ಬೆಂಗಳೂರು: ಇಂದಿನಿಂದ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾಗಲಿದೆ. ಗೋವುಗಳ ಹತ್ಯೆ ಹಾಗೂ ಅಕ್ರಮ ಸಾಗಣೆ ಸಂಪೂರ್ಣ ನಿಷೇಧಿಸಲಾಗಿದೆ.
ಇತ್ತೀಚೆಗಷ್ಟೇ ರಾಜ್ಯಪಾಲರು ಗೋಹತ್ಯೆ ನಿಷೇಧ ಸುಗ್ರೀವಾಜ್ಞೆಗೆ ಅಂಕಿತ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ ಜನವರಿ 18ರಿಂದ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಿ ಆದೇಶ ಹೊರಡಿಸಿತ್ತು.
ಪಶುಸಂಗೋಪನಾ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಬಿ.ಎನ್ ಪ್ರವೀಣ್ ಆದೇಶ ಹೊರಡಿಸಿದ್ದು, ರಾಜ್ಯಪತ್ರವನ್ನು ಪ್ರಕಟಿಸಲಾಗಿದೆ. ರಾಜ್ಯದಲ್ಲಿ ಕಾಯ್ದೆ ಸಂಪೂರ್ಣ ಜಾರಿಗೆ ಬರಲಿದೆ. ನಿಯಮಗಳನ್ನು ರೂಪಿಸುವ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು ಸದ್ಯದಲ್ಲೇ ಅವುಗಳನ್ನು ಬಿಡುಗಡೆ ಮಾಡಲಾಗುವುದು. ಜಾನುವಾರು ಸಾಗಾಣಿಕೆಗೆ ಸಂಬಂಧಿಸಿದಂತೆ ಕೂಡಲೇ ನಿಯಮಗಳನ್ನು ರೂಪಿಸಿ ಜಾರಿಗೊಳಿಸಲಾಗುವುದು. ರಾಜ್ಯದಲ್ಲಿ ರೈತರು, ಕೃಷಿ ಉದ್ದೇಶಕ್ಕಾಗಿ ಜಾನುವಾರು ಸಾಗಣೆ ಮಾಡುವವರು ಯಾವುದೇ ಕಾರಣಕ್ಕೂ ಗೊಂದಲಕ್ಕೀಡಾಗಬಾರದು ಎಂದು ಪತ್ರಿಕಾ ಪ್ರಕಟಣೆ ಮೂಲಕ ಪಶುಸಂಗೋಪನೆ ಹಜ್ ಮತ್ತು ವಕ್ಫ್ ಸಚಿವ ಪ್ರಭು ಚವ್ಹಾಣ್ ರೈತರಲ್ಲಿ ಮನವಿ ಮಾಡಿದ್ದಾರೆ.
ಸರ್ಕಾರವು ಪ್ರಕಟಿಸಿರುವ ಕರಡು ನಿಯಮದಲ್ಲಿನ ಅಂಶ ಏನು?:
- ಹಸುಗಳನ್ನು ಕೃಷಿ, ಪಶುಸಂಗೋಪನೆ ಉದ್ದೇಶಕ್ಕಾಗಿ ಸಾಗಣೆ ಮಾಡುವವರು ಸಾರಿಗೆ ದೃಢೀಕರಣ ಪತ್ರ, ಮಾಲೀಕತ್ವ ದಾಖಲೆ ಹಾಗೂ ಪಶು ಪ್ರಥಮ ಚಿಕಿತ್ಸಾ ಪರಿಕರಗಳನ್ನು ಹೊಂದಿರಬೇಕು. 15 ಕಿ.ಮೀ. ವ್ಯಾಪ್ತಿಯೊಳಗೆ ಎರಡು ಹಸು ಅಥವಾ ಅವುಗಳ ಕರುಗಳನ್ನು ಸಾಗಣೆ ಮಾಡಲು ಯಾವುದೇ ಸಾರಿಗೆ ದಾಖಲಾತಿಯ ಅಗತ್ಯ ಇಲ್ಲ ಎಂದು ಕರಡು ನಿಯಮದಲ್ಲಿ ತಿಳಿಸಲಾಗಿದೆ.
- ಹಸು ಸಾಗಣೆ ಮಾಡುವ ಪ್ರತಿ ಸರಕು ಸಾಗಣೆ ವಾಹನದ ಮೇಲೆ ಕೆಂಪು ಬಣ್ಣದ ದಪ್ಪ ಅಕ್ಷರದಲ್ಲಿ ರವಾನಿಸುವವರು, ಸ್ವೀಕರಿಸುವವರ ಹೆಸರು, ವಿಳಾಸ ಹಾಗೂ ದೂರವಾಣಿ ಸಂಖ್ಯೆಯನ್ನು ಬರೆದಿರಬೇಕು. ಜೊತೆಗೆ ಸಾಗಣೆ ಮಾಡುತ್ತಿರುವ ಹಸುಗಳ ಸಂಖ್ಯೆ, ತಳಿ ಹಾಗೂ ಪೂರೈಸಲಾದ ಆಹಾರ ಪ್ರಮಾಣವನ್ನು ಬರೆದಿರಬೇಕು.
- ಸಾಗಣೆ ಮಾಡುವ ಹಸುಗಳಿಗೆ ಯಥೇಚ್ಛವಾಗಿ ಹುಲ್ಲು ತಿನ್ನಿಸಿ, ನೀರು ಕುಡಿಸಿರಬೇಕು. ಯಥೇಚ್ಛ ಆಹಾರ, ಹುಲ್ಲು, ನೀರನ್ನು ಸಂಗ್ರಹಿಸಿರಬೇಕು. ಆರು ತಿಂಗಳ ಗರ್ಭಿಣಿ ಹಸುವನ್ನು ಸಾಗಣೆ ಮಾಡುವ ಹಾಗಿಲ್ಲ. ಆದರೆ, ಚಿಕಿತ್ಸೆ ಉದ್ದೇಶಕ್ಕಾಗಿ ಗರ್ಭಿಣಿ ಹಸುವನ್ನು ಸಾಗಣೆ ಮಾಡಬಹುದಾಗಿದೆ.
- ಹಸುವನ್ನು ಸಾಗಿಸುವ ವಾಹನಗಳು ಸೂಕ್ತ ವ್ಯವಸ್ಥೆಯನ್ನು ಹೊಂದಿರಬೇಕು. ಹಸು ನಿಲ್ಲಿಸಲು ವಾಹನದಲ್ಲಿ ಖಾಯಂ ವಿಭಜನೆಗಳನ್ನು ಮಾಡಿರಬೇಕು. 100 ಕೆ.ಜಿ ಹಸುವನ್ನು ಕೊಂಡೊಯ್ಯಲು 1.5 ಚದರ ಮೀಟರ್ ಜಾಗದ ವಿಭಜನೆ ಮಾಡಿರಬೇಕು. 100 ಕೆ.ಜಿ. ಮೇಲ್ಪಟ್ಟ ಹಸುವನ್ನು ಕೊಂಡೊಯ್ಯಲು ವಾಹನದಲ್ಲಿ 2 ಚದರ ಮೀಟರ್ ಜಾಗದ ವಿಭಜನೆ ಮಾಡಿರಬೇಕು ಎಂದು ಕರಡು ನಿಯಮದಲ್ಲಿ ತಿಳಿಸಲಾಗಿದೆ.
- ಹಸು ಸಾಗಿಸುವ ವಾಹನದ ವೇಗ ಪ್ರತಿ ಗಂಟೆಗೆ 25 ಕಿ.ಮೀ. ಮೀರಬಾರದು. ಹಸುಗಳನ್ನು ರಾತ್ರಿ 8 ಗಂಟೆಯಿಂದ ಬೆಳಗ್ಗೆ 6 ಗಂಟೆ ಅವಧಿಯಲ್ಲಿ ಸಾಗಾಟ ಮಾಡಬಾರದು. ಬೇಸಿಗೆ ಸಮಯವಾದ ಮಾರ್ಚ್ ನಿಂದ ಮೇ ಅವಧಿಯಲ್ಲಿ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ಹಸುವನ್ನು ಸಾಗಾಟ ಮಾಡುವ ಹಾಗಿಲ್ಲ ಎಂದು ತಿಳಿಸಲಾಗಿದೆ.