ಬೆಂಗಳೂರು : ಅಭಿಮಾನಿ ಎಂದು ಪರಿಚಯವಾದ ಉದ್ಯಮಿಯೊಬ್ಬರಿಂದ ನಟ ಮಾಸ್ಟರ್ ಆನಂದ್ಗೆ 18.5 ಲಕ್ಷ ರೂ. ವಂಚಿಸಿದ ಪ್ರಕರಣ ಚಂದ್ರಾಲೇಔಟ್ ಠಾಣೆಯಲ್ಲಿ ದಾಖಲಾಗಿದೆ. ನಿವೇಶನ ನೀಡುವುದಾಗಿ ನಂಬಿಸಿ 2020ರ ಸೆಪ್ಟಂಬರ್ ನಿಂದ 2021ರ ಅಕ್ಟೋಬರ್ ಅವಧಿಯಲ್ಲಿ 18.5 ಲಕ್ಷ ರೂ. ಹಣ ಪಡೆದು ವಂಚಿಸಿದ್ದಾರೆಂದು ಮಲ್ಟಿ ಲೀಪ್ ವೆಂಚರ್ಸ್ ಕಂಪನಿಯ ಸುಧೀರ್ ಹಾಗೂ ಅವರ ಆಪ್ತ ಸಹಾಯಕಿ ಮನಿಕಾ ಎಂಬುವರ ವಿರುದ್ಧ ನಟ ದೂರು ನೀಡಿದ್ದಾರೆ.
2020 ರಲ್ಲಿ ಕೊಮ್ಮಘಟ್ಟದ ರಾಮಸಂದ್ರ ಗ್ರಾಮಕ್ಕೆ ಶೂಟಿಂಗ್ಗೆ ತೆರಳಿದ್ದ ವೇಳೆ ನಿವೇಶನಗಳ ವೀಕ್ಷಣೆ ಮಾಡಿದ್ದ ನಟ ಮಾಸ್ಟರ್ ಆನಂದ್, ಖರೀದಿಗೆ ಉತ್ಸಾಹ ತೋರಿದ್ದರು. ಈ ವೇಳೆ, ಪರಿಚಯವಾದ ಆರೋಪಿ ಮನಿಕಾ, ನಿವೇಶನ ಖರೀದಿಸಲು ಕೆಲ ಆಕರ್ಷಕ ಸಾಲ ಸೌಲಭ್ಯದ ಬಗ್ಗೆ ವಿವರಿಸಿದ್ದರು. ನಂತರ ರಾಮಸಂದ್ರದ ಎರಡು ಸಾವಿರ ಚದರ ಅಡಿ ವಿಸ್ತೀರ್ಣದ ನಿವೇಶನ ತೋರಿಸಿದ್ದ ಮಲ್ಟಿ ಲೀಪ್ ವೆಂಚರ್ಸ್ ಕಂಪನಿ ಜೊತೆ 70 ಲಕ್ಷಕ್ಕೆ ಆನಂದ್ ಮನೆ ಖರೀದಿ ಒಪ್ಪಂದ ಮಾಡಿಕೊಂಡಿದ್ದರು.
ಬಳಿಕ, ಹಂತ ಹಂತವಾಗಿ 18.5 ಲಕ್ಷವನ್ನು ನೀಡಿದ್ದರು. ಆನಂದ್ ಹಾಗೂ ಅವರ ಪತ್ನಿ ಯಶಸ್ವಿನಿ ಹೆಸರಿನಲ್ಲಿ ಮಲ್ಟಿ ಲೀಪ್ ಕಂಪನಿ ಖರೀದಿ ಕರಾರು ಪತ್ರ ಮಾಡಿಕೊಟ್ಟಿತ್ತು. ಆದರೆ, ಈ ನಡುವೆ ಕಂಪನಿ ನಿವೇಶನವನ್ನು ಬೇರೆಯವರಿಗೆ ಮಾರಾಟ ಮಾಡಿ ಕಳ್ಳಾಟ ಆಡಿದೆ. ಈ ಬಗ್ಗೆ ವಿಚಾರಿಸಿದಾಗ ಯಾವುದೇ ಸ್ಪಂದನೆ ಸಹ ನೀಡದೆ ಮುಂಗಡ ಹಣ ಸಹ ವಾಪಸ್ ಮಾಡಿಲ್ಲ ಎಂದು ದೂರಿರುವ ಆನಂದ್, ಚಂದ್ರಲೇಔಟ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಮಾಸ್ಟರ್ ಆನಂದ್ ನೀಡಿದ ದೂರಿನನ್ವಯ BUDS (ಅನಿಯಂತ್ರಿತ ಉಳಿತಾಯ ಯೋಜನೆಗಳ ನಿಷೇಧ) ಕಾಯ್ದೆ 2019 ರಡಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಟಿ ಉಷಾ ಬಂಧನ : ಕನ್ನಡ ಚಿತ್ರರಂಗದ ಸಹ ನಟಿ ಉಷಾ ಅಲಿಯಾಸ್ ಉಷಾ ರವಿಶಂಕರ್ ಅವರನ್ನು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ ವಿನೋಬ ನಗರ ಪೊಲೀಸರು ಜೂನ್ 17 ರಂದು ಬಂಧಿಸಿದ್ದರು. ಉಷಾ ಅವರು ಸುಮಾರು 6.50 ಲಕ್ಷ ರೂ. ಹಣ ಪಡೆದು ವಾಪಸ್ ನೀಡದೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ಶಿವಮೊಗ್ಗದ ಶರವಣನ್ ಎಂಬುವರು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ದೂರಿನ ಮೇರೆಗೆ ನ್ಯಾಯಾಲಯದ ಆದೇಶದ ಅನ್ವಯ ಪೊಲೀಸರು ಬಂಧಿಸಿ, ಆ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಕೂಡಾ ಮಾಡಿದ್ದರು.
ಇದನ್ನೂ ಓದಿ : Kannada actress arrested: ಪರಿಚಯ - ಪ್ರಣಯ, ದೋಖಾ ಆರೋಪ: ಕನ್ನಡದ ಸಹ ನಟಿಯ ಬಂಧನ
ಶರವಣನ್ ಎಂಬುವರು ಧಾರಾವಾಹಿ ಹಾಗೂ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದು, ನಟಿ ವಿರುದ್ಧ ಆರೋಪ ಮಾಡಿದ್ದರು. '2020 ರಲ್ಲಿ ಉಷಾ ಅವರ ಪರಿಚಯವಾಗಿ ಸ್ನೇಹಿತರಾಗಿದ್ದೆವು. ಬಳಿಕ, ಮೊಬೈಲ್ನಲ್ಲಿ ಚಾಟ್ ಮಾಡುತ್ತಾ ಪ್ರೀತಿ ಚಿಗುರಿತು. ನನ್ನನ್ನು ಮದುವೆಯಾಗುವುದಾಗಿ ಒಪ್ಪಿಕೊಂಡಿದ್ದರು. ಈ ಮಧ್ಯೆ ಉಷಾ ಅವರು ನನಗೆ ಸಮಸ್ಯೆ ಇದೆ ಹಣ ಬೇಕೆಂದು ನನ್ನ ಬಳಿ ಕೇಳಿದ್ದರು. ಆಗ ಬ್ಯಾಂಕ್ನಲ್ಲಿ ಸಾಲ ಮಾಡಿ, 5 ಲಕ್ಷ ರೂ. ನೀಡಿದ್ದೆ. ಅಲ್ಲದೇ, ನನ್ನ ಬಳಿ ಇದ್ದ ಕ್ರೆಡಿಟ್ ಕಾರ್ಡ್ ಪಡೆದು ಉಷಾ ಅದರಲ್ಲೂ ಸಹ ಸುಮಾರು 1.50 ಲಕ್ಷ ರೂ. ಹಣ ತೆಗೆದುಕೊಂಡಿದ್ದಾರೆ. ಬಳಿಕ, ಕೊಟ್ಟ ಹಣವನ್ನು ವಾಪಸ್ ಕೇಳಿದಾಗ ನೀಡದೇ ಸತಾಯಿಸಿದ್ದಾರೆ' ಎಂದು ಶರವಣ್ ದೂರಿದ್ದರು.