ಬೆಂಗಳೂರು: ಅಡುಗೆ ಅನಿಲ (ಎಲ್‌ಪಿಜಿ) ಸಿಲಿಂಡರ್ ಕೊಡಿಸುವುದಾಗಿ ಗ್ರಾಮಸ್ಥರಿಂದ ಹಣ ಪಡೆದು ವಂಚನೆ ಮಾಡಿದ್ದ ಮಂಡ್ಯದ ಮಹಿಳೆಯೊಬ್ಬರನ್ನು ದೋಷಿ ಎಂದು ತೀರ್ಮಾನಿಸಿ ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶ ಎತ್ತಿಹಿಡಿದ ಹೈಕೋರ್ಟ್, ತಪ್ಪಿತಸ್ಥರಿಗೆ ವಿನಾಯಿತಿ ತೋರಿದರೆ ಅಪರಾಧಿಗಳಿಗೆ ಮತ್ತಷ್ಟು ಉತ್ತೇಜನ ನೀಡಿದಂತಾಗುತ್ತದೆ ಎಂದು ತಿಳಿಸಿದೆ.
ಪ್ರಕರಣದಲ್ಲಿ ದೋಷಿ ಎಂದು ತೀರ್ಮಾನಿಸಿ, ಶಿಕ್ಷೆ ವಿಧಿಸಿದ್ದ ಶ್ರೀರಂಗಪಟ್ಟಣದ ಜೆಎಂಎಫ್ಸಿ ನ್ಯಾಯಾಲಯದ ಆದೇಶ ಹಾಗೂ ಅದನ್ನು ಎತ್ತಿಹಿಡಿದು ಮಂಡ್ಯದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹೊರಡಿಸಿದ್ದ ಆದೇಶ ರದ್ದು ಕೋರಿ ಬಾಬುರಾಯನಕೊಪ್ಪಲು ಗ್ರಾಮದ ಕೌಸಲ್ಯಾ ಹೈಕೋರ್ಟ್‌ಗೆ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಭಾಗಶಃ ಮಾನ್ಯ ಮಾಡಿರುವ ನ್ಯಾಯಮೂರ್ತಿ ರಾಜೇಂದ್ರ ಬದಾಮಿಕರ್ ಅವರಿದ್ದ ಪೀಠ, ಅರ್ಜಿದಾರ ಮಹಿಳೆಯ ಶಿಕ್ಷೆಯನ್ನು ರದ್ದುಪಡಿಸಲು ನಿರಾಕರಿಸಿದೆ.
ಆದರೆ, ವಿಚಾರಣಾ ನ್ಯಾಯಾಲಯಗಳ ಆದೇಶ ಮಾರ್ಪಾಡುಗೊಳಿಸಿದ್ದು, ಮಹಿಳೆಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ 2 ವರ್ಷ ಜೈಲು ಶಿಕ್ಷೆಯನ್ನು 6 ತಿಂಗಳಿಗೆ ಇಳಿಕೆ ಮಾಡಿ, ದಂಡದ ಮೊತ್ತವನ್ನು 10 ಸಾವಿರ ರೂಪಾಯಿಗಳಿಂದ 25 ಸಾವಿರ ರೂಪಾಯಿಗೆ ಹೆಚ್ಚಳ ಮಾಡಿದೆ.
ಅರ್ಜಿದಾರರು ವಂಚನೆ ಮಾಡಿರುವುದು ಸಾಬೀತಾಗಿದೆ. ಇಂತಹ ಪ್ರಕರಣಗಳಲ್ಲಿ 1958ರ ಪ್ರೊಬೇಷನ್ ಆಫ್ ಆಫ್ ಅಫೆಂಡರ್ಸ್ ಕಾಯ್ದೆಯಡಿ (ಅಪರಾಧಿಗಳನ್ನು ಸೂಕ್ತ ಎಚ್ಚರಿಕೆ ನೀಡಿ ಬಿಡುಗಡೆ ಮಾಡಲು ಅವಕಾಶ ಕಲ್ಪಿಸುವ ಕಾಯ್ದೆ) ತಪ್ಪಿತಸ್ಥರಿಗೆ ವಿನಾಯಿತಿ ತೋರಿದರೆ ಅದು ವಂಚನೆ ಎಸಗುವವರಿಗೆ ಮತ್ತಷ್ಟು ಉತ್ತೇಜನ ನೀಡಿದಂತಾಗುತ್ತದೆ ಎಂದು ತಿಳಿಸಿ, ಮಹಿಳೆಯ ಶಿಕ್ಷೆ ರದ್ದುಪಡಿಸಲು ನಿರಾಕರಿಸಿದೆ. ಪ್ರಕರಣವನ್ನು ಗಮನಿಸಿದರೆ, ಅರ್ಜಿದಾರರು 10 ಮಂದಿಯನ್ನು ವಂಚಿಸಿರುವುದು ದೃಢಪಟ್ಟಿದೆ. ಆದ್ದರಿಂದ, ಅವರು ಶಿಕ್ಷೆ ಅನುಭವಿಸಲೇಬೇಕು ಎಂದು ಹೈಕೋರ್ಟ್ ನ್ಯಾಯಪೀಠ ಹೇಳಿದೆ.
ಇದನ್ನೂ ಓದಿ : ಬಾಡಿಗೆ ಕರಾರು ಒಪ್ಪಂದ ನೋಂದಣಿ ಇಲ್ಲದಿದ್ದರೆ ರೆಂಟ್ ಹೆಚ್ಚಿಸುವಂತಿಲ್ಲ: ಹೈಕೋರ್ಟ್
ಪ್ರಕರಣದ ಹಿನ್ನೆಲೆ ಏನು ? : 2010ರಲ್ಲಿ ಮಂಡ್ಯದ ಸ್ತ್ರೀ ಶಕ್ತಿ ಸಂಘದಲ್ಲಿ ಕೆಲಸ ಮಾಡುತ್ತಿರುವುದಾಗಿ ಪರಿಚಯಿಸಿಕೊಂಡಿದ್ದ ಕೌಸಲ್ಯಾ, ಸಂಘದ ವತಿಯಿಂದ ಎಲ್‌ಪಿಜಿ ಸಿಲಿಂಡರ್‌ಗಳನ್ನು ಕಡಿಮೆ ದರದಲ್ಲಿ ಕೊಡಿಸುವುದಾಗಿ ತಿಳಿಸಿ ಗ್ರಾಮಸ್ಥರಿಂದ ಒಟ್ಟು 44 ಸಾವಿರ ರೂಪಾಯಿಗಳನ್ನು ಪಡೆದು ವಂಚಿಸಿದ್ದರು. ಈ ಸಂಬಂಧ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಕೌಸಲ್ಯಾ ಅವರನ್ನು ದೋಷಿ ಎಂದು ತೀರ್ಮಾನಿಸಿ, 2 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ 2013ರ ಅಕ್ಟೋಬರ್ 21ರಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಕೌಸಲ್ಯಾ ಸಲ್ಲಿಸಿದ್ದ ಮೇಲ್ಮನವಿಯನ್ನು ಸೆಷನ್ಸ್ ನ್ಯಾಯಾಲಯ 2014ರ ಆಗಸ್ಟ್ 1ರಂದು ವಜಾಗೊಳಿಸಿತ್ತು. ಹೀಗಾಗಿ ಶಿಕ್ಷೆ ರದ್ದು ಕೋರಿ ಕೌಸಲ್ಯಾ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ : ಬಾಡಿಗೆ ಕರಾರು ಒಪ್ಪಂದ ನೋಂದಣಿ ಇಲ್ಲದಿದ್ದರೆ ರೆಂಟ್ ಹೆಚ್ಚಿಸುವಂತಿಲ್ಲ: ಹೈಕೋರ್ಟ್