ಬೆಂಗಳೂರು : ಕ್ಯಾನ್ಸ್‌ರ್‌ನಿಂದ ಮೂವರು ಮತ್ತು ಮಾನಸಿಕ ರೋಗದಿಂದ ಒಬ್ಬ ವ್ಯಕ್ತಿ ಬಳಲುತ್ತಿದ್ದ ಕುಟುಂಬದ ನೆರವಿಗೆ ಧಾವಿಸಿರುವ ಹೈಕೋರ್ಟ್, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ(ಕೆಐಎಡಿಬಿ)ಯಿಂದ ಅಧಿಸೂಚನೆಗೆ ಒಳಗಾಗಿದ್ದ ಒಟ್ಟು 2.3 ಎಕರೆ ಜಮೀನಿನಲ್ಲಿ ಶೇ.50 ರಷ್ಟನ್ನು ಷರತ್ತಿನ ಮೇಲೆ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟಿದೆ. ಮತ್ತಿಕೆರೆಯ ನಿವಾಸಿಗಳಾದ ಟಿ.ಜಿ ಶಾಂತಮ್ಮ ಮತ್ತು ಅವರ ನಾಲ್ಕು ಜನ ಮಕ್ಕಳು (ಒಬ್ಬರು ಮಗಳು) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಂದ ನ್ಯಾಯಪೀಠ ಈ ಆದೇಶ ನೀಡಿದೆ.
ಜೀವನೋಪಾಯಕ್ಕಾಗಿ ಉಳಿಸಿಕೊಂಡ ಜಮೀನನ್ನು ಮಾರಣಾಂತಿಕ ಕಾಯಿಲೆ ಇದ್ದಾಗಲೂ ವೈದ್ಯಕೀಯ ಚಿಕಿತ್ಸೆಗೆ ಹಣಕ್ಕಾಗಿ ಸಂಗ್ರಹಿಸಲು ಅವಕಾಶ ಇಲ್ಲ ಎನ್ನುವುದಾದರೆ, ಅದು ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದ ರೋಗಿಗೆ ಆಮ್ಲಜನಕದ ಮಾಸ್ಕ್ ತೆಗೆದು ಹಾಕಿದಂತಾಗಲಿದೆ. ಈ ಪ್ರಕರಣದಲ್ಲಿ ಅರ್ಜಿದಾರರ ಜಮೀನು ಸ್ವಾಧೀನಕ್ಕೆ ಗುರುತಿಸಿದ್ದರೂ, ಪ್ರಕ್ರಿಯೆ ಪೂರ್ಣಗೊಳಿಸಲು ಸಾಕಷ್ಟು ಸಮಯ ತೆಗೆದುಕೊಳ್ಳಲಿದೆ. ಅಲ್ಲದೆ, ಒಂದು ಕುಟುಂಬದ ಜೀವವು ಅವರ ಆಸ್ತಿಯನ್ನು ಅವಲಂಬಿಸಿದೆ. ಆ ಆಸ್ತಿ ಅಗತ್ಯವಿದ್ದಲ್ಲಿ ಬಳಕೆ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗಬೇಕು. ಈಗಾಗಿ ಷರತ್ತಿನ ಮೇಲೆ ಶೇ.50 ರಷ್ಟು ಜಮೀನು ಇತರರಿಗೆ ಮಾರಾಟ ಮಾಡಬಹುದು ಎಂದು ಪೀಠ ತಿಳಿಸಿದೆ.
ಷರತ್ತುಗಳು: ಅರ್ಜಿದಾರರು ಜಮೀನು ಖರೀದಿ ಮಾಡುವವರ ವಿವರವನ್ನು ಮತ್ತು ಮಾರಾಟ ಮಾಡಿರುವ ವಿಚಾರವನ್ನು ಸರ್ಕಾರ ಮತ್ತು ಕೆಐಎಡಿಬಿಗೆ ಮಾಹಿತಿ ನೀಡಬೇಕು. ಕೆಐಎಡಿಬಿ ಯಾವುದೇ ಸಂದರ್ಭದಲ್ಲಿ ಸ್ವಾಧೀನಕ್ಕೆ ಮುಂದಾದರೂ ಅಡ್ಡಿ ಪಡಿಸಬಾರದು ಎಂದು ಖರೀದಿದಾರರಿಗೆ ತಿಳಿಸಿರಬೇಕು. ಜತೆಗೆ, ಈ ಸಂಬಂಧ ಪ್ರಮಾಣವನ್ನು ಸಲ್ಲಿಸಬೇಕು ಎಂದು ನ್ಯಾಯಪೀಠ ತಿಳಿಸಿದೆ.
ಪ್ರಕರಣದ ಹಿನ್ನೆಲೆ ಏನು ?: ಅರ್ಜಿದಾರರಾದ ಶಾಂತಮ್ಮ ಮತ್ತು ಅವರ ಇಬ್ಬರು ಪುತ್ರರು ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು, ಮತ್ತೊಬ್ಬ ಮಗ ಮಾನಸಿಕ ರೋಗಿಯಾಗಿದ್ದಾರೆ. ಅವರ ಮಗಳು ಮತ್ತು ಅಳಿಯನ ನೆರವಿನಿಂದ ಕುಟುಂಬದ ಎಲ್ಲ ಸದಸ್ಯರು ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆಗಾಗಿ ಸುಮಾರು 50 ಲಕ್ಷ ರೂಪಾಯಿಗಳನ್ನು ಸಾಲ ಮಾಡಿಕೊಂಡಿದ್ದರು.
ಅರ್ಜಿದಾರರಿಗೆ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ಹುಲಿಕುಂಟೆ ಗ್ರಾಮದ 1.6 ಕೋಟಿ ಬೆಲೆಬಾಳುವ 2.3 ಎಕರೆ ಜಮೀನಿದೆ. ಈ ಜಮೀನು ಸ್ವಾಧೀನ ಪಡಿಸಿಕೊಳ್ಳಲು ಕೆಐಎಡಿಬಿ 2021 ರಲ್ಲಿ ಅಧಿಸೂಚನೆ ಹೊರಡಿಸಿದೆ. ಈವರೆಗೂ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಇದರಿಂದ ಜಮೀನನ್ನು ಅಡಮಾನವಿಟ್ಟು ಪಡೆದ ಸಾಲ ಹಿಂದಿರುಗಿಸಲು ಮುಂದಾದರೆ, ಸಾಧ್ಯವಾಗುತ್ತಿಲ್ಲ. ಇದಕ್ಕೆ ಸಂಬಂಧಿಸಿದಂತೆ ಶೇ.50ರಷ್ಟು ಪರಿಹಾರದ ಹಣ ಮುಂಗಡವಾಗಿ ಪಾವತಿಸಿ ಎಂದು ಮನವಿ ಮಾಡಿದರು. ಕೆಐಎಡಿಬಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಹೀಗಾಗಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರ ಕುಟುಂಬಕ್ಕೆ ಚಿಕಿತ್ಸೆ ಪಡೆದುಕೊಳ್ಳಲು 53 ಲಕ್ಷ ರೂಪಾಯಿಗಳ ಸಾಲ ಮಾಡಿಕೊಂಡಿದ್ದಾರೆ. ಕೆಐಎಡಿಬಿ ಸ್ವಾಧೀನಕ್ಕೆ ಜಮೀನನ್ನು ಗುರುತಿಸಿದ್ದರೂ, ಪ್ರಕ್ರಿಯೆ ಪೂರ್ಣಗೊಳಿಸಲು ವಿಳಂಬವಾಗಲಿದೆ. ಚಿಕಿತ್ಸೆ ಪಡೆಯಲು ಮಧ್ಯಂತರ ಪರಿಹಾರ ಬಿಡುಗಡೆಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಅರ್ಜಿದಾರರ ಜಮೀನ ಅನ್ನು ಇತರರಿಗೆ ಮಾರಾಟಕ್ಕೆ ಅವಕಾಶ ನೀಡಬೇಕು ಎಂದು ಅವರು ನ್ಯಾಯಪೀಠಕ್ಕೆ ಮನವಿ ಮಾಡಿದ್ದರು.
ಓದಿ: ಅಮೆರಿಕ ಸಂವಿಧಾನದಲ್ಲಿ ವಿದೇಶಿ ಪ್ರಜೆಗಳಿಗೆ ನ್ಯಾಯಾಂಗದ ಮೊರೆ ಹೋಗಲು ಅವಕಾಶವಿದೆ: ಟ್ವಿಟರ್