ಬೆಂಗಳೂರು: ನೀವೇನಾದರೂ ಸಂಚಾರ ನಿಯಮ ಉಲ್ಲಂಘಿಸಿದ್ದೀರಾ ? ಸಾವಿರಾರು ರೂಪಾಯಿ ದಂಡ ಪಾವತಿಸದೇ ಬಾಕಿ ಇಟ್ಟುಕೊಂಡಿದ್ದೀರಾ ? ಹಾಗಾದರೆ ಯೋಚಿಸಬೇಕಾದ ಅಗತ್ಯವಿಲ್ಲ. ಯಾಕೆಂದರೆ ಅಂತಹ ವಾಹನ ಸವಾರರಿಗೆ ಸರ್ಕಾರ ಒಳ್ಳೆಯ ಆಫರ್ ನೀಡಿದೆ. ಹೌದು, ಸಂಚಾರಿ ನಿಯಮ ಉಲ್ಲಂಘಿಸಿ ದಂಡದ ಮೊತ್ತವನ್ನು ಕಟ್ಟದೆ ಬಾಕಿ ಉಳಿಸಿಕೊಂಡಿರುವ ವಾಹನ ಸವಾರರಿಗೆ ಸರ್ಕಾರಿ ರಿಯಾಯಿತಿ ಘೋಷಣೆ ಮಾಡಿದೆ.
ಬಾಕಿ ಉಳಿಸಿಕೊಂಡ ಸವಾರರಿಗೆ ರಿಯಾಯಿತಿ: ಬಾಕಿ ಇರುವ ಸಂಚಾರ ನಿಯಮ ಉಲ್ಲಂಘನೆ ದಂಡದ ಮೊತ್ತವನ್ನು ಫೆ.11ರ ಒಳಗೆ ಪಾವತಿಸಿದರೇ ಶೇ.50 ವಿನಾಯಿತಿ ನೀಡುವುದಾಗಿ ಗುರುವಾರ ಸರ್ಕಾರ ಆದೇಶ ಹೊರಡಿಸಿದೆ. ಸುಮಾರು 1300 ಕೋಟಿ ರೂ.ಗೂ ಅಧಿಕ ದಂಡದ ಮೊತ್ತ ಬಾಕಿ ಇರುವ ಬಗ್ಗೆ ಕಳವಳ ವ್ಯಕ್ತಪಡಿಸಿ ಹಾಗೂ ಇದರಿಂದ ಜನರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಕಳೆದ ಜ.27ರಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರೂ ಆಗಿರುವ ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಬಿ.ವೀರಪ್ಪ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಸಮಗ್ರ ಚರ್ಚೆ ನಡೆಸಲಾಗಿತ್ತು.
ನಂತರ ಕಾನೂನು ಸೇವೆಗಳ ಪ್ರಾಧಿಕಾರವು ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಇದಕ್ಕೆ ರಾಜ್ಯ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಗ್ರೀನ್ ಸಿಗ್ನಲ್ ನೀಡಿದ್ದು, ಅದರಂತೆ ಶೇ.50ರಷ್ಟು ರಿಯಾಯಿತಿ ನೀಡಲು ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ದಂಡದ ಮೊತ್ತ ಬಾಕಿ ಉಳಿಸಿಕೊಂಡಿರುವವರು ಫೆ.11ರೊಳಗೆ ದಂಡ ಕಟ್ಟಿದರೆ ಅಂತಹವರು ರಿಯಾಯಿತಿ ಪಡೆಯಬಹುದಾಗಿದೆ.
ಫೆ.11ರ ರಾಜ್ಯವ್ಯಾಪಿ ರಾಷ್ಟ್ರೀಯ ಲೋಕ ಅದಾಲತ್ ಹಿನ್ನೆಲೆಯಲ್ಲಿ ಈ ರಿಯಾಯಿತಿ ನೀಡಿ ಆದೇಶ ಹೊರಡಿಸಲಾಗಿದೆ. ನಿಗದಿತ ದಿನಾಂಕದಂದು ಬಾಕಿ ಪ್ರಕರಣಗಳನ್ನು ಇತ್ಯರ್ಥ ಮಾಡಿಕೊಳ್ಳುವರಿಗೆ ಮಾತ್ರ ಇದು ಅನ್ವಯ ಆಗಲಿದೆ. ನಂತರ ಬಂದವರಿಗೆ ವಿನಾಯಿತಿ ಸಿಗುವುದಿಲ್ಲ ಎಂದು ಸಾರಿಗೆ ಇಲಾಖೆ ಸ್ಪಷ್ಟಪಡಿಸಿದೆ.
ಬೆಂಗಳೂರಲ್ಲಿ 2 ಕೋಟಿ ಪ್ರಕರಣಗಳು ಬಾಕಿ: ಬೆಂಗಳೂರು ನಗರ ಸಂಚಾರ ಪೊಲೀಸ್ ವಿಭಾಗದಲ್ಲಿ ಹಲವು ವರ್ಷಗಳಿಂದ ಅಂದಾಜು 2 ಕೋಟಿ ಪ್ರಕರಣಗಳು ಬಾಕಿ ಉಳಿದಿವೆ. ರಾಜ್ಯ ಸರ್ಕಾರ ಕೊಟ್ಟಿರುವ ಅವಕಾಶವನ್ನು ಜನರು ಸದುಪಯೋಗ ಪಡಿಸಿಕೊಳ್ಳಬೇಕು. ಆನ್‌ಲೈನ್ ಅಥವಾ ಸಂಚಾರ ಪೊಲೀಸ್ ಠಾಣೆಯಲ್ಲಿ ದಂಡದ ಮೊತ್ತವನ್ನು ಪಾವತಿಸಿ ವಿನಾಯಿತಿ ಪಡೆಯವಂತೆ ಪೊಲೀಸ್ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಸ್ಮಶಾನಕ್ಕೆ ನಿಗದಿ ಪಡಿಸಿದ್ದ ಗೋಮಾಳ ಜಮೀನು ಕೈಬಿಟ್ಟ ರಾಮನಗರ ಜಿಲ್ಲಾಡಳಿತ: ರಾಮನಗರ ಜಿಲ್ಲೆ ಮಾಗಡಿಯ ಸೋಲುರ ಹೋಬಳಿ ಮೊಟಗೊಂಡನಹಳ್ಳಿ ಗ್ರಾಮದಲ್ಲಿ ಗೋಮಾಳದಲ್ಲಿ ರುದ್ರಭೂಮಿ ಸ್ಥಾಪಿಸುವ ನಿರ್ಧಾರವನ್ನು ಸ್ಥಳೀಯ ಜಿಲ್ಲಾಡಳಿತ ಹಿಂಪಡೆದುಕೊಂಡಿದೆ. ಇದೇ ಗ್ರಾಮದ ರಾಮಮೂರ್ತಿ ಹಾಗೂ ಮುದುಗೆರೆಯಪ್ಪ ಅವರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಳೆ ಮತ್ತು ನ್ಯಾಯಮೂರ್ತಿ ಆಶೋಕ್ ಎಸ್. ಕಿಣಗಿ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿ ಜಿಲ್ಲಾಡಳಿತಕ್ಕೆ ನೋಟಿಸ್ ಜಾರಿ ಮಾಡಿತ್ತು.
ಇದಕ್ಕೆ ಪ್ರತಿಕ್ರಿಯಿಸಿದ್ದ ಜಿಲ್ಲಾಡಳಿತ, ಸ್ಥಳೀಯ ಗ್ರಾಪಂ ಶಿಫಾರಸಿನ ಮೇರೆಗೆ ಗ್ರಾಮದ ಸರ್ವೇ ನಂ.23ರ 2ಎಕರೆ 23ಗುಂಟೆ ಗೋಮಾಳ ಜಾಗವನ್ನು ಸ್ಮಶಾನಕ್ಕಾಗಿ ಮೀಸಲಿಡಲು ಜಿಲ್ಲಾಡಳಿತ ನಿರ್ಧರಿಸಿತ್ತು. ಆದರೆ, ಈ ಬಗ್ಗೆ ಸಾಕಷ್ಟು ಆಕ್ಷೇಪಣಾ ಅರ್ಜಿ ಬಂದವು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಹಿಂದಿನ ನಿರ್ಧಾರ ಕೈಬಿಟ್ಟು ಸ್ಮಶಾನಕ್ಕಾಗಿ ಬೇರೆ ಸ್ಥಳವನ್ನು ನಿಗದಿಪಡಿಸಲು ತೀರ್ಮಾನಿಸಿದ್ದಾರೆ ಎಂದು ನ್ಯಾಯಪೀಠಕ್ಕೆ ತಿಳಿಸಿತ್ತು. ಈ ಅಂಶವನ್ನು ಪರಿಗಣಸಿರುವ ನ್ಯಾಯಪೀಠ ಅರ್ಜಿಯನ್ನು ಇತ್ಯರ್ಥ ಪಡಿಸಿದೆ.
ಮೊಟಗೊಂಡನಹಳ್ಳಿ ಗ್ರಾಮದಲ್ಲಿ ಸ್ಮಶಾನಕ್ಕಾಗಿ ಗುರುತಿಸಿರುವ ಗೋಮಾಳ ಸ್ಥಳ ಹಲವು ವರ್ಷಗಳಿಂದ ರಾಸುಗಳ ಮೇವಿನ ತಾಣವಾಗಿದೆ. ಈ ಜಾಗವನ್ನು ಸ್ಮಶಾನವನ್ನಾಗಿಸಲು ಜಿಲ್ಲಾಡಳಿತ ನಿರ್ಧರಿಸಿದ್ದು, ಇದರಿಂದ ಗ್ರಾಮದ ಹಲವು ರೈತರಿಗೆ ಸಮಸ್ಯೆಯಾಗಲಿದೆ ಎಂದು ಅರ್ಜಿಯಲ್ಲಿ ಕೋರಿದ್ದರು.
ಇದನ್ನೂ ಓದಿ: ನಗರದಲ್ಲಿ ಇನ್ನೂ ಐದು ಹೊಸ ಸಂಚಾರಿ ಠಾಣೆ: ಸಿಎಂ ಬಸವರಾಜ ಬೊಮ್ಮಾಯಿ