ಬೆಂಗಳೂರು: ಬಜೆಟ್‍ಗೆ ಒಪ್ಪಿಗೆ ಪಡೆಯಬೇಕಿರುವುದರಿಂದ ಭೋಜನ ವಿರಾಮ ಇಲ್ಲದೆ ಸದನ ಮುಂದುವರಿಸೋಣವೆಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನಸಭೆಯಲ್ಲಿ ಇಂದು ಪ್ರಕಟಿಸಿದರು.
ನಾಳೆ ಅಧಿವೇಶನ ಮುಕ್ತಾಯವಾಗುವ ಹಿನ್ನೆಲೆಯಲ್ಲಿ ಇಂದೇ ವಿತ್ತೀಯ ಕಲಾಪವನ್ನು ಮುಗಿಸಬೇಕಾಗಿದೆ. ಸದನದ ಕಾರ್ಯ ಕಲಾಪಗಳ ಸಲಹಾ ಸಮಿತಿ ಸಭೆಯಲ್ಲಿ ಈ ಕುರಿತು ಚರ್ಚಿಸಲಾಗಿದೆ. ತಮ್ಮ ತಮ್ಮ ಅಭಿಪ್ರಾಯವನ್ನು ಸಭೆಯಲ್ಲಿ ಮಂಡಿಸಿದ್ದಾರೆ. ಅತಿವೃಷ್ಟಿ ವಿಷಯದ ಮೇಲಿನ ಚರ್ಚೆ ಮಧ್ಯಾಹ್ನದವರೆಗೂ ಮುಂದುವರೆಯಲಿದ್ದು, ಕಾಲಮಿತಿಯಲ್ಲಿ ಸದಸ್ಯರು ವಿಷಯ ಪ್ರಸ್ತಾಪಿಸಿ ಮಧ್ಯಾಹ್ನದ ನಂತರ ವಿತ್ತೀಯ ಕಲಾಪದ ಚರ್ಚೆ ನಡೆಸಿ ಬಜೆಟ್‍ಗೆ ಒಪ್ಪಿಗೆ ಪಡೆಯಬೇಕಾಗಿದೆ.
ಹೀಗಾಗಿ ಭೋಜನ ವಿರಾಮ ಇಲ್ಲದೆ ಸದನ ಮುಂದುವರಿಸೋಣ ಎಂದು ಹೇಳಿದ ಸ್ಪೀಕರ್ ಇಂದು ಸಂಜೆವರೆಗೂ ವಿವಿಧ ಇಲಾಖೆಗಳ ಬೇಡಿಕೆ ಮೇಲಿನ ಚರ್ಚೆ ನಡೆಯಲಿದ್ದು, ನಾಳೆಯೂ ಅತಿವೃಷ್ಟಿ ವಿಚಾರದ ಬಗ್ಗೆ ಚರ್ಚೆ ಮುಂದುವರೆಸೋಣ ಎಂದು ಸಲಹೆ ನೀಡಿದರು.
ಮಧ್ಯ ಪ್ರವೇಶಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಬಜೆಟ್‍ಗೆ ಸುದೀರ್ಘ ಚರ್ಚೆ ಇಲ್ಲದೆ ಇಂದೇ ಒಪ್ಪಿಗೆ ಪಡೆಯುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಕನಿಷ್ಠ ಆರು ದಿನಗಳ ಕಾಲವಾದರೂ ಅಧಿವೇಶನ ನಡೆಸಬೇಕು ಎಂದು ಒತ್ತಾಯಿಸಿದರು.