ಬೆಂಗಳೂರು: ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಲ್ಲಿಸಲಾದ ಬಿ ರಿಪೋರ್ಟ್‌ಗಳ ಬಗ್ಗೆ ಸಮರ್ಪಕ ಮಾಹಿತಿಯನ್ನು ನ್ಯಾಯಾಲಯಕ್ಕೆ ನೀಡಲಾಗಿಲ್ಲವೆಂದು ಹೈಕೋರ್ಟ್ ಎಸಿಬಿ ವಿರುದ್ದ ಮತ್ತೆ ಕಿಡಿಕಾರಿದೆ. ಎಸಿಬಿಯ ಬಿ ರಿಪೋರ್ಟ್ ಸಲ್ಲಿಕೆ ಬಗ್ಗೆ ಗುರುವಾರ ನಡೆದ ವಿಚಾರಣೆ ವೇಳೆ ನ್ಯಾ.ಎಚ್.ಪಿ.ಸಂದೇಶ್ ಅವರಿದ್ದ ಏಕಸದಸ್ಯ ಪೀಠವು ಬಿ ರಿಪೋರ್ಟ್‌ಗಳ ಬಗೆಗಿನ ಮಾಹಿತಿಯನ್ನು ಸಮರ್ಪಕವಾಗಿ ನೀಡಲಾಗಿಲ್ಲ. ಸಹಿ ಮಾಡದೆ ಇರುವ ವರದಿ ಸಲ್ಲಿಸಿದ ಎಸಿಬಿಯ ಕ್ರಮದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
ನ್ಯಾಯಾಲಯದ ಆದೇಶದಂತೆ ಎಸಿಬಿ ಪರ ವಕೀಲ ಮನಮೋಹನ್ ಅವರು 2016 ರಿಂದ 2019 ರವರೆಗಿನ ಬಿ ರಿಪೋರ್ಟ್ ಗಳ ಮಾಹಿತಿ ಸಲ್ಲಿಸಿದರು. ಇವುಗಳನ್ನು ಪರಿಶೀಲಿಸಿದ ನ್ಯಾಯಮೂರ್ತಿಗಳು ಈ ಕಡತಗಳು ಸರಿಯಾಗಿಲ್ಲ. ಸಂಬಂಧಪಟ್ಟ ಅಧಿಕಾರಿಗಳ ಸಹಿಯೇ ಇಲ್ಲವೆಂದು ಆಕ್ರೋಶದಿಂದ ನುಡಿದರು.
ಬಿ ರಿಪೋರ್ಟ್‌ಗಳ ಬಗೆಗಿನ ವರದಿ ಸಂಪೂರ್ಣವಾಗಿ ಸತ್ಯದಿಂದ ಕೂಡಿಲ್ಲ. ನೀವು ಈತರಹ ಆಟ ಆಡುತ್ತೀರೆಂದು ತಿಳಿದೇ ಕೆಲ ಮಾಹಿತಿ ಪಡೆದಿರುವೆ. ಈ ವರ್ಷ ಎಸಿಬಿ ಸಲ್ಲಿಸಿದ ಎಲ್ಲಾ ಬಿ ರಿಪೋರ್ಟ್‌ಗಳ ವಿವರ ಇದರಲ್ಲಿ ಇಲ್ಲ. ಮಾರ್ಚ್, ಜೂನ್ ತಿಂಗಳ ಬಿ ರಿಪೋರ್ಟ್ ಬಗ್ಗೆ ಮಾತ್ರ ಮಾಹಿತಿ ಒದಗಿಸಿದ್ದೀರಿ. ಎಸಿಬಿಯು 819 ಸರ್ಚ್ ವಾರೆಂಟ್‌ಗಳನ್ನು ಪಡೆದಿತ್ತು. 28 ಸರ್ಚ್ ವಾರೆಂಟ್ ಜಾರಿಗೊಳಿಸಲು ಸಾಧ್ಯವಾಗಿಲ್ಲ.
ನ್ಯಾಯಾಲಯ ಆದೇಶಿಸಿದ ನಂತರ ಭೂ ವ್ಯಾಜ್ಯ ಲಂಚ ಪ್ರಕರಣದಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿಯನ್ನು ಆರೋಪಿಯನ್ನಾಗಿ ಪ್ರಸ್ತಾಪಿಸಲಾಗಿದೆ. ನಂತರ ಈಗ ದಾಳಿ ಮಾಡಿದ್ದೀರಿ. ಮೊದಲೇ ಏಕೆ ಈ ದಾಳಿ ನಡೆಸಲಾಗಲಿಲ್ಲ ಎಂದು ಎಸಿಬಿ ಪರ ವಕೀಲರನ್ನು ನ್ಯಾಯಮೂರ್ತಿಗಳು ಪ್ರಶ್ನಿಸಿದರು.
ಈ ವೇಳೆ ಎಸಿಬಿ, ಎಡಿಜಿಪಿ ನಡೆ ಕುರಿತು ಪ್ರಶ್ನಿಸಿದ್ದಾರೆ. ಎಸಿಬಿಯು ಎಡಿಜಿಪಿಯನ್ನು ರಕ್ಷಿಸಿಕೊಳ್ಳುವ ಉದ್ದೇಶದಿಂದಲೇ ಮಾಹಿತಿ ನೀಡಿಲ್ಲ. ಎಡಿಜಿಪಿ ವಿರುದ್ಧ ಸಂಶಯ ಮೂಡಲೂ ಹಲವಾರು ಕಾರಣಗಳಿವೆ. ಎಸಿಬಿ ಎಡಿಜಿಪಿಗೆ ಆತ್ಮಸಾಕ್ಷಿಯನ್ನ ಕೇಳಿಕೊಳ್ಳಲು ಹೇಳಿ ಎಂದ ನ್ಯಾಯಮೂರ್ತಿಗಳು ಎಡಿಜಿಪಿ ಪರ ವಕೀಲರಿಗೆ ಚಾಟಿ ಬೀಸಿದ್ದಾರೆ. ಎಸಿಬಿ ಸಲ್ಲಿಸಿರುವ ಬಿ ರಿಪೋರ್ಟ್‌ಗಳಮಾಹಿತಿಯನ್ನು ನ್ಯಾಯಪೀಠಕ್ಕೆ ಸಲ್ಲಿಸುವಂತೆ ಹೈಕೋರ್ಟ್ ರಿಜಿಸ್ಟ್ರಾರ್ ಅವರಿಗೆ ಸೂಚಿಸಿ ವಿಚಾರಣೆಯನ್ನು ಜುಲೈ 11ಕ್ಕೆ ಮುಂದೂಡಲಾಗಿದೆ.
ಇದನ್ನೂ ಓದಿ: ಪ್ರಕರಣ ದಾಖಲಿಸಿಕೊಳ್ಳದೇ ಆರೋಪಿಗಳಿಂದ ಹಣ ಪಡೆದ ಆರೋಪ: ಇನ್ಸ್ಪೆಕ್ಟರ್ , ಪಿಎಸ್ಐ ಸಸ್ಪೆಂಡ್