ಬೆಂಗಳೂರು: ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗಬೇಕು ಎಂದು ಆಗ್ರಹಿಸಿ ವಿವಿಧ ಕನ್ನಡ ಪರ ಸಂಘಟನೆಗಳು ಒಂದು ದಿನ ಅಹೋರಾತ್ರಿ ಉಪವಾಸ ಸತ್ಯಾಗ್ರಹವನ್ನು ನಡೆಸಿದರು.
ಕನ್ನಡ ಪರ ಸಂಘಟನೆ ಸದಸ್ಯ ಮಣಿಕಂಠ ಈಟಿವಿ ಭಾರತದೊಂದಿಗೆ ಮಾತನಾಡಿ, ಕರ್ನಾಟಕದಲ್ಲಿನ ಕನ್ನಡಿಗರಿಗೆ ಉದ್ಯೋಗ ಸಿಗಬೇಕು ಎಂಬ ಅಚಲ ನಿರ್ಧಾರದೊಂದಿಗೆ ಹೋರಾಟಗಾರರು ಧರಣಿ ನಡೆಸುತ್ತಿದ್ದಾರೆ. ಧರಣಿ ನಡೆಯುವ ಸ್ಥಳಕ್ಕೆ ಯಾವ ಪಕ್ಷದ ರಾಜಕಾರಣಿಗಳು ಸಹ ತಲೆ ಹಾಕಿಲ್ಲ. ಅಲ್ಲದೆ ಸರ್ಕಾರದ ಪರವಾಗಿಯೂ ಯಾರು ಹೋರಟ ನಡೆಯುವ ಸ್ಥಳಕ್ಕೆ ಬಂದಿಲ್ಲ. ಇದಕ್ಕೆ ಬೇಸರ ವ್ಯಕ್ತಪಡಿಸಿದ ಹೋರಾಟಗಾರರು, ಇದು ಸರ್ಕಾರದ ಕೆಲಸ. ಆದರೆ ಯಾರು ಸಹ ಇತ್ತ ತಲೆ ಹಾಕಿಲ್ಲ. ನಾಳೆ 11 ಗಂಟೆಗೆ ನಮ್ಮ ಸತ್ಯಾಗ್ರಹ ಕೊನೆಗೊಳಿಸಿ ನಾವು ಸಭೆ ನಡೆಸಿ ಮುಂದಿನ ಹೋರಟದ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದರು.
ಸ್ವಾತಂತ್ರ್ಯ ಬಂದ ದಿವಸ ಇಂತಹ ಚಳುವಳಿ ಬೇಕಿತ್ತಾ ಎಂಬ ಪ್ರಶ್ನೆಗೆ ಪತ್ರಿಕ್ರಿಯಿಸಿದ ಹೋರಟಗಾರರು, ನಮಗೆ ಚಳುವಳಿಯಿಂದಲೇ ಸ್ವಾತಂತ್ರ್ಯ ಸಿಕ್ಕಿದೆ. ಈಗ ಚಳುವಳಿ ಇಂದಲೇ ಕನ್ನಡಿಗರಿಗೆ ಕರ್ನಾಟಕದಲ್ಲಿ ಉದ್ಯೋಗ ಸಿಗಲಿ. ನಮ್ಮ ರಾಜ್ಯದಲ್ಲಿ ಪ್ರತಿಭಾನ್ವಿತ ಯುವಕರಿದ್ದಾರೆ. ಆದರೆ ಅವರು ಉದ್ಯೋಗ ವಂಚಿತರಾಗಿದ್ದಾರೆ. ಸರ್ಕಾರ ಕೂಡಲೇ ಕಾನೂನು ತಿದ್ದುಪಡಿ ಮಾಡಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಜಾರಿಗೆ ತರಬೇಕು ಎಂದು ಹೋರಾಟಗಾರರು ಸರ್ಕಾರಕ್ಕೆ ಆಗ್ರಹಿಸಿದರು. ಉಪವಾಸ ಸತ್ಯಾಗ್ರಹದಲ್ಲಿ ಯುವಕ-ಯುವತಿಯರು ಸೇರಿದಂತೆ ನೂರಕ್ಕೂ ಹೆಚ್ಚಿನ ಮಂದಿ ಭಾಗಿಯಾಗಿದ್ದರು.