ಬೆಂಗಳೂರು: ಸರಕು ಸಾಗಣೆ ಹಡಗು ಮುಳುಗಿ ಸಮುದ್ರದಲ್ಲಿ ಸಿಲುಕಿದ್ದ 6 ಜನರನ್ನು ಕರಾವಳಿ ಕಾವಲು ಪಡೆಯ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ಸಾಫಿನಾ ಅಲ್ ಮಿರ್ಜಾನ್ ಹಡಗು ಮಾ. 19ರಂದು ನಗರದ ಬಂದರಿನಿಂದ ಮಸಾಲೆ ಪದಾರ್ಥ, ಆಹಾರ ಧಾನ್ಯ, ತರಕಾರಿ, ಮರಳು ಹಾಗೂ ಗ್ರಾನೈಟ್ ತೆಗೆದುಕೊಂಡು ಲಕ್ಷದ್ವೀಪಕ್ಕೆ ತೆರಳುತ್ತಿತ್ತು. ಮಾ. 20 ಬೆಳಗ್ಗೆ 7 ಗಂಟೆಗೆ ಹಡಗಿನ ಎಂಜಿನ್ ರೂಮ್‌ಗೆ ನೀರು ನುಗ್ಗಿದ್ದು, ಕಾಸರಗೋಡಿನಿಂದ 30 ನಾಟಿಕಲ್ ಮೈಲಿ ದೂರದಲ್ಲಿ ಹಡಗು ಮುಳುಗಡೆಯಾಗಿತ್ತು. ಇದರಿಂದ ಅದರಲ್ಲಿದ್ದ 6 ಜನರು ಸಮುದ್ರದ ಮಧ್ಯೆ ಆತಂಕಕ್ಕೆ ಸಿಲುಕಿದ್ದರು.
ಈ ಬಗ್ಗೆ ಮಾಹಿತಿ ಪಡೆದ ಕರಾವಳಿ ಕಾವಲು ಪಡೆ ಅಧಿಕಾರಿಗಳು, ಕೂಡಲೇ ಸಿಜಿ ಡ್ರೋನಿಯರ್ ವಿಮಾನವನ್ನು ಸ್ಥಳಕ್ಕೆ ಕಳುಹಿಸಿದ್ದರು. ಸಮುದ್ರದಲ್ಲಿ ಸಿಲುಕಿದ್ದ ಆರು ಜನರನ್ನು ಪತ್ತೆ ಮಾಡಿದ ವಿಮಾನದ ಸಿಬ್ಬಂದಿ, ಹಗ್ಗವನ್ನು ಬಿಟ್ಟು, ಅವರನ್ನು ರಕ್ಷಿಸಿದರು. ಸಮುದ್ರದಲ್ಲಿ ನಿಗಾ ವಹಿಸಿದ್ದ ಕರಾವಳಿ ಕಾವಲು ಪಡೆಯ ಹಡಗು ಸ್ಥಳಕ್ಕೆ ಬಂದಿದ್ದು, 6 ಮಂದಿಯನ್ನು ರಕ್ಷಣೆ ಮಾಡಲಾಯಿತು.
ಗುಜರಾತಿನ ಐವರು ಹಾಗೂ ಮಂಗಳೂರಿನ ಒಬ್ಬ ವ್ಯಕ್ತಿಯನ್ನು ರಕ್ಷಣೆ ಮಾಡಲಾಗಿದೆ. ಎಲ್ಲರಿಗೂ ಆಹಾರ, ಔಷಧಿ ನೀಡಲಾಗಿದ್ದು, ಮುಂದಿನ ಕ್ರಮಕ್ಕಾಗಿ ನವ ಮಂಗಳೂರು ಪೊಲೀಸರಿಗೆ ಹಸ್ತಂತರಿಸಲಾಗಿದೆ.
ಓದಿ: ಹ್ಯಾಟ್ರಿಕ್ ಗೆಲುವಿನ ಕನಸಿನೊಂದಿಗೆ ಮಸ್ಕಿ ಪ್ರಚಾರ ಕಣಕ್ಕೆ ವಿಜಯೇಂದ್ರ ಎಂಟ್ರಿ: ಗೆದ್ರೆ ವರ್ಚಸ್ಸು, ಸೋತ್ರೆ ಮುಖಭಂಗ