ಬೆಂಗಳೂರು : ರಾಜ್ಯದಲ್ಲಿ ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ಹಿಜಾಬ್ ವಿವಾದದ ಬಗ್ಗೆ ಕರ್ನಾಟಕ ಹೈಕೋರ್ಟ್ನ ಮಹತ್ವದ ತೀರ್ಪು ಹೊರಬಿದ್ದಿದೆ. ತರಗತಿಗಳಲ್ಲಿ ಹಿಜಾಬ್ ಧರಿಸುವ ಪರವಾಗಿ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಸಮವಸ್ತ್ರ ಕಡ್ಡಾಯಗೊಳಿಸುವ ರಾಜ್ಯ ಸರ್ಕಾರದ ಆದೇಶವನ್ನು ಉಚ್ಛ ನ್ಯಾಯಾಲಯ ಎತ್ತಿ ಹಿಡಿದಿದೆ.
ಅಲ್ಲದೇ, ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದಲ್ಲಿ ಅಗತ್ಯತೆಯೂ ಅಲ್ಲ ಎಂದು ಹೈಕೋರ್ಟ್ ಹೇಳಿದೆ. ಈ ಮೂಲಕ ರಾಜ್ಯದಲ್ಲಿ ಎದ್ದಿದ್ದ ಹಿಜಾಬ್ ವಿವಾದಕ್ಕೆ ನ್ಯಾಯಾಲಯ ತೆರೆ ಎಳೆದಿದೆ.
ಕಳೆದ ಜನವರಿ ತಿಂಗಳಿಂದಲೂ ಹಿಜಾಬ್ ಪರ ಮತ್ತು ವಿರೋಧ ಚರ್ಚೆಗಳು ನಡೆಯುತ್ತಿದ್ದವು. ಹಿಜಾಬ್ ಧರಿಸುವುದಕ್ಕೆ ಪ್ರತಿಯಾಗಿ ಕೇಸರಿ ಶಾಲು ಧರಿಸಿಕೊಂಡು ಬರುವ ಮೂಲಕ ವಿವಾದ ಮತ್ತಷ್ಟು ಕಾವು ಪಡೆದಿತ್ತು. ಉಡುಪಿಯ ಸರ್ಕಾರಿ ಮಹಿಳಾ ಪದವಿಪೂರ್ವ ಕಾಲೇಜಿನಿಂದ ಆರಂಭವಾಗಿದ್ದ ಹಿಜಾಬ್ ವಿವಾದ ದೇಶಾದ್ಯಂತ ವ್ಯಾಪಿಸಿತ್ತು.
ಉಡುಪಿ ಸರ್ಕಾರಿ ಕಾಲೇಜಿನಲ್ಲಿ ತರಗತಿಗೆ ಹಿಜಾಬ್ ಧರಿಸಿ ಹಾಜರಾಗುವುದಕ್ಕೆ ನಿರ್ಬಂಧಿಸಿರುವ ಕ್ರಮ ಪ್ರಶ್ನಿಸಿ ಆರು ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದರು. ಅಲ್ಲಿಂದ ಆರಂಭವಾಗಿದ್ದ ಈ ವಿವಾದದ ಹಿನ್ನೆಲೆಯಲ್ಲಿ ಸಮವಸ್ತ್ರ ಕಡ್ಡಾಯಗೊಳಿಸುವ ಸಂಬಂಧ ಫೆ.5ರಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.
ಅಲ್ಲದೇ, ಈ ವಿವಾದ ಹೈಕೋರ್ಟ್ ಮೆಟ್ಟಿಲೇರಿತ್ತು. ಹಿಜಾಬ್ ನಿರ್ಬಂಧಿಸಿದನ್ನು ಪ್ರಶ್ನಿಸಿ ವಿದ್ಯಾರ್ಥಿನಿಯರು ಸೇರಿದಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದ್ದವು. ಆರಂಭದಲ್ಲಿ ಈ ವಿವಾದ ವಿಚಾರಣೆಯನ್ನು ಏಕಸದಸ್ಯ ಪೀಠ ನಡೆಸುತ್ತಿತ್ತು.
ನಂತರ ವಿಸ್ತೃತ ಪೀಠಕ್ಕೆ ವಿಚಾರಣೆಯನ್ನು ವರ್ಗಾವಣೆ ಮಾಡಲಾಗಿತ್ತು. ಮುಖ್ಯನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿಗಳಾದ ಕೃಷ್ಣ ದೀಕ್ಷಿತ್ ಮತ್ತು ಜೆ ಎಂ ಖಾಜಿ ಅವರನ್ನೊಳಗೊಂಡ ನ್ಯಾಯಪೀಠವು ಫೆ.25ಕ್ಕೆ ವಿಚಾರಣೆ ಮುಗಿಸಿ ತೀರ್ಪು ಕಾಯ್ದಿರಿಸಿತ್ತು.