ಮಹದೇವಪುರ: ಮಹದೇವಪುರದ ವೈಟ್ ಫೀಲ್ಡ್ನ ಫೋರಂ ಮಾಲ್ನಲ್ಲಿ ಪೊಗರು ಚಿತ್ರತಂಡ, ರಾಜೇಶ್ ಮತ್ತು ಡಬ್ಲ್ಯೂಟಿಎಫ್ನ ಸದಸ್ಯರು ಹಾಗೂ ಸಚಿವ ಅರವಿಂದ ಲಿಂಬಾವಳಿ ಸಿನಿಮಾ ವೀಕ್ಷಣೆ ಮಾಡಿದರು.
ಇದಕ್ಕೂ ಮುನ್ನ ವೈಟ್ ಫೀಲ್ಡ್ನ ಫೋರಂ ಮಾಲ್ಗೆ ಭೇಟಿ ನೀಡಿದ್ದ ಪೋಗರು ಚಿತ್ರತಂಡ, ಅಭಿಮಾನಿಗಳಿಗೆ ಮನರಂಜನೆಯ ಮಹಾಪೂರ ನೀಡಿತು. ಅಭಿಮಾನಿಗಳ ಕೋರಿಕೆ ಮೇರೆಗೆ ಸಿನಿಮಾದ ಡೈಲಾಗ್ ಹೇಳಿ ನೆರೆದಿದ್ದ ಸಾವಿರಾರು ಅಭಿಮಾನಿಗಳನ್ನು ನಟ ಧ್ರುವ ಸರ್ಜಾ ರಂಜಿಸಿದರು. ಇದೇ ವೇಳೆ ರಾಜೇಶ್ ಮತ್ತು ಅವರ ತಂಡ ಧ್ರುವ ಸರ್ಜಾ ಅವರಿಗೆ ಶ್ರೀ ಆಂಜನೇಯನ ಕಂಚಿನ ವಿಗ್ರಹವನ್ನು ನೀಡಿ ಗೌರವಿಸಿದರು. ನಿರ್ದೇಶಕ ನಂದಕಿಶೋರ್ ಅವರಿಗೆ ಬೆಳ್ಳಿ ಗಣೇಶನ ಮೂರ್ತಿಯನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಧ್ರುವ ಸರ್ಜಾ, ಅಭಿಮಾನಿಗಳಿಗೆ ನಾನು ಸದಾ ಚಿರರುಣಿ, ನಿಮ್ಮ ಅಭಿಮಾನ ನಮಗೆ ಉತ್ಸಾಹ ನೀಡಿದೆ. ದಯವಿಟ್ಟು ಎಲ್ಲರೂ 'ಪೊಗರು' ಸಿನಿಮಾ ನೋಡಿ ನಮ್ಮನ್ನು ಆಶೀರ್ವದಿಸಿ ಎಂದು ಮನವಿ ಮಾಡಿದರು.
ಈ ವೇಳೆ ನಿರ್ದೇಶಕ ನಂದಕಿಶೋರ್ ಪೊಗರು ಚಿತ್ರದ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಚಿತ್ರದಲ್ಲಿ ಯಾವ ಸಮುದಾಯಕ್ಕೂ ನೋವು ಉಂಟು ಮಾಡುವ ಉದ್ದೇಶವಿಲ್ಲ. ಸಂದರ್ಭಕ್ಕೆ ತಕ್ಕಂತೆ ಚಿತ್ರ ಕಥೆ ರೂಪಿಸಲಾಗಿತು. ಬ್ರಾಹ್ಮಣ ಸಮುದಾಯಕ್ಕೆ ಬೇಸರವಾಗಿದೆ ಎಂಬುದು ಗೊತ್ತಾಗಿದೆ. ಹಾಗಾಗಿ ಈಗಾಗಲೇ ಕ್ಷಮೆ ಕೇಳಿದ್ದೇನೆ. ಅಷ್ಟೇ ಅಲ್ಲದೆ ಬ್ರಾಹ್ಮಣರಿಗೆ ಅವಹೇಳನ ಮಾಡುವ ರೀತಿಯಲ್ಲಿರುವ ದೃಶ್ಯಕ್ಕೆ ಕತ್ತರಿ ಹಾಕಲಾಗುವುದೆಂದು ಸ್ಪಷ್ಟಪಡಿಸಿದರು.
ನಂತರ ಕಾರ್ಯಕ್ರಮಕ್ಕೆ ಆಗಮಿಸಿದ್ದ ಬ್ರಾಹ್ಮಣ ಸಮಾಜದ ಅಧ್ಯಕ್ಷರಾದ ಸಚ್ಚಿದಾನಂದ ಅವರಲ್ಲಿ ನಿರ್ದೇಶಕ ನಂದಕಿಶೋರ್ ಕ್ಷಮೆಯಾಚಿಸಿದರು.