ಬೆಂಗಳೂರು: ಕರ್ನಾಟಕದಲ್ಲಿ ಕನ್ನಡ ಭಾಷೆ ನಶಿಸಿ ಹೋಗುತ್ತಿದೆ ಎಂಬ ಕೂಗು ಬಹಳ ಹಿಂದಿನಿಂದಲೂ ಇದೆ. ಹೀಗಾಗಿಯೇ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ 'ಸಾರಿಗೆ ವಲಯದಲ್ಲಿ ಕನ್ನಡ ಜಾಗೃತಿ' ಅಭಿಯಾನ ನಡೆಯುತ್ತಿದೆ. ಸಾರಿಗೆ ವಲಯದಲ್ಲಿ ಕನ್ನಡ ಅನುಷ್ಠಾನಕ್ಕೆ ಸಂಬಂಧಿಸಿದ ಹಕ್ಕೊತ್ತಾಯ ಹಾಗೂ ಮನವಿ ಪತ್ರವನ್ನು ಇಂದು ಕಸಪಾ ತಂಡದಿಂದ ಸಚಿವ ಶ್ರೀರಾಮುಲು ಅವರಿಗೆ ನೀಡಿದರು.
ಈ ಪತ್ರದಲ್ಲಿ ಪ್ರಯಾಣಿಕರ ಟಿಕೆಟ್ ಬುಕ್ಕಿಂಗ್ ಧೃಡೀಕರಣಗಳಲ್ಲಿ ಅಥವಾ ರಶೀದಿಗಳ ಹಿಂದೆ ಮತ್ತು ಯಾವುದೇ ಇತರ ಪ್ರತಿಗಳಲ್ಲಿ ಕನ್ನಡಪರ ಸಾಮಾಜಿಕ ಕಳಕಳಿವುಳ್ಳ ಘೋಷಣೆಗಳು ಹಾಗೂ ಕನ್ನಡ ಕಾಯಕ ವರ್ಷದ ಘೋಷಣೆಗಳು, ಬರಹಗಳನ್ನು ಮುದ್ರಿಸಬೇಕು. ಪ್ರಯಾಣಿಕರಿಗೆ ಕನ್ನಡದಲ್ಲಿ ಸಂವಹನ ಮಾಡುವ ಅನುವಾದ ಸೂಚಿ ಇರಬೇಕು. ಇದು ಅನ್ಯಭಾಷೆ ಗ್ರಾಹಕರಿಗೆ ಉಪಯುಕ್ತವಾಗಿರಬೇಕು. ವಾಹನಗಳಲ್ಲಿ ಕನ್ನಡ ಕಾಯಕ ವರ್ಷದ ಘೋಷವಾಕ್ಯಗಳಿರುವ ಫಲಕ(ಸ್ಟಿಕರ್)ಗಳನ್ನು ಲಗತ್ತಿಸಬೇಕು.
ಇಲಾಖೆಗಳಲ್ಲಿನ ಜಾಲತಾಣ/ಸಾಮಾಜಿಕ ಜಾಲತಾಣ/ಪ್ರಧಾನ ಪುಟ(ಡಿಫಾಲ್ಟ್ ಪೇಜ್) ಕನ್ನಡದಲ್ಲಿ ರೂಪಿಸುವುದು ಮತ್ತು ಒಳಪುಟದ ಮಾಹಿತಿಗಳೆಲ್ಲವು ಕನ್ನಡದಲ್ಲಿ ಇರತಕ್ಕದ್ದು. ಸುತ್ತೋಲೆ, ಆದೇಶ, ಸೂಚನಾ ಪತ್ರಗಳು, ಅಧಿಕೃತ ಜ್ಞಾಪನ, ಅಧಿಸೂಚನೆ, ನಡಾವಳಿಗಳೆಲ್ಲವನ್ನೂ ಕಡ್ಡಾಯವಾಗಿ ಕನ್ನಡದಲ್ಲಿ ಹೊರಡಿಸತಕ್ಕದ್ದು. ಸಚಿವಾಲಯ, ಇಲಾಖೆ, ಜಿಲ್ಲಾ ಮಟ್ಟದಲ್ಲಿ, ನಿಗಮ ಮಟ್ಟದಲ್ಲಿ ಕನ್ನಡ ಅನುಷ್ಠಾನ ವಿಭಾಗವನ್ನು ರಚಿಸಿ ಕನ್ನಡ ಅನುಷ್ಠಾನದ ಪ್ರಗತಿ ವಿವರವನ್ನುವ ಕ.ಅ.ಪ್ರಾಧಿಕಾರಕ್ಕೆ ಸಲ್ಲಿಸುವುದು.
ಕನ್ನಡ ಅನುಷ್ಠಾನದ ಪ್ರಗತಿ ವರದಿಯನ್ನು ಪ್ರತಿ ತಿಂಗಳು 5ನೇ ತಾರೀಖಿನ ಒಳಗೆ ನಿಗದಿತ ನಮೂನೆಯಲ್ಲಿ ಕ.ಅ.ಪ್ರಾಧಿಕಾರಕ್ಕೆ ಸಲ್ಲಿಸುವುದು. ಕನ್ನಡ ದಿನಪತ್ರಿಕೆಗಳಿಗೆ ಕನ್ನಡದಲ್ಲಿಯೇ ಕಡ್ಡಾಯವಾಗಿ ಜಾಹೀರಾತುಗಳನ್ನು ನೀಡುವಂತಾಗಬೇಕು ಎಂದು ಸಚಿವರಿಗೆ ಮನವಿ ನೀಡಿದರು.
ಸಾರಿಗೆ ವಲಯದ ಮುಖೇನ ಇಂದು ತೀವ್ರಗತಿಯಲ್ಲಿ ರಾಜ್ಯದ ಹೊರಗಿನ ಜನತೆಯ ಆಗಮನ - ನಿರ್ಗಮನ, ವಲಸೆ ಹೆಚ್ಚುತ್ತಿದೆ. ಸಾರಿಗೆ ವಲಯದಲ್ಲೂ ಕನ್ನಡ ಭಾಷೆಯ ಬಳಕೆ ಕುಂದದೇ ಗಟ್ಟಿಯಾಗಿ ನೆಲೆಯಾಗಬೇಕು. ಟಿಕೆಟ್, ಬಸ್, ಮೆಟ್ರೋದಂತಹ ಬೆರಳೆಣಿಕೆಯ ಪದಗಳನ್ನು ಬಿಟ್ಟರೆ ಉಳಿದ ಕಡೆ ಕನ್ನಡ ಪದಗಳನ್ನು ಬಳಸಬೇಕು. ಈ ಸದುದ್ದೇಶಕ್ಕಾಗಿ ಕನ್ನಡಿಗರೆಲ್ಲರೂ ಬದ್ಧರಾಗಿರಬೇಕೆಂಬುದು ಕಸಾಪ ಆಶಯವಾಗಿದೆ.
ಕರ್ನಾಟಕ ಎಂದು ನಾಮಕರಣ ಮಾಡಿದ, ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಅವರ ಜನ್ಮದಿನದ (ಆ.20) ಸಂದರ್ಭದಲ್ಲಿ ಸಾರಿಗೆ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಮೆಟ್ರೋ, ಬೇಂದ್ರೆ ಸಾರಿಗೆ ಮತ್ತು ವಿಮಾನ ನಿಲ್ದಾಣಗಳಲ್ಲಿ ಮೂರು ದಿನಗಳ ಕಾಲ ಕನ್ನಡ ಬಳಕೆ ಜಾಗೃತಿ ಅಭಿಯಾನವನ್ನು ಪ್ರಾಧಿಕಾರವು ಹಮ್ಮಿಕೊಂಡಿದೆ.
ಓದಿ: ಅಫ್ಘಾನಿಸ್ತಾನಕ್ಕೆ ಶಾಸಕ ಯತ್ನಾಳ್ ಗಡಿಪಾರು ಮಾಡಿ: ಸಿಎಂಗೆ ಕಾಂಗ್ರೆಸ್ ಒತ್ತಾಯ