ಬೆಂಗಳೂರು: ಮೇಕೆದಾಟು ಕಾಮಗಾರಿಗೆ ಶೀಘ್ರ ಚಾಲನೆ ನೀಡಿ ಒಂದು ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿ ಕನ್ನಡ ಪರ ಸಂಘಟನೆಯ ನೂರಾರು ಕಾರ್ಯಕರ್ತರು ಕರುನಾಡ ವಿಜಯಸೇನೆ ರಾಜ್ಯಾಧ್ಯಕ್ಷ ದೀಪಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಆನಂದ್ ಸರ್ಕಲ್ ಸಮೀಪ ಮಹಾತ್ಮ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪ್ರತಿಭಟನೆಗೆ ಚಾಲನೆ ನೀಡಿದ ಬಳಿಕೆ ಮಾತನಾಡಿದ ದೀಪಕ್ ಅವರು, ಮೇಕೆದಾಟು ಯೋಜನೆ ಕರ್ನಾಟಕದ ಹಕ್ಕು. ಇದರ ಜಾರಿಗೆ ಯಾವುದೇ ರೀತಿಯ ಕಾನೂನು ಅಡ್ಡಿಯಿಲ್ಲ. ನ್ಯಾಯಮಂಡಳಿಯಿಂದ ತೊಂದರೆಯಿದೆ ಎಂದು ಬಿಜೆಪಿ ನಾಯಕರು ಸುಳ್ಳು ಹೇಳುತ್ತಿದ್ದಾರೆ. ವರ್ಷದೊಳಗೆ ಪೂರ್ಣಗೊಳ್ಳಬೇಕೆಂಬ ಕಾಲಮಿತಿ ಇಟ್ಟುಕೊಂಡು ಮೇಕೆದಾಟು ಯೋಜನೆಯ ಕಾಮಗಾರಿಗೆ ಕೂಡಲೇ ಗುದ್ದಲಿ ಪೂಜೆ ನೆರವೇರಿಸಬೇಕು ಎಂದು ಆಗ್ರಹಿಸಿದರು.
ಮೇಕೆದಾಟು ವಿಚಾರದಲ್ಲಿ ಕೇಂದ್ರ ಸರ್ಕಾರವು ತಮಿಳುನಾಡಿನ ಪರವಾಗಿದೆ ಎಂದು ತಮಿಳುನಾಡಿನ ಬಿಜೆಪಿ ಮುಖಂಡರು ಹೇಳುತ್ತಿದ್ದಾರೆ. ಡಬಲ್ ಇಂಜಿನ್ ಆಡಳಿತ ನೀಡುವುದಾಗಿ ಹೇಳಿದ್ದ ಬಿಜೆಪಿ ಡಬಲ್ ಸ್ಟ್ಯಾಂಡರ್ಡ್ ಆಡಳಿತ ನೀಡುತ್ತಿದೆ. ತಮಿಳುನಾಡಿನಲ್ಲೇ ಒಂದು ನಿಲುವು, ಕರ್ನಾಟಕದಲ್ಲಿ ಮತ್ತೊಂದು ನಿಲುವು ತೆಗೆದುಕೊಳ್ಳುವ ಮೂಲಕ ವಿನಾಕಾರಣ ವಿವಾದ ಸೃಷ್ಟಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಎಪ್ಪತ್ತು ವರ್ಷಗಳಿಂದಲೂ ಕೇಂದ್ರ ಸರ್ಕಾರವು ನೀರಾವರಿ ಯೋಜನೆಗಳಲ್ಲಿ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ. ಇದನ್ನು ವಿರೋಧಿಸಿ ರಾಜ್ಯಕ್ಕೆ ನ್ಯಾಯ ದೊರೆಕಿಸಿಕೊಡಲು ರಾಜ್ಯವನ್ನಾಳಿದ ಎಲ್ಲ ಸರ್ಕಾರಗಳು ವಿಫಲವಾಗಿದೆ. ಮೇಕೆದಾಟು ಯೋಜನೆಯಿಂದ ಕುಡಿಯುವುದಕ್ಕಷ್ಟೇ ನೀರನ್ನು ಬಳಸಿಕೊಳ್ಳಲಾಗುತ್ತದೆ. ಕೃಷಿಗೆ ಆ ನೀರನ್ನು ಬಳಸುವುದಿಲ್ಲ. ಆದ್ದರಿಂದ ತಮಿಳುನಾಡಿಗೆ ಇದರಿಂದ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ.
ಅಲ್ಲಿನ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ವಿನಾಕಾರಣ ಮೇಕೆದಾಟು ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ರಾಜ್ಯಕ್ಕೆ ದ್ರೋಹ ಬಗೆಯುತ್ತಿರುವ ಎರಡೂ ಪಕ್ಷಗಳಿಗೆ ಕನ್ನಡಿಗರು, ಕನ್ನಡ ಪರ ಸಂಘಟನೆಗಳು ತಕ್ಕ ಪಾಠ ಕಲಿಸುತ್ತವೆ ಎಂದರು. ಪ್ರತಿಭಟನೆಯಲ್ಲಿ ತಮಿಳುನಾಡು ಸರ್ಕಾರ, ಅಣ್ಣಾಮಲೈ ವಿರುದ್ಧ ಕಾರ್ಯಕರ್ತರು ಘೋಷಣೆ ಕೂಗಿದರು.