ಬೆಂಗಳೂರು: ಪಠ್ಯಪುಸ್ತಕ ತಿದ್ದುಪಡಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ಕನ್ನಡ ಭಾಷಾ ಪುಸ್ತಕದಲ್ಲಿ 9 ಪಾಠಕ್ಕೆ, ಸಮಾಜ ವಿಜ್ಞಾನದಲ್ಲಿ 9 ಪಾಠಕ್ಕೆ ಕೊಕ್ ನೀಡಲಾಗಿದೆ. ನಿಜವಾದ ಆದರ್ಶಪುರುಷ ಯಾರಾಗಬೇಕು ಪಠ್ಯಕ್ಕೆ ಕೊಕ್ ನೀಡಲಾಗಿದ್ದು, ಆರ್ಎಸ್ಎಸ್ ಸಂಸ್ಥಾಪಕ ಕೇಶವ್ ಹೆಡ್ಗೇವಾರ್ ಬರೆದಿದ್ದ ಗದ್ಯವನ್ನೂ ಕೈಬಿಡಲಾಗಿದೆ. ಚಕ್ರವರ್ತಿ ಸೂಲಿಬೆಲೆಯ ಪಠ್ಯವನ್ನೂ ತೆಗೆಯಲಾಗಿದೆ. ತಾಯಿ ಭಾರತಿಯ ಅಮರ ಪುತ್ರರು ಪಾಠಕ್ಕೆ ಕತ್ತರಿ ಹಾಕಲಾಗಿದ್ದು, ಶತಾವಧಾನಿ ಆರ್ ಗಣೇಶ್ ಗದ್ಯ ಕೈಬಿಟ್ಟಿದೆ. ಶ್ರೇಷ್ಠ ಭಾರತೀಯ ಚಿಂತನೆಗಳು ಪಾಠ ಹಾಗೂ ನಿರ್ಮಲಾ ಸುರತ್ಕಲ್, ರಮಾನಂದ ಆಚಾರ್ಯರ ಪಾಠಕ್ಕೂ ಕೊಕ್ ನೀಡಲಾಗಿದೆ.
ಜೊತೆಗೆ ಪಾರಂಪಳ್ಳಿ ನರಸಿಂಹ ಐತಾಳ, ಲಕ್ಷ್ಮೀಶ, ಕೆ ಟಿ ಗಟ್ಟಿ ಪಾಠವನ್ನು ಕೈ ಬಿಡಲಾಗಿದೆ. ಪಿ ಸತ್ಯನಾರಾಯಣ ಭಟ್ಟರ ಗದ್ಯಕ್ಕೂ ಕತ್ತರಿ ಹಾಕಲಾಗಿದೆ. ಸಾವಿತ್ರಿಬಾಯಿ ಪುಲೆ, ಜವಾಹರಲಾಲ್ ನೆಹರು, ಅಂಬೇಡ್ಕರ್ ಪಠ್ಯ ಹಾಗೂ ಸುಕುಮಾರಸ್ವಾಮಿ ಕುರಿತ ಪಠ್ಯವನ್ನು ಸೇರ್ಪಡೆಗೊಳಿಸಲಾಗಿದೆ. ಸಾರಾ ಅಬೂಬ್ಕರ್, ವಿಜಯಮಾಲಾ ರಂಗನಾಥ್ ಪಾಠ ಸೇರ್ಪಡೆಯಾಗಿದ್ದು, ವಾಲ್ಮೀಕಿ ಮಹರ್ಷಿ, ಉರುಸ್ಗಳಲ್ಲಿ ಭಾವೈಕ್ಯತೆ ಪಾಠ ಸೇರಿಸಲಾಗಿದೆ. ಸಮಾಜ ವಿಜ್ಞಾನ ಪಠ್ಯದಲ್ಲೂ ಹಲವು ಅಧ್ಯಾಯ ಸೇರ್ಪಡೆ ಮಾಡಲಾಗಿದೆ. ವೇದ ಕಾಲದ ಸಂಸ್ಕೃತಿ, ಹೊಸ ಧರ್ಮಗಳ ಉದಯ ಕುರಿತ ಅಧ್ಯಾಯ ಮಿರ್ಜಾ ಇಸ್ಮಾಯಿಲ್, ವಿಶ್ವೇಶ್ವರಯ್ಯ, ಒಡೆಯರ್ ಕುರಿತ ಪಾಠ ಸೇರ್ಪಡೆಗೊಳಿಸಲಾಗಿದೆ.
ಇತರೆ ಕೈಬಿಟ್ಟ ಹಾಗೂ ಸೇರ್ಪಡೆ ವಿವರ?: 6ನೇ ತರಗತಿ ಸಮಾಜ ವಿಜ್ಞಾನ ಭಾಗ-1 ಪಾಠದಲ್ಲಿನ ನಮ್ಮ ಹೆಮ್ಮೆಯ ರಾಜ್ಯ- ಕರ್ನಾಟಕ ಎಂಬ ಅಧ್ಯಾಯದ ಪುಟ ಸಂಖ್ಯೆ 33ರಲ್ಲಿ ಕಲಬುರಗಿ ವಿಭಾಗದ ವಿಷಯಾಂಶವನ್ನು ಬೋಧಿಸುವಾಗ 'ಈ ವಿಭಾಗದ ವಿಶೇಷ ನೆರವು ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಸಂವಿಧಾನದ ಅನುಚ್ಛೇದ 371 (ಜೆ) ಅಡಿಯಲ್ಲಿ ವಿಶೇಷ ಸ್ಥಾನಮಾನ ನೀಡಿದೆ' ಎಂಬ ವಾಕ್ಯವನ್ನು ಸೇರ್ಪಡೆ ಮಾಡಲಾಗಿದೆ.
6ನೇ ತರಗತಿ ಸಮಾಜ ವಿಜ್ಞಾನ ಭಾಗ1ರಲ್ಲಿ 'ವೇದಕಾಲದ ಸಂಸ್ಕೃತಿ' ಎಂಬ ಹೊಸ ಅಧ್ಯಾಯವನ್ನು ಸೇರಿಸಲಾಗಿದೆ. ಜೊತೆಗೆ 'ಹೊಸ ಧರ್ಮಗಳ ಉದಯ' ಎಂಬ ಹೊಸ ಅಧ್ಯಾಯವೂ ಸೇರ್ಪಡೆಯಾಗಿದೆ.
6ನೇ ತರಗತಿ ಸಮಾಜ ವಿಜ್ಞಾನ ಭಾಗ 2ರಲ್ಲಿ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು ಎಂಬ ಅಧ್ಯಾಯದ ಜೊತೆಗೆ 'ಮಾನವ ಹಕ್ಕುಗಳು' ಎಂಬ ವಿಷಯಾಂಶವನ್ನು ಹೊಸದಾಗಿ ಸೇರಿಸಲಾಗಿದೆ.
7ನೇ ತರಗತಿ ಸಮಾಜ ವಿಜ್ಞಾನ ಭಾಗ 1ರಲ್ಲಿ 'ಜಗತ್ತಿನ ಪ್ರಮುಖ ಘಟನೆಗಳು' ಎಂಬ ಅಧ್ಯಾಯದಲ್ಲಿ ಎಲ್ಲೆಲ್ಲಿ 'ರಿಲಿಜನ್' ಎಂದು ಬಂದಿದೆಯೋ ಅಲ್ಲೆಲ್ಲಾ 'ಧರ್ಮ' ಎಂದು ಬದಲಾಯಿಸಲಾಗಿದೆ. ಇನ್ನು 'ಮೈಸೂರು ಮತ್ತು ಇತರ ಸಂಸ್ಥಾನಗಳು' ಎಂಬ ಅಧ್ಯಾಯದ ಜೊತೆಗೆ ಮುಮ್ಮಡಿ ಕೃಷ್ಣರಾಜ ಒಡೆಯರ್, ಕಮಿಷನರ್‌ಗಳ ಆಡಳಿತ, 10ನೇ ಚಾಮರಾಜ ಒಡೆಯರ್, ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್. ಎಂ ವಿಶ್ವೇಶ್ವರಯ್ಯ ಮತ್ತು ಸರ್. ಮಿರ್ಜಾ ಇಸ್ಮಾಯಿಲ್ ಈ ವಿಷಯಾಂಶಗಳನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿದೆ.
7ನೇ ತರಗತಿ ಸಮಾಜ ವಿಜ್ಞಾನ ಭಾಗ 2ರಲ್ಲಿ 'ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣೆಗಳು' ಎಂಬ ಅಧ್ಯಾಯದ ಜೊತೆಗೆ ವಿಷಯಾಂಶಗಳನ್ನು ಹೊಸದಾಗಿ ಮಹಿಳಾ ಸಮಾಜ ಸುಧಾರಕಿಯರು ಎಂದು ಸೇರ್ಪಡೆ ಮಾಡಲಾಗಿದೆ. ಜೊತೆಗೆ 'ಸ್ವಾತಂತ್ರ್ಯ ಸಂಗ್ರಾಮ' ಎಂಬ ಅಧ್ಯಾಯದ ಜೊತೆಗೆ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು ಎಂಬ ವಿಷಯಾಂಶಗಳನ್ನು ಸೇರಿಸಲಾಗಿದೆ.
10ನೇ ತರಗತಿ - ಸಮಾಜ ವಿಜ್ಞಾನ ಭಾಗ-1ರಲ್ಲಿ 'ಭಾರತಕ್ಕಿರುವ ಸವಾಲುಗಳು ಹಾಗೂ ಪರಿಹಾರೋಪಾಯಗಳು' ಎಂಬ ಅಧ್ಯಾಯದ ಪ್ರಾದೇಶಿಕವಾದ ಎಂಬ ಉಪ ಶೀರ್ಷಿಕೆ ಅಡಿಯಲ್ಲಿ ಭಾಷಾಭಿಮಾನವು ರಾಷ್ಟ್ರೀಯವಾದದ ವಿರುದ್ಧ ಸಂಕುಚಿತ ಮನೋಭಾವವನ್ನು ಬೆಳೆಸುತ್ತದೆ. ಪ್ರಾದೇಶಿಕವಾದವನ್ನು ವೈಭವೀಕರಿಸುವುದರಿಂದ ದೇಶದ ಏಕತೆಗೆ ಧಕ್ಕೆ ಉಂಟಾಗುತ್ತದೆ. ಇತ್ತೀಚೆಗೆ ಆಂಧ್ರಪ್ರದೇಶದ ತೆಲಂಗಾಣದ ಪ್ರಾದೇಶಿಕವಾದದ ಹೋರಾಟವನ್ನು ಗಮನಿಸಬಹುದು. ದೇಶದ ಇನ್ನಿತರ ಭಾಗಗಳಲ್ಲಿ ನಡೆಯುತ್ತಿರುವ ಪ್ರಾದೇಶಿಕವಾದದ ಹೋರಾಟಗಳು ಕೂಡ ದೇಶದ ಅಭಿವೃದ್ಧಿಗೆ ತೊಡಕಾಗುವ ಸಾಧ್ಯತೆಗಳಿವೆ. ಇಂತಹ ಸಂಕುಚಿತ ಪ್ರಾದೇಶಿಕ ವಾದವನ್ನು ದೂರೀಕರಿಸಲು ನಮ್ಮ ಭಾರತ ಸಂವಿಧಾನವೇ ಹಲವಾರು ಮಾರ್ಗಗಳನ್ನು ಸೂಚಿಸಿದೆ ಎಂಬ ವಾಕ್ಯವನ್ನು ಕೈಬಿಡಲಾಗಿದೆ.