ಬೆಂಗಳೂರು: ಬಿಜೆಪಿ ವಿರುದ್ಧ ಸರ್ಕಾರ ಮತ್ತೊಂದು ತನಿಖಾಸ್ತ್ರ ಬಿಟ್ಟಿದೆ. ಕೋವಿಡ್ ಅಕ್ರಮಗಳ ತನಿಖೆಗೆ ನಿವೃತ್ತ ನ್ಯಾಯಾಧೀಶ ಮೈಕೆಲ್ ಡಿ ಕುನ್ಹಾ ನೇತೃತ್ವದಲ್ಲಿ ವಿಚಾರಣಾ ಆಯೋಗ ರಚಿಸಿ ಸರ್ಕಾರ ಆದೇಶಿಸಿದೆ. ಈ ಸಂಬಂಧ ಮೂರು ತಿಂಗಳೊಳಗೆ ವರದಿ ಕೊಡಲು ಆಯೋಗಕ್ಕೆ ಸೂಚನೆ ನೀಡಿ ಒಳಾಡಳಿತ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ಈ ಮೊದಲು ಕೋವಿಡ್ ಕಾಲದ ಅಕ್ರಮಗಳ ಬಗ್ಗೆ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಹಲವು ಆರೋಪಗಳನ್ನು ಮಾಡಿತ್ತು. ಅಂದು ಪ್ರತಿಪಕ್ಷವಾಗಿ ಕಾಂಗ್ರೆಸ್, ಬಿಜೆಪಿ ಸರ್ಕಾರದ ವಿರುದ್ಧ ಹೋರಾಟ ಮಾಡಿತ್ತು. ಇದೀಗ ಲೆಕ್ಕಪತ್ರಗಳ ಸಮಿತಿ ಮಾಡಿದ್ದ ಆರೋಪಗಳ ತನಿಖೆ ನಡೆಸುವಂತೆ ಆಯೋಗಕ್ಕೆ ಸೂಚನೆ ನೀಡಲಾಗಿದೆ. ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣದ ಬಗ್ಗೆಯೂ ವಿಚಾರಣಾ ಆಯೋಗ ತನಿಖೆ ನಡೆಸಲಿದೆ. ಜೊತೆಗೆ ಔಷಧ ಖರೀದಿ ಅಕ್ರಮ ಆರೋಪ, ವೈದ್ಯಕೀಯ ಉಪಕರಣಗಳ ಖರೀದಿ ಅಕ್ರಮ ಆರೋಪ, ಬೆಡ್ ಹಂಚಿಕೆ ಅಕ್ರಮ ಆರೋಪಗಳ ಬಗ್ಗೆ ತನಿಖೆ ಮಾಡಲಿದೆ.
40% ಕಮಿಷನ್ ಆರೋಪ ತನಿಖೆಗೆ ಆಯೋಗ ರಚನೆ: ಇನ್ನು ಬಿಜೆಪಿ ಸರ್ಕಾರದ ಅವಧಿಯ ಶೇ.40 ಕಮಿಷನ್ ಆರೋಪ ಪ್ರಕರಣ ತನಿಖೆಗೆ ಈ ಹಿಂದೆ ತನಿಖಾ ಸಮಿತಿ ರಚಿಸಿ ಸರ್ಕಾರ ಆದೇಶಿಸಿತ್ತು. ಇದೀಗ ಸಮಿತಿ ರಚನೆಯ ಆದೇಶ ರದ್ದು ಮಾಡಿ ನ್ಯಾ. ನಾಗಮೋಹನ್ ದಾಸ್ ನೇತೃತ್ವದಲ್ಲಿ ವಿಚಾರಣಾ ಆಯೋಗ ರಚಿಸಿ ಒಳಾಡಳಿತ ಇಲಾಖೆ ಆದೇಶ ಹೊರಡಿಸಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಾದ ಕಾಮಗಾರಿಗಳು, ಟೆಂಡರ್, ಪ್ಯಾಕೇಜ್ಗಳು, ಪುನರ್ ಅಂದಾಜು, ಹೆಚ್ಚುವರಿ ಅಂದಾಜು, ಬಾಕಿ ಬಿಡುಗಡೆ ಬಗ್ಗೆ ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ಮಾಡಿದ ಆರೋಪಗಳ ತನಿಖೆಗೆ ನ್ಯಾ. ನಾಗಮೋಹನ್ ದಾಸ್ ನೇತೃತ್ವದ ವಿಚಾರಣಾ ಆಯೋಗದಿಂದ ಪರಿಶೀಲನೆ ನಡೆಯಲಿದೆ.
ಯಾವೆಲ್ಲಾ ಅಂಶಗಳ ತನಿಖೆ:
- ಯೋಜನೆ, ಕಾಮಗಾರಿಗಳಿಗೆ ನಿಯಮಾನುಸಾರ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆಯೇ?
- ಅನುಷ್ಠಾನಗೊಳಿಸಿದ ಕಾಮಗಾರಿ, ಯೋಜನೆಗಳ ಗುಣಮಟ್ಟ
- ಕಾಮಗಾರಿಗಳ ಅಂದಾಜುಗಳನ್ನು ಪ್ರಚಲಿತ ಅನುಸೂಚಿ ದರಗಳ (ಎಸ್‌ಆರ್) ಅನುಸಾರ ತಯಾರಿಸಲಾಗಿದೆಯೇ?
- ಕಾಮಗಾರಿಗಳ ಅಂದಾಜಿನಲ್ಲಿರುವ ಪ್ರಮಾಣ ವಾಸ್ತವಿಕವಾಗಿದೆಯೇ? ಕೃತಕವಾಗಿ ಹೆಚ್ಚಿಸಲಾಗಿದೆಯೇ? ಹೆಚ್ಚಿಸಿದ್ದರೆ ಅವುಗಳ ಪ್ರಮಾಣ ಮತ್ತು ಹಣಕಾಸಿನ ಬದ್ಧತೆಯ ಜೊತೆಗೆ ಯಾವ ಹಂತದಲ್ಲಿದೆ ಎಂಬುದನ್ನು ಪರೀಕ್ಷಿಸುವುದು
- ಈ ಕಾಮಗಾರಿಗಳ ಅನುಷ್ಠಾನದ ಸಂದರ್ಭದಲ್ಲಿ ಉಂಟಾಗಿರುವ ಹೆಚ್ಚುವರಿ ವ್ಯತ್ಯಾಸದ ಅನಿವಾರ್ಯ ಮತ್ತು ಅಗತ್ಯ. ಅನಿವಾರ್ಯವಾಗಿದ್ದರೆ ಮೂಲ ಅಂದಾಜಿನಲ್ಲಿ ಕೈಬಿಡಲು ಕಾರಣಗಳು ಮತ್ತು ಅವುಗಳಿಗೆ ಸಕ್ಷಮ ಪ್ರಾಧಿಕಾರವು ಅನುಮೋದನೆ ನೀಡಿರುವ ಬಗ್ಗೆ
- ಯಾವುದಾದರೂ ಕಾಮಗಾರಿಗಳನ್ನು ನಿರ್ವಹಿಸದೇ ಬಿಲ್ ಮಾಡಲಾಗಿದೆಯೇ? ಅನುಷ್ಠಾನದ ಕಾಮಗಾರಿಗಳ ಪ್ರಮಾಣಕ್ಕಿಂತ ಹೆಚ್ಚುವರಿಯಾಗಿ ಬಿಲ್ ಪಾವತಿಸಲಾಗಿದೆಯೇ?
- ಕಾಮಗಾರಿಗಳ ಟೆಂಡರ್‌ಗಳನ್ನು ಕರೆಯುವಾಗ ಕೆಲವೇ ಗುತ್ತಿಗೆದಾರರಿಗೆ ಅನುಕೂಲ ಆಗುವಂತೆ ಹಾಗೂ ಉಳಿದ ಗುತ್ತಿಗೆದಾರರು ಟೆಂಡರ್ ಪ್ರಕ್ರಿಯೆಗಳಲ್ಲಿ ಭಾಗವಹಿಸದಂತೆ ಷರತ್ತು ರೂಪಿಸಲಾಗಿತ್ತೇ?
- ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ, ಅನುಷ್ಠಾನ ಪ್ರಕ್ರಿಯೆಗಳಲ್ಲಿ ಉಂಟಾಗಿರಬಹುದಾದ ಇತರ ಯಾವುದಾದರೂ ಲೋಪದೋಷಗಳ ಬಗ್ಗೆ ಸಮಿತಿ ತನಿಖೆ ನಡೆಸಲಿದೆ.
ಇದನ್ನೂ ಓದಿ: ಸರ್ಕಾರಕ್ಕೆ ನೂರು ದಿನದ ಸಂಭ್ರಮ: ಪಂಚ ಗ್ಯಾರಂಟಿಗಳ ಅನುಷ್ಠಾನದ ಜೊತೆ ಪಂಚ ಹಗರಣಗಳ ತನಿಖೆಗೆ ಸಮಿತಿ ರಚಿಸಿ ಬಿಜೆಪಿಗೆ ಟಕ್ಕರ್