ಬೆಂಗಳೂರು: ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಕಳ್ಳತನ ಮಾಡಿ ತಲೆಮರೆಸಿಕೊಂಡಿದ್ದ ನಾಲ್ವರು ಅಂತಾರಾಜ್ಯ ಖದೀಮರನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಜುಲೈ10 ರಂದು ಅಶೋಕ್ ಲೇಲ್ಯಾಂಡ್ ಕಂಪನಿಯ ಲಾರಿಯನ್ನು ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಲಾಗಿತ್ತು. ಈ ವೇಳೆ ಖದೀಮರು ಕಳ್ಳತನ ಮಾಡಿದ್ದರು. ಈ ಕುರಿತಂತೆ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದು, ಆ.02 ರಂದು ಓರ್ವ ಆರೋಪಿಯನ್ನು ಬಂಧಿಸಲಾಗಿತ್ತು.
ಪ್ರಕರಣದ ಕುರಿತು ವಿಚಾರಣೆ ನಡೆಸಿದಾಗ, ಸಕಲೇಶಪುರ ಜೈಲಿನಲ್ಲಿರುವ ಇಬ್ಬರು ಆರೋಪಿಗಳು ಹಾಗೂ ಮತ್ತಿಬ್ಬರೊಂದಿಗೆ ಸೇರಿಕೊಂಡು ಕಾಮಾಕ್ಷಿಪಾಳ್ಯ, ಮಾಗಡಿ, ಜಿಗಣಿ, ಹಿರಿಸಾವೆ, ಸವಣೂರು, ಶಿಕಾರಿಪುರ, ಹಾಸನ, ಹಳೇಬೀಡು, ರಾಣೇಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ 9 ಲಾರಿಗಳು ಹಾಗೂ ದೆಹಲಿಯಲ್ಲಿ ಒಂದು ಕಾರು ಕಳ್ಳತನ ಮಾಡಿರುವುದಾಗಿ ಆರೋಪಿ ವಿಚಾರಣೆ ವೇಳೆ ತಿಳಿಸಿದ್ದಾರೆ.
ಆರೋಪಿಗಳ ಹೇಳಿಕೆ ಮೇರೆಗೆ ಜೈಲಿನಲ್ಲಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ತಲೆಮರೆಸಿಕೊಂಡಿದ್ದ ಆರೋಪಿ ಪತ್ತೆ ಹಚ್ಚುವ ಮೂಲಕ ಒಟ್ಟು ನಾಲ್ವರನ್ನು ಬಂಧಿಸಿದ್ದಾರೆ. 1 ಕೋಟಿ ಮೌಲ್ಯದ 9 ವಾಹನಗಳು ಹಾಗೂ ಒಂದು ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಸಿಹಾಬುದ್ದೀನ್ ವಿರುದ್ಧ ಹೆಚ್ಚುವರಿ ಚಾರ್ಜ್ಶೀಟ್ ಸಲ್ಲಿಸಿದ ಎನ್ಐಎ