ಬೆಂಗಳೂರು: ಕೊರೊನಾ ವ್ಯಾಪಿಸುತ್ತಿರುವ ಸಂದರ್ಭದಲ್ಲಿ ಜೈಲಿನಲ್ಲಿ ಕೈದಿಗಳ ನಡುವೆ ಅಂತರ ಕಾಪಾಡುವುದು ಕಷ್ಟವಾಗುವ ಅಂಶವನ್ನು ಪರಿಗಣಿಸಿದ ಹೈಕೋರ್ಟ್, ಕೊಲೆ ಪ್ರಕರಣದ ಇಬ್ಬರು ಮಹಿಳಾ ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ಚಿಕ್ಕಬಳ್ಳಾಪುರದ ಅನಸೂಯಮ್ಮ ಮತ್ತು ದ್ಯಾವಮ್ಮ ಎಂಬುವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಪೀಠ ವಿಚಾರಣೆ ನಡೆಸಿತು.
ಕೆಲ ಕಾಲ ವಾದ ಆಲಿಸಿದ ಪೀಠ, ಆರೋಪಿಗಳು ಮಹಿಳೆಯರಾಗಿದ್ದು ಗೌರವಯುತ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ ಜೈಲಿನಲ್ಲಿರುವ ಸಹ ಕೈದಿಗಳ ಜತೆ ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವುದು ಕಷ್ಟವಾಗಬಹುದು ಎಂದು ಅಭಿಪ್ರಾಯಪಟ್ಟು ಅರ್ಜಿದಾರರಿಗೆ ಷರತ್ತುಬದ್ಧ ಜಾಮೀನು ನೀಡಿದೆ.
ಆರೋಪಿತ ಮಹಿಳೆಯರು ತಲಾ 50 ಸಾವಿರ ರೂ. ಮೊತ್ತದ ವೈಯಕ್ತಿಕ ಬಾಂಡ್ ನೀಡಬೇಕು. ಅಷ್ಟೇ ಮೊತ್ತಕ್ಕೆ ಇಬ್ಬರ ಶೂರಿಟಿ ಒದಗಿಸಬೇಕು. ಸಾಕ್ಷ್ಯ ನಾಶಪಡಿಸಬಾರದು, ಎರಡು ವಾರಕ್ಕೊಮ್ಮೆ ಪೊಲೀಸ್ ಠಾಣೆಗೆ ತೆರಳಿ ಸಹಿ ಮಾಡಬೇಕು. ನ್ಯಾಯಾಲಯದ ವಿಚಾರಣೆಗೆ ತಪ್ಪದೆ ಹಾಜರಾಗಬೇಕು ಎಂಬ ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿದೆ.
ಆರೋಪಿತ ಮಹಿಳೆಯರ ವಿರುದ್ಧ ಕೊಲೆ ಹಾಗೂ ಸಾಕ್ಷ್ಯ ನಾಶಪಡಿಸಿದ ಆರೋಪ ಪ್ರಕರಣ ದಾಖಲಿಸಲಾಗಿದೆ. ಕೊಲೆ ನಡೆದ ಸಂದರ್ಭದಲ್ಲಿ ಮನೆಯಲ್ಲಿನ ರಕ್ತದ ಕಲೆಗಳನ್ನು ತೊಳೆದು ಸಾಕ್ಷ್ಯ ನಾಶಪಡಿಸಿದ ಆರೋಪ ಇವರ ಮೇಲಿದೆ.