ಬೆಂಗಳೂರು: ಬೊಮ್ಮನಹಳ್ಳಿ ಬೆಂಗಳೂರಿನ ಮತ್ತೊಂದು ಮಹತ್ವದ ವಿಧಾನಸಭೆ ಕ್ಷೇತ್ರ. ಸದ್ಯ ಇದು ಬಿಜೆಪಿಯ ಭದ್ರಕೋಟೆ. ಕ್ಷೇತ್ರದ ಚುನಾವಣಾ ಚಿತ್ರಣ ಹೇಗಿದೆ ನೋಡೋಣ.
ಬೊಮ್ಮನಹಳ್ಳಿ ಕ್ಷೇತ್ರವು ಬೆಂಗಳೂರು ಹೊರವಲಯದ ಐಟಿ ಕಾರಿಡಾರ್ನಲ್ಲಿರುವ ಕ್ಷೇತ್ರ. ವಲಸಿಗರೇ ಹೆಚ್ಚಿರುವ ಕ್ಷೇತ್ರವಿದು. ಬೊಮ್ಮನಹಳ್ಳಿ, ಎಚ್ಎಸ್‌ಆರ್ ಬಡಾವಣೆ, ಜರಗನಹಳ್ಳಿ, ಪುಟ್ಟೇನಹಳ್ಳಿ, ಬಿಳೇಕಹಳ್ಳಿ, ಹೊಂಗಸಂದ್ರ, ಮಂಗಮ್ಮನಪಾಳ್ಯ, ಅರಕೆರೆ ಸೇರಿದಂತೆ 8 ಬಿಬಿಎಂಪಿ ವಾರ್ಡ್‌ಗಳು ಕ್ಷೇತ್ರದ ವ್ಯಾಪ್ತಿಯಲ್ಲಿವೆ. 2008ರ ಕ್ಷೇತ್ರ ಮರುವಿಂಗಡನೆಯಲ್ಲಿ ಬೊಮ್ಮನಹಳ್ಳಿ ರಚನೆಯಾಯಿತು.
ಇಲ್ಲಿ ಮೂಲ ನಿವಾಸಿಗಳಿಗಿಂತ ವಲಸಿಗರ ಸಂಖ್ಯೆಯೇ ಹೆಚ್ಚು. ಕನ್ನಡೇತರ ಸಂಖ್ಯೆ ಗಣನೀಯವಾಗಿದೆ. ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ರೆಡ್ಡಿ, ಒಕ್ಕಲಿಗ ಸಮುದಾಯದವರೇ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಬೊಮ್ಮನಹಳ್ಳಿ ಕ್ಷೇತ್ರ ರಚನೆಯಾದಾಗಿನಿಂದ ಬಿಜೆಪಿಯೇ ಪಾರುಪತ್ಯ ಸಾಧಿಸಿದೆ. ಮೂರು ಬಾರಿ ಗೆಲುವು ಸಾಧಿಸಿರುವ ಸತೀಶ್ ರೆಡ್ಡಿ ನಾಲ್ಕನೇ ಬಾರಿ ಕ್ಷೇತ್ರದಲ್ಲಿ ಸ್ಪರ್ಧಿಸಲು ಮುಂದಾಗಿದ್ದಾರೆ.

ಕ್ಷೇತ್ರದಲ್ಲಿ ಹತ್ತು ಹಲವು ಸಮಸ್ಯೆ: ಬೊಮ್ಮನಹಳ್ಳಿಯಲ್ಲಿ ಹತ್ತು ಹಲವು ಸಮಸ್ಯೆಗಳಿವೆ. ರಸ್ತೆ, ಕಿರಿದಾದ ರಸ್ತೆ, ಕಸ, ಟ್ರಾಫಿಕ್ ಜಾಮ್ ಹಾಗೂ ನೀರಿನ ಕೊರತೆ ಬಗೆಹರಿಯದ ಸಮಸ್ಯೆಗಳಾಗಿವೆ. ಬೊಮ್ಮನಹಳ್ಳಿಯಿಂದ ಬೇಗೂರು ರಸ್ತೆವರೆಗೆ ವಿಸ್ತರಣೆ ಕಾಮಗಾರಿ ಇನ್ನೂ ಮರೀಚಿಕೆಯಾಗೇ ಉಳಿದಿದೆ. ಪ್ರತೀ ವರ್ಷ ಸುರಿಯುವ ಮಳೆ ಕ್ಷೇತ್ರದ ಬಹುತೇಕ ಕಡೆ ಅವಾಂತರ ಸೃಷ್ಟಿಸುತ್ತಿದೆ. ಅದರಲ್ಲೂ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ಹಲವು ಮನೆಗಳು ಜಲಾವೃತವಾಗುತ್ತಿವೆ. ರಾಜಕಾಲುವೆ ಒತ್ತುವರಿ ವ್ಯಾಕವಾಗಿದೆ. ಇದಕ್ಕೆ ಕಡಿವಾಣ ಹಾಕುವಲ್ಲಿ ಹಾಲಿ ಶಾಸಕರು ವಿಫಲರಾಗಿದ್ದಾರೆ ಎಂಬ ಆರೋಪಗಳಿವೆ.
ನೀರು ಈ ಕ್ಷೇತ್ರದ ಜನರ ದೊಡ್ಡ ಸಮಸ್ಯೆ. ದುಬಾರಿ ವೆಚ್ಚ ಮಾಡಿ ನೀರಿನ ಟ್ಯಾಂಕರ್ ಮೂಲಕ ನೀರು ತರಿಸಿಕೊಳ್ಳುವುದು ಕ್ಷೇತ್ರದಲ್ಲಿ ಬಹುತೇಕ ಕಡೆ ಕಂಡು ಬರುವ ದೃಶ್ಯ. ರಸ್ತೆ ಗುಂಡಿ, ಕಸದ ಸಮಸ್ಯೆ ಈ ಕ್ಷೇತ್ರದ ಜನರನ್ನು ಕೆಂಗೆಡಿಸಿದೆ. ಅಭಿವೃದ್ಧಿ ವಿಚಾರದಲ್ಲಿ ಹಾಲಿ ಶಾಸಕ ಗಣನೀಯ ಪ್ರಗತಿ ಮಾಡಿಲ್ಲ ಎಂಬುದು ಕೆಲವರ ಅಸಮಾಧಾನ. ಎಚ್‌ಎಸ್‌ಆರ್ ಲೇಔಟ್‌ನ ಆಟದ ಮೈದಾನವನ್ನು ಕ್ರೀಡಾಂಗಣವಾಗಿಸಲು ಹೊರಟಾಗ ಭಾರಿ ಪ್ರಮಾಣದ ವಿರೋಧ ವ್ಯಕ್ತವಾಗಿತ್ತು. ಆಗ ಎದುರಾಗಿದ್ದ ಪ್ರತಿರೋಧದ ಕಿಡಿ ಇನ್ನೂ ಹಾಗೇ ಇದೆ.
ಕ್ಷೇತ್ರದ ಚುನಾವಣಾ ಅಖಾಡ ಹೇಗಿದೆ?: ಸತೀಶ್ ರೆಡ್ಡಿ ಕ್ಷೇತ್ರದಲ್ಲಿ ಸತತ ಮೂರನೇ ಬಾರಿ ಗೆಲುವು ಸಾಧಿಸಿದ್ದು, ಇದೀಗ ನಾಲ್ಕನೇ ಬಾರಿ ಕ್ಷೇತ್ರದಲ್ಲಿ ಕಣಕ್ಕಿಳಿಯಲು ಮುಂದಾಗಿದ್ದಾರೆ. ಈ ಬಾರಿ ಕ್ಷೇತ್ರ ಬದಲಾವಣೆಯ ಆತಂಕವೂ ಎದುರಾಗಿದೆ. ಆದರೆ ಸತೀಶ್ ರೆಡ್ಡಿ ಬೊಮ್ಮನಹಳ್ಳಿಯಲ್ಲೇ ನಿಲ್ಲಲು ನಿರ್ಧರಿಸಿದ್ದಾರೆ.
ಇತ್ತ ಕಾಂಗ್ರೆಸ್ ಈ ಬಾರಿ ಚುನಾವಣೆಯಲ್ಲಿ ಬಿಜೆಪಿಗೆ ಸೆಡ್ಡು ಹೊಡೆಯಲು ರಣತಂತ್ರ ರೂಪಿಸುತ್ತಿದೆ. ಆದರೆ ಕ್ಷೇತ್ರದಲ್ಲಿ ಕೈ ಟಿಕೆಟ್ ಆಕಾಂಕ್ಷಿಗಳು ಹಲವರಿದ್ದಾರೆ. ಪ್ರಮುಖವಾಗಿ ಉಮಾಪತಿ ಶ್ರೀನಿವಾಸ ಗೌಡ ತಮಗೇ ಟಿಕೆಟ್ ಖಚಿತ ಎಂದು ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ. ಬೂತ್ ಅಧ್ಯಕ್ಷರು ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿಗಳಾದ ಕವಿತಾ ರೆಡ್ಡಿ ಕೂಡ ಟಿಕೆಟ್ ಗಿಟ್ಟಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಜೆಡಿಎಸ್‌ನಿಂದ ನಾರಾಯಣರಾಜು ಟಿಕೆಟ್ ನಿರೀಕ್ಷಿಸಿದ್ದಾರೆ. ಆಡಳಿತ ವಿರೋಧಿ ಅಲೆಯನ್ನು ಬಂಡವಾಳವಾಗಿಸಿ ಸತೀಶ್ ರೆಡ್ಡಿಯನ್ನು ಮಣಿಸಲು ಕಾಂಗ್ರೆಸ್ ಕಸರತ್ತು ಮಾಡುತ್ತಿದೆ. ಆದರೆ ಸತೀಶ್ ರೆಡ್ಡಿ ಹಣಿಯಲು ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಅನಿವಾರ್ಯವಾಗಿದೆ.
ಕ್ಷೇತ್ರದ ಜಾತಿ ಸಮೀಕರಣ ಹೇಗಿದೆ?: ಕ್ಷೇತ್ರದಲ್ಲಿ ಕನ್ನಡೇತರ ಮತದಾರರ ಸಂಖ್ಯೆ ಗಣನೀಯವಾಗಿದೆ. ಚುನಾವಣೆಯಲ್ಲಿ ರೆಡ್ಡಿ, ಒಕ್ಕಲಿಗ ಸಮುದಾಯದವರೇ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಕ್ಷೇತ್ರದಲ್ಲಿ ಒಟ್ಟು 4,32,752 ಮತದಾರರು ಇದ್ದಾರೆ. ಈ ಪೈಕಿ 2,32,487 ಪುರುಷ ಮತದಾರರು ಇದ್ದಾರೆ. 2,00,194 ಮಹಿಳಾ ಮತದಾರರು ಮತ್ತು ಇತರೆ 71 ಮತದಾರರಿದ್ದಾರೆ.
ಇನ್ನು ಎಸ್ಸಿ, ಎಸ್ಟಿ 1,23,300 ಮತದಾರರು, ಒಕ್ಕಲಿಗರು 95,000 ಮತದಾರರು, ಲಿಂಗಾಯತರು ಸುಮಾರು 25,000 ಮತದಾರರು, ಬ್ರಾಹ್ಮಣರು ಮತದಾರರ ಸಂಖ್ಯೆ ಸುಮಾರು 30,000, ಒಬಿಸಿ ಸುಮಾರು 55,000, ಅಲ್ಪಸಂಖ್ಯಾತ ಮತದಾರರ ಸಂಖ್ಯೆ ಸುಮಾರು 30,000, ಇತರೆ ಸಮುದಾಯದ ಮತದಾರರ ಸಂಖ್ಯೆ ಸುಮಾರು 80,000 ಇದೆ.
2018ರ ಚುನಾವಣಾ ಫಲಿತಾಂಶ: ಕ್ಷೇತ್ರದಲ್ಲಿ ಬಹುವಾಗಿ ಎರಡು ರಾಷ್ಟ್ರೀಯ ಪಕ್ಷಗಳದ್ದೇ ಹಣಾಹಣಿ. ಬಿಜೆಪಿ-ಕಾಂಗ್ರೆಸ್ ನಡುವೆ ಪೈಪೋಟಿ ನಡೆಯುತ್ತೆ. ಹ್ಯಾಟ್ರಿಕ್ ಸಾಧಿಸಿರುವ ಹಾಲಿ ಶಾಸಕ ಸತೀಶ್ ರೆಡ್ಡಿ ನಾಲ್ಕನೇ ಬಾರಿಯೂ ಜಯಭೇರಿ ಬಾರಿಸಲು ಮುಂದಡಿ ಇಟ್ಟಿದ್ದಾರೆ. ಕಳೆದ ಬಾರಿ ಬೊಮ್ಮನಹಳ್ಳಿಯಲ್ಲಿ ಬಿಜೆಪಿ ಹಾಲಿ ಶಾಸಕ ಸತೀಶ್ ರೆಡ್ಡಿ 1,11,863 ಮತಗಳನ್ನು ಗಳಿಸಿದ್ದರು.
ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಸುಷ್ಮಾ ರಾಜಗೋಪಾಲ ರೆಡ್ಡಿ 64,701 ಮತಗಳು ಪಡೆದಿದ್ದರು. ಜೆಡಿಎಸ್ ಅಭ್ಯರ್ಥಿ ಟಿಆರ್ ಪ್ರಸಾದ್ 9,379 ಮತಗಳನ್ನು ಗಳಿಸಿದ್ದರು. ಸತೀಶ್ ರೆಡ್ಡಿ ಒಟ್ಟು 47,162 ಮತಗಳ ಅಂತರದಿಂದ ಜಯಗಳಿಸಿದ್ದರು. ಸತೀಶ್ ರೆಡ್ಡಿ ಕಳೆದ ಬಾರಿ ಒಟ್ಟು ಮತದಾನದ ಪೈಕಿ 57% ಮತ ಪಾಲು ಪಡೆದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ 33% ಮತ ಪಾಲು ಪಡೆದಿದ್ದರೆ, ಜೆಡಿಎಸ್ ಅಭ್ಯರ್ಥಿ ಕೇವಲ 5% ಮತ ಗಳಿಕೆ ಮಾಡಿದ್ದರು.
ಇದನ್ನೂ ಓದಿ: ಯಾವ ಪಕ್ಷಕ್ಕೆ ಗೆಲುವಿನ ಬೆಣ್ಣೆ: ಎಸ್ ಎಸ್ ಮಲ್ಲಿಕಾರ್ಜುನ್ಗೆ ಯಾರಾಗಲಿದ್ದಾರೆ ಎದುರಾಳಿ?