ಹಾವೇರಿ: ದೇಶ-ವಿದೇಶಗಳ ಬಾನಾಡಿಗಳ ಆಶ್ರಯತಾಣವಾಗಿರುವ ಹಾವೇರಿಯ ಹೆಗ್ಗೇರಿಗೆ ಇದೀಗ ಹೊಸ ಅತಿಥಿಗಳು ಬಂದಿದ್ದಾರೆ. ಹೆಗ್ಗೇರಿಗೆ ಯುಟಿಪಿ ಕಾಲುವೆಯಿಂದ ನೀರು ತುಂಬಿಸಲಾಗಿದ್ದು, ಈ ನೀರಿನೊಂದಿಗೆ ನೀರುನಾಯಿಗಳ ಹಿಂಡು ಆಗಮಿಸಿವೆ. 16ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿರುವ ಇವು ಬೆಳಗ್ಗೆ ಮತ್ತು ಸಂಜೆ ಕೆರೆಯಲ್ಲಿ ಕಾಣಸಿಗುತ್ತಿವೆ.
ಕೆರೆಯಲ್ಲಿ ಹೇರಳವಾಗಿ ಸಿಗುವ ಮೀನು, ಏಡಿ ಮತ್ತು ಕಪ್ಪೆ ಸೇರಿದಂತೆ ವಿವಿಧ ಜಲಚರಗಳು ಇವುಗಳಿಗೆ ಆಹಾರ. ನದಿ ಪಕ್ಕದ ಕಲ್ಲಿನ ಪೊಟರೆಗಳಲ್ಲಿ ವಾಸಿಸುವ ನೀರುನಾಯಿಗಳು ತುಂಗಭದ್ರಾ ನದಿಯನ್ನು ತಮ್ಮ ಅವಾಸಸ್ಥಾನ ಮಾಡಿಕೊಂಡಿವೆ. ವಿವಿಧ ಕೆರೆಗಳಿಗೆ ಮಳೆಗಾಲದಲ್ಲಿ ಯುಟಿಪಿ ಕಾಲುವೆ ಮೂಲಕ ನೀರು ಹರಿಸಲಾಗುತ್ತದೆ. ಇದರೊಂದಿಗೆ ಬರುವ ನೀರುನಾಯಿಗಳು ಹೆಗ್ಗೇರಿ, ಹೊಂಬರಡಿ, ಚಿಕ್ಕಲಿಂಗದಹಳ್ಳಿ ಹಾಗು ಗುತ್ತಲ ಸೇರಿದಂತೆ ದೊಡ್ಡಕೆರೆಗಳಲ್ಲಿ ಕಂಡುಬರುತ್ತಿವೆ.
ಪರಿಸರಪ್ರೇಮಿಗಳು, ವಾಯುವಿಹಾರಿಗಳಿಗೆ ನೀರುನಾಯಿಗಳ ದರ್ಶನ ನೀಡುತ್ತಿವೆ. ಪುಸ್ತಕಗಳಲ್ಲಿ ಕಾಣಸಿಗುವ ಇವು ಸಸ್ತನಿಗಳು.
2 ನೀರುನಾಯಿಗಳನ್ನು ಕೊಂದು ಹಾಕಿದ ದುಷ್ಕರ್ಮಿಗಳು!: ಮನುಷ್ಯರಿಗೆ ತೊಂದರೆ ಕೊಡದೆ ತಮ್ಮಷ್ಟಕ್ಕೆ ತಾವಿದ್ದರೂ ದುಷ್ಕರ್ಮಿಗಳು ಎರಡು ನೀರುನಾಯಿಗಳನ್ನು ಹೊಡೆದು ಕೊಂದಿದ್ದಾರೆ. ಇದರಿಂದ ಎಚ್ಚೆತ್ತ ಪರಿಸರಪ್ರೇಮಿಗಳು ಅರಣ್ಯ ಇಲಾಖೆಗೆ ದೂರು ನೀಡಿದ್ದು, ಇದೀಗ ಎಚ್ಚರಿಕೆಯ ಫಲಕಗಳನ್ನು ಹಾಕಲಾಗಿದೆ.
"ನೀರುನಾಯಿಗಳು ನಮ್ಮ ಹೆಗ್ಗೇರಿಗೆ ಆಗಮಿಸಿದ್ದು ಅಪರೂಪ. ಅವುಗಳನ್ನು ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ. ದಯವಿಟ್ಟು ಅವುಗಳ ನೋಡಿ ಆನಂದಿಸಿ, ತೊಂದರೆ ನೀಡಬೇಡಿ" ಎಂದು ಪರಿಸರ ಪ್ರೇಮಿಗಳು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ದಾವಣಗೆರೆಯಲ್ಲಿ ಟ್ರ್ಯಾಕ್ಟರ್ ಓಡಿಸುವ ಟೂರ್ನಿ: ಹಳ್ಳಿ ಚಾಲಕರ ಪ್ರತಿಭೆ ಅನಾವರಣ - Tractor Tournament