ಬೆಂಗಳೂರು: ಅಕ್ಟೋಬರ್ 28 ಮತ್ತು 29ರಂದು ನಡೆಯಲಿರುವ ವಿವಿಧ ನಿಗಮ ಮಂಡಳಿಗಳ ಪರೀಕ್ಷೆಗೆ ಹಿಜಾಬ್ ಧರಿಸಿ ಹಾಜರಾಗಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಷರತ್ತುಬದ್ಧ ಅನುಮತಿ ನೀಡಿದೆ. ಹಾಗಾಗಿ ಹಿಜಾಬ್ ಧರಿಸಿಯೇ ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಬಹುದಾಗಿದೆ. ಆದರೆ ಕೆಲ ಷರತ್ತುಗಳನ್ನು ವಿಧಿಸಿದ್ದು, ಕಟ್ಟುನಿಟ್ಟಾಗಿ ಷರತ್ತು ಪಾಲಿಸಲು ಸೂಚನೆ ನೀಡಿದೆ.
ಸೂಚನೆಗಳೇನು?: ಹಿಜಾಬ್ ಧರಿಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿನಿಯರಿಗೆ ಪರೀಕ್ಷೆ ಕೊಠಡಿಗೆ ಪ್ರವೇಶ ಕಲ್ಪಸಲು ಸೂಚಿಸಿದ್ದರೂ ಪರೀಕ್ಷೆ ಆರಂಭವಾಗುವುದಕ್ಕೆ ಒಂದು ಗಂಟೆ ಮೊದಲು ಪರೀಕ್ಷಾ ಕೇಂದ್ರದಲ್ಲಿ ಅವರು ಹಾಜರಿರಬೇಕು. ಅವರು ಮಹಿಳಾ ಸಿಬ್ಬಂದಿಯಿಂದ ತಪಾಸಣೆಗೆ ಒಳಪಡಬೇಕು. ತಪಾಸಣೆಗೆ ಸೂಚಿಸಿರುವ ಸಮಯ ಮೀರಿದ ನಂತರ ಆಗಮಿಸಿದರೆ ಅವರು ಹಿಜಾಬ್ ಧರಿಸಿ ಪರೀಕ್ಷಾ ಕೇಂದ್ರ ಪ್ರವೇಶಿಸಲು ಅವಕಾಶ ಇರುವುದಿಲ್ಲ ಎಂದು ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.
ಪರೀಕ್ಷೆಗೆ ಹಾಜರಾಗುವವರು ಪ್ರವೇಶ ಪತ್ರ, ಇತ್ತೀಚಿನ ಪಾಸ್ಪೋರ್ಟ್ ಅಳತೆಯ 2 ಫೋಟೋ, ಸರ್ಕಾರ ಮಾನ್ಯ ಮಾಡಿರುವ ಗುರುತಿನ ಚೀಟಿ ತರಬೇಕು. ಪರೀಕ್ಷೆ ಮುಗಿಯುವವರೆಗೂ ಹೊರ ಹೋಗಲು ಅವಕಾಶವಿಲ್ಲ. ಈ ಎಲ್ಲಾ ನಿಯಮಗಳು ಹಿಂದಿನಿಂದಲೂ ಇವೆ. ಅದನ್ನೇ ಯಥಾವತ್ತಾಗಿ ಮುಂದುವರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.
ಇದನ್ನೂ ಓದಿ: Hijab: ಆಪರೇಷನ್ ಥಿಯೇಟರ್‌ನೊಳಗೆ ಹಿಜಾಬ್ ಧರಿಸಲು ಅವಕಾಶವಿಲ್ಲ: ಕೇರಳ ವಿದ್ಯಾರ್ಥಿನಿಯರ ಬೇಡಿಕೆ ತಿರಸ್ಕೃತ
ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಮುಂದಾಗಿದ್ದ ವಿದ್ಯಾರ್ಥಿನಿ: ಮಾರ್ಚ್ ತಿಂಗಳಲ್ಲಿ ನಡೆದ ದ್ವಿತೀಯ ಪಿಯು ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಮುಂದಾಗಿದ್ದಳು. ಬೆಂಗಳೂರಿನ ಮಲ್ಲೇಶ್ವರಂ ಕಾಲೇಜುವೊಂದರಲ್ಲಿ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಮುಂದಾದ ವಿದ್ಯಾರ್ಥಿನಿಗೆ ಅವಕಾಶ ನಿರಾಕರಿಸಿ, ಹಿಜಾಬ್ ತೆಗೆದು ಕೇಂದ್ರದೊಳಗೆ ತೆರಳಿದ ಬಳಿಕವೇ ಪರೀಕ್ಷೆ ಬರೆಯಲು ಅನುಮತಿ ನೀಡಲಾಗಿತ್ತು.
ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹಿಜಾಬ್ ಧರಿಸಿ ಪರೀಕ್ಷಾ ಕೇಂದ್ರದ ಒಳಗೆ ಬರುವಂತಿಲ್ಲ. ಸಮವಸ್ತ್ರ ಸಂಹಿತೆ ಪಾಲನೆಯಾಗಲಿದೆ. ಇದರಿಂದ ವಸ್ತ್ರಸಂಹಿತೆ ಪಾಲನೆ ಆಗದಿದ್ದರೆ ಅಂತಹವರಿಗೆ ಪರೀಕ್ಷೆ ಬರೆಯುವ ಅವಕಾಶ ಇಲ್ಲ ಎಂದು ಶಿಕ್ಷಣ ಇಲಾಖೆ ಸ್ಪಷ್ಟವಾಗಿ ಸೂಚನೆ ನೀಡಿತ್ತು. ಅಲ್ಲದೇ, ಆಗಿನ ಬಿಜೆಪಿ ಸರ್ಕಾರದ ಶಿಕ್ಷಣ ಸಚಿವ ಬಿ.ಸಿ ನಾಗೇಶ್, ಪರೀಕ್ಷೆ ಬರೆಯುವ ಆಶಯ ಇದ್ದವರು ಹಿಜಾಬ್ ತೆಗೆದಿಟ್ಟು ಬರುವಂತೆ ಕಟ್ಟುನಿಟ್ಟಾಗಿ ತಿಳಿಸಿದ್ದರು. ಶಿಕ್ಷಣ ಸಂಸ್ಥೆಗಳಿಗೂ ನಿಯಮ ಪಾಲನೆ ಮಾಡುವಂತೆ ನಿರ್ದೇಶನ ನೀಡಿದ್ದರು.
ಹಿಜಾಬ್ ಧರಿಸುವುದು ಇಸ್ಲಾಮಿಕ್ ನಂಬಿಕೆಯ ಅಗತ್ಯ ಧಾರ್ಮಿಕ ಆಚರಣೆಯ ಭಾಗ ಅಲ್ಲ ಎಂದು ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ರಾಜ್ಯ ಹೈಕೋರ್ಟ್ ಮಹತ್ವದ ಮಾಹಿತಿ ನೀಡಿತ್ತು. ವಿದ್ಯಾರ್ಥಿಗಳು ನಿಗದಿಪಡಿಸಿದ ಸಮವಸ್ತ್ರವನ್ನು ಧರಿಸಬೇಕು ಎಂಬ 2022 ಫೆ. 5ರಂದು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿತ್ತು. ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಲಾಗಿದ್ದು, ವಿಚಾರಣೆ ಹಂತದಲ್ಲಿದೆ.
ಇದನ್ನೂ ಓದಿ: ಪರೀಕ್ಷೆ ವೇಳೆ ಬುರ್ಖಾ ತೆಗೆಸಿದ ಶಿಕ್ಷಕರು: ಹೈದರಾಬಾದ್ ಕಾಲೇಜಿನ ವಿದ್ಯಾರ್ಥಿನಿಯರ ಆರೋಪ