ಬೆಂಗಳೂರು: ಕೋವಿಡ್ ಸಾಂಕ್ರಾಮಿಕದ ಬಳಿಕ ಜಾಗತಿಕ ಮಟ್ಟದ ಹೂಡಿಕೆಗೆ ಕರ್ನಾಟಕ ರಾಜ್ಯ ಸೂಕ್ತವಾಗಿದೆ. ಕೊರೊನಾ ನಂತರ ಅತಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಅಗ್ರಸ್ಥಾನ ಪಡೆದುಕೊಂಡಿದೆ. ಇಂದು ಜಾಗತಿಕ ಮಟ್ಟದ ಹೂಡಿಕೆ ನಡೆಯುತ್ತಿದ್ದು, ರಾಜ್ಯದಲ್ಲಿ ಹೂಡಿಕೆದಾರರಿಗೆ ಅನುಕೂಲಕರವಾದ ವಾತಾವರಣ ಇದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದರು.
ಮಂಗಳವಾರ ಬೆಂಗಳೂರಿನಲ್ಲಿ ನವೆಂಬರ್ 2ರಿಂದ 4ರವರೆಗೆ ಮೂರು ದಿನಗಳ ಕಾಲ ನಡೆಯುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ 'ಇನ್ವೆಸ್ಟ್ ಕರ್ನಾಟಕ-2022' ಲೋಗೋ ಥೀಮ್ ಅನಾವರಣಗೊಳಿಸಿ ಅವರು ಮಾತನಾಡಿದರು. ಐಟಿ-ಬಿಟಿ ಸಿಟಿ ಕೇಂದ್ರ ಸ್ಥಾನವಾದ ಸಿಲಿಕಾನ್ ಸಿಟಿ ಇಂದು ಹೂಡಿಕೆದಾರ ಗಮನ ಸಳೆಯುತ್ತಿದೆ. ಇದರಿಂದಾಗಿ ಭಾರಿ ಪ್ರಮಾಣದ ಹೂಡಿಕೆಗಳು ನಡೆಯುತ್ತಿದೆ ಎಂದರು.
ರಾಜ್ಯದ ಯುವ ಸಮುದಾಯ, ಸೃಜನಶೀಲ ನಾಯಕರು, ನಿಪುಣ ಕೆಲಸಗಾರರಿಂದ ಯಾವುದೇ ಉದ್ಯಮದ ಮೂಲಕ ಸಾಕಷ್ಟು ಲಾಭ ಗಳಿಸಲು ಸಾಧ್ಯವಿದೆ. ಕರ್ನಾಟಕವನ್ನು ನಂಬಿಕೊಂಡು ಹೂಡಿಕೆದಾರರು ಬಂಡವಾಳ ಹಾಕುತ್ತಿರುವುದು ಶ್ಲಾಘನೀಯವಾಗಿದೆ. ಹೂಡಿಕೆದಾರರ ಯೋಜನೆಗಳಿಗೆ ತ್ವರಿತ ಅನುಮೋದನೆ ನೀಡಿ ನಿಗದಿತ ಕಾಲಮಿತಿಯಲ್ಲಿ ಅನುಮೋದನೆ ನೀಡಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದರು.
ಸಚಿವರಾದ ಎಂಟಿಬಿ ನಾಗರಾಜ್ ಹಾಗೂ ಮುರುಗೇಶ್ ನಿರಾಣಿ ಯಶಸ್ವಿ ಉದ್ಯಮಿಗಳಾಗಿದ್ದು, ಯುವ ಉದ್ಯಮಿಗಳಿಗೆ ಪ್ರೇರಣೆಯಾಗಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಬೊಮ್ಮಾಯಿ ಹೇಳಿದರು. ಕಾರ್ಯಕ್ರಮದಲ್ಲಿ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ, ಸಣ್ಣ ಕೈಗಾರಿಕೆ ಸಚಿವ ಎಂಟಿಬಿ ನಾಗರಾಜ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್, ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮಾ, ಕೈಗಾರಿಕಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಮಣರೆಡ್ಡಿ, ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ ಕೃಷ್ಣ ಉಪಸ್ಥಿತರಿದ್ದರು.
ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿ ಕೇಸ್ ಜನಪ್ರತಿನಿಧಿಗಳ ಪೀಠಕ್ಕೆ ವರ್ಗಾವಣೆ!