ಬೆಂಗಳೂರು: ತೀರ್ಥಹಳ್ಳಿಯಲ್ಲಿ 70 ಕಾಮಗಾರಿ ಆಗಿದ್ದು, ಹೆಚ್ಚಿನವು ಪ್ರಗತಿಯಲ್ಲಿವೆ. ಆದಷ್ಟು ಬೇಗ ಕಾಮಗಾರಿಗಳನ್ನು ಪೂರ್ಣಗೊಳಿಸುತ್ತೇವೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್. ಭೋಸರಾಜ್ ತಿಳಿಸಿದರು. ಆರಗ ಜ್ಞಾನೇಂದ್ರ ಸಣ್ಣ ನೀರಾವರಿ ಸಚಿವರಿಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ಸದ್ಯ 26 ಕಾಮಗಾರಿಗಳು ನಡೆಯುತ್ತಿವೆ. ಅದನ್ನು ಆದಷ್ಟು ಬೇಗ ಪೂರ್ಣಗೊಳಿಸುತ್ತೇವೆ. ಗುತ್ತಿಗೆದಾರರಿಗೆ ಸಮರ್ಪಕವಾಗಿ ಆದ್ಯತೆ ಮೇರೆಗೆ ಹಣ ಸಂದಾಯ ಮಾಡುತ್ತಿದ್ದೇವೆ. ಹಣಕಾಸು ವ್ಯವಸ್ಥೆ ಆಗುತ್ತಿದ್ದಂತೆ ಸಂದಾಯ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಕೆಲಸ ವಿಳಂಬ ಆಗುವುದಿಲ್ಲ. ಬಾಕಿ ಇರುವ ಕೆಲಸ ಬೇಗ ಮುಗಿಯಲಿದೆ ಎಂದರು.
ಸದ್ಯ ನಾವು ಪ್ರಗತಿಯಲ್ಲಿರುವ ಕೆಲಸ ಮಾಡುತ್ತೇವೆ. ಎರಡನೇ ಹಂತದಲ್ಲಿ ಟೆಂಡರ್ ಹಂತದ ಕೆಲಸ ಆಗಲಿದೆ. 2,500 ಕೋಟಿ ರೂ. ಇಲಾಖೆಯಲ್ಲಿ ಮೀಸಲಿದೆ ಅದನ್ನು ಬಳಸಿಕೊಳ್ಳುತ್ತೇವೆ ಎಂದು ಭರವಸೆ ಕೊಟ್ಟರು. ಆರಗ ಜ್ಞಾನೇಂದ್ರ ಮಾತನಾಡಿ, ನಾವು ಅಣೆಕಟ್ಟು ನಿರ್ಮಾಣದಿಂದ ನಿರಾಶ್ರಿತರಾದವರು. ಸಣ್ಣ ನೀರಾವರಿ ಯೋಜನೆ ಮಾತ್ರ ಅವಲಂಬಿಸಿದ್ದೇವೆ. 10-20 ಲಕ್ಷದಲ್ಲೇ ನಮ್ಮ ಕೆಲಸ ಆಗಿ ಹೋಗುತ್ತದೆ. ಕೋಟಿಗಳ ಲೆಕ್ಕದಲ್ಲಿ ನಾವು ಯೋಜನೆ ಕೇಳುತ್ತಿಲ್ಲ. ಇಷ್ಟು ಚಿಕ್ಕ ಕೆಲಸ ಮಾಡದಿದ್ದರೆ ಎಂಜಿನಿಯರ್‌ಗಳನ್ನು ತೆಗೆದುಹಾಕಿ. ಒಂದು ಸಣ್ಣ ಯೋಜನೆ ಐದಾರು ವರ್ಷ ತೆಗೆದುಕೊಳ್ಳುತ್ತದೆ. ಏತ ನೀರಾವರಿ ಯೋಜನೆ ಹತ್ತಿಪ್ಪತ್ತು ಅನುಮೋದಿಸಿದ್ದೇನೆ. ಆದರೆ ಒಂದೂ ಜಾರಿಗೆ ಬಂದಿಲ್ಲ. ಎಂಜಿನಿಯರ್‌ಗಳು ಫೇಕ್‌ಗಳಾ? ಪ್ರಾಮಾಣಿಕ ಕೆಲಸ ಮಾಡಿದವರಿಗೆ ಟೆಂಡರ್ ಪಾಸ್ ಆಗುತ್ತಿಲ್ಲ ಎಂದು ಪ್ರಶ್ನಿಸಿದರು.
ಜೈನ ಮಂದಿರಗಳ ಅಭಿವೃದ್ಧಿ ವಿಚಾರವಾಗಿ ಕೇಳಿದ ಪ್ರಶ್ನೆಗೆ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಹಿಂದೆ ನಮ್ಮ ಸರ್ಕಾರ ಇದ್ದಾಗಲೇ ಜೈನ ಮಂದಿರಗಳ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿದ್ದೆವು. ಅದರ ಬಳಕೆ ಆಗಿಲ್ಲ. ಇಲ್ಲಿನ ಕಡಲತೀರಗಳ ಅಭಿವೃದ್ಧಿಗೆ ಒತ್ತು ಕೊಟ್ಟಿದ್ದೇವೆ. ಈಗಲೂ ನಾವು ಇಲ್ಲಿನ ಅಭಿವೃದ್ಧಿಗೆ ಬದ್ಧವಾಗಿದ್ದು, ಹಿಂದೆ ನಾನು ಪ್ರವಾಸೋದ್ಯಮ ಸಚಿವನಾಗಿದ್ದಾಗ ಸಾಕಷ್ಟು ಅಭಿವೃದ್ಧಿ ಮಾಡಿದ್ದೆ. ಈಗಿನ ಪ್ರವಾಸೋದ್ಯಮ ಸಚಿವರಿಗೆ ಈ ವಿಚಾರವಾಗಿ ಗಮನ ತಂದು, ಅಲ್ಲಿನ ಅಭಿವೃದ್ಧಿಗೆ ಸೂಚಿಸುತ್ತೇನೆ. ಈ ಭಾಗದ ಪ್ರವಾಸೋದ್ಯಮ ಪ್ರಗತಿಗೆ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ ಎಂದರು.
ಸಿದ್ದು ಪಾಟೀಲ್ ಕೇಳಿದ ಪ್ರಶ್ನೆಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಮಾತನಾಡಿ, ಹುಮ್ನಾಬಾದ್ ಕ್ಷೇತ್ರ ವ್ಯಾಪ್ತಿಯಲ್ಲಿ ಸಾಕಷ್ಟು ಹುದ್ದೆ ಖಾಲಿ ಇದೆ. ಅದನ್ನು ಭರಿಸುವ ಪ್ರಕ್ರಿಯೆ ನಡೆಯುತ್ತಿದೆ. ಅದು ಪೂರ್ಣಗೊಳ್ಳುತ್ತಿದ್ದಂತೆ ಪೇದೆಗಳ ನಿರ್ಮಾಣ ಆಗಲಿದೆ. ಸದ್ಯ ಪಿಎಸ್‌ಐ ನೇಮಕ ಸಾಧ್ಯವಿಲ್ಲ. ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ. ಅದು ಮುಗಿದ ತಕ್ಷಣ ನೇಮಕ ಪ್ರಕ್ರಿಯೆ ಆರಂಭವಾಗಲಿದೆ. ಆದಷ್ಟು ಬೇಗ ನೇಮಕ ಮಾಡುತ್ತೇವೆ. ಠಾಣೆ ಉನ್ನತೀಕರಣ ಆಗಲು ಕೆಲ ನಿಯಮ ಇದೆ. ಆದ್ದರಿಂದ ಸದ್ಯ ಸಾಧ್ಯವಿಲ್ಲ ಎಂದರು.
ಸದಸ್ಯ ಸುರೇಶ್‌ಗೌಡ ಬಿ. ಏತ ನೀರಾವರಿ ಯೋಜನೆ ಬಗ್ಗೆ ಕೇಳಿದ ಪ್ರಶ್ನೆಗೆ ಸಚಿವ ಡಿ.ಕೆ. ಶಿವಕುಮಾರ್ ಉತ್ತರಿಸಿ, ನಾವು ಸರ್ಕಾರದ ವತಿಯಿಂದ ಹೊಸ ಪಾಲಿಸಿ ತರಬೇಕಿದೆ. ಏತ ನೀರಾವರಿ ಆಗಬೇಕು, ಕೆರೆಗೆ ನೀರು ತಂಬಬೇಕು. ನಾನು ಇಂಧನ ಸಚಿವ ಕೆ.ಜೆ. ಜಾರ್ಜ್ ಜತೆ ಮಾತುಕತೆ ನಡೆಸಿದ್ದೇನೆ ಎಂದು ಹೇಳಿದರು.
ಗೃಹ ಸಚಿವ ಡಾ. ಜಿ. ಪರಮೇಶ್ವರ್ ಕೋವಿ ಅಡ ಇಡುವ ವಿಚಾರಕ್ಕೆ ಕೇಳಲಾದ ಪ್ರಶ್ನೆಗೆ ಮಾತನಾಡಿ, ಚುನಾವಣೆ ಸಂದರ್ಭ ಕೋವಿ ಅಡ ಇಡುವುದನ್ನು ತೆಗೆಯಲು ಸಾಧ್ಯವಿಲ್ಲ. ಆದರೆ 200 ರೂ. ಹಣ ಪಡೆಯುವ ವ್ಯವಸ್ಥೆ ಇಲ್ಲ. ಆ ಸಂಬಂಧ ಯಾರೇ ದೂರು ಕೊಟ್ಟರೂ ಕ್ರಮ ಕೈಗೊಳ್ಳುತ್ತೇವೆ. ರೈತರಿಗೆ ಈ ಸಂದರ್ಭ ಬೆಳೆ ಹಾನಿಯಿಂದ ಆರ್ಥಿಕ ಸಂಕಷ್ಟ ಆಗುತ್ತದೆ ಎಂದರೆ ಸಕಾರಣ ನೀಡಿ ಮನವಿ ಸಲ್ಲಿಸಲಿ, ವಿಚಾರಣೆ ನಡೆಸಿ ಅವಕಾಶ ಇದ್ದರೆ ಕೋವಿ ಅಡ ಇಡುವುದರಿಂದ ವಿನಾಯಿತು ನೀಡುತ್ತೇವೆ ಎಂದು ಭರವಸೆ ಕೊಟ್ಟರು.
ಬಿಜೆಪಿ ಸದಸ್ಯ ಸುರೇಶ್ ಕುಮಾರ್ ಕೇಳಿದ ಪ್ರಶ್ನೆಗೆ ಸಚಿವ ಡಾ. ಜಿ. ಪರಮೇಶ್ವರ್ ಮಾತನಾಡಿ, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೆ, ದೇಶದಲ್ಲೇ ಅತ್ಯಂತ ಅಚ್ಚುಕಟ್ಟಾಗಿ, ಉಪಯುಕ್ತವಾಗಿ ದೊರಕಬೇಕಿರುವ ಹೆದ್ದಾರಿ. ಇಲ್ಲಿ ಗಮನಿಸಿದರೆ ಸಾಕಷ್ಟು ನ್ಯೂನತೆ ಇದೆ. ತಿರುವುಗಳಲ್ಲಿ ಸೂಕ್ತ ಫಲಕ ಅಳವಡಿಸಬೇಕು ಎಲ್ಲವನ್ನೂ ಹಂತ ಹಂತವಾಗಿ ಮಾಡುತ್ತಿದ್ದೇವೆ ಎಂದು ವಿವರಿಸಿದರು.
ಇದನ್ನೂ ಓದಿ: ಜಿಲ್ಲೆಗೊಂದು ಪದವಿ ವಸತಿ ಕಾಲೇಜು, CBSE ಶಾಲೆ ತೆರೆಯಲು ಚಿಂತನೆ: ಸಚಿವ ಮಹದೇವಪ್ಪ