆಗೆ ಮುಂದೂಡಿಕೆ ಮಾಡಲಾಯಿತು.