ಬೆಂಗಳೂರು: ಇಷ್ಟು ವರ್ಷಗಳು ಸಹ ಕ್ರೀಡಾ ವಲಯಕ್ಕೆ ರಾಜ್ಯ ಬಜೆಟ್ನಲ್ಲಿ ಅತಿ ಕಡಿಮೆ ಮೊತ್ತ ಮೀಸಲಿಡಲಾಗುತ್ತಿತ್ತು. ಕನಿಷ್ಠಪಕ್ಷ ಈ ವರ್ಷವಾದರೂ ಹೆಚ್ಚು ಮೊತ್ತವನ್ನು ಕ್ರೀಡಾ ವಲಯಕ್ಕೆ ನೀಡಬೇಕು ಎಂದು ಪದ್ಮಶ್ರೀ ಪುರಸ್ಕೃತ ಅಂತಾರಾಷ್ಟ್ರೀಯ ಪ್ಯಾರಾ ಒಲಿಂಪಿಕ್ ಕ್ರೀಡಾಪಟು ಕೆ. ವೈ ವೆಂಕಟೇಶ್ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಾರೆ.
ಈ ವರ್ಷದಲ್ಲಿ ಕಾಮನ್ವೆಲ್ತ್ ಕ್ರೀಡಾಕೂಟ, ಏಷ್ಯನ್ ಕ್ರೀಡಾಕೂಟದಲ್ಲಿ ವಿಕಲಚೇತನ ಕ್ರೀಡಾಪಟುಗಳು ಸಹ ಭಾಗವಹಿಸುತ್ತಾರೆ. ಎಲ್ಲಾ ಕ್ರೀಡಾಪಟುಗಳಿಗೆ ಒಲಿಂಪಿಕ್ಗೆ ಸಹ ಈ ವರ್ಷ ತಯಾರಿ ನಡೆಯುತ್ತದೆ. ಈ ಎಲ್ಲಾ ಕ್ರೀಡಾ ಸ್ಪರ್ಧೆಗಳಲ್ಲಿ ನಮ್ಮ ರಾಜ್ಯದಿಂದ ಬಹಳಷ್ಟು ಜನ ಆಯ್ಕೆಯಾಗಿದ್ದಾರೆ. ರಾಜ್ಯ, ಭಾರತವನ್ನು ಪ್ರತಿನಿಧಿಸುತ್ತಾರೆ. ಈ ಹಿನ್ನೆಲೆ ಕ್ರೀಡಾ ಇಲಾಖೆಗೆ ಮೂಲ ಸೌಕರ್ಯ ಕಲ್ಪಿಸಲು ಹೆಚ್ಚು ಹಣವನ್ನು ಮೀಸಲಿಟ್ಟರೆ ಅನುಕೂಲವಾಗುತ್ತದೆ. ಮೀಸಲಿಟ್ಟ ಹಣವನ್ನು ಹಂತ ಹಂತವಾಗಿ ಕ್ರೀಡಾ ಸಂಸ್ಥೆಗಳಿಗೆ ಕ್ರೀಡಾಪಟುಗಳಿಗೆ ಸಂದಾಯ ಮಾಡಬೇಕು ಎಂದು ಮನವಿ ಮಾಡಿದರು.
ಕೋವಿಡ್ ಕಾರಣ ಕ್ರೀಡಾಪಟುಗಳ ಜೀವನ ಹಾಳು.. ಸುಮಾರು ಎರಡು ವರ್ಷಗಳಿಂದ ಬಂದಿರುವ ಕೋವಿಡ್ ಮಹಾಮಾರಿ ಕ್ರೀಡಾಪಟುಗಳ ಜೀವನವನ್ನು ಹಾಳುಮಾಡಿದೆ. ಪುನಃ ಕ್ರೀಡಾರಂಗಕ್ಕೆ ತೆರೆದುಕೊಳ್ಳಲು ರಾಜ್ಯ, ರಾಷ್ಟ್ರೀಯ ಮಟ್ಟದ ಕ್ರೀಡಾ ಕೂಟಗಳು, ತರಬೇತಿ ಶಿಬಿರಗಳನ್ನು ಯೋಜಿಸಬೇಕಾಗಿದೆ. ಹೀಗಾಗಿ, ತಕ್ಷಣ ಹಣ ಬಿಡುಗಡೆ ಮಾಡಿದರೆ ಎಲ್ಲದಕ್ಕೂ ಅನುಕೂಲವಾಗುತ್ತದೆ ಎಂದು ಹೇಳಿದರು.
ಕಂಠೀರವ ಕ್ರೀಡಾಂಗಣ ಅಂತರರಾಷ್ಟ್ರೀಯ ದರ್ಜೆಗೆ ಏರಿಸಿ.. ಕಂಠೀರವ ಕ್ರೀಡಾಂಗಣದಲ್ಲಿ ಕ್ರೀಡಾಪಟುಗಳು ಸಾಮಾನ್ಯವಾಗಿ ಚಿಕ್ಕ ಟ್ರ್ಯಾಕ್ನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಹೀಗಾಗಿ, ಪೂರ್ತಿ ಕ್ರೀಡಾಂಗಣವನ್ನು ಅಂತಾರಾಷ್ಟ್ರೀಯ ದರ್ಜೆಗೆ ತಯಾರು ಮಾಡಿದರೆ ಹೆಚ್ಚು ಅನುಕೂಲವಾಗುತ್ತದೆ ವೆಂಕಟೇಶ್ ಅಭಿಪ್ರಾಯಪಟ್ಟರು.
ಬಸವನಗುಡಿಯಲ್ಲಿ ಅಂತಾರಾಷ್ಟ್ರೀಯ ದರ್ಜೆಯ ಸ್ವಿಮ್ಮಿಂಗ್ ಪೂಲ್ ತಯಾರಾಗಿದೆ. ಬ್ಯಾಡ್ಮಿಂಟನ್ ಕ್ರೀಡೆಯ ಬಗ್ಗೆ ಹೇಳುವುದಾದರೆ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಒಳಾಂಗಣ ಕ್ರೀಡಾಂಗಣಗಳು ಉತ್ತಮವಾಗಿವೆ.
ಬಾಸ್ಕೆಟ್ ಬಾಲ್ ಕ್ರೀಡಾಂಗಣಗಳು ಉತ್ತಮ ದರ್ಜೆಗೆ ಏರಿಸಲಾಗಿದೆ. ಈ ಹಿನ್ನೆಲೆಯಲ್ಲಿ ನೋಡುವುದಾದರೆ ಮುಖ್ಯವಾಗಿ ಅಥ್ಲೆಟಿಕ್ಸ್ ಕ್ರೀಡೆಗಳಿಗೆ ಕಂಠೀರವ ಕ್ರೀಡಾಂಗಣವನ್ನು ಮೇಲ್ದರ್ಜೆಗೇರಿಸಬೇಕು. ಆದಷ್ಟು ಬೇಗ ಈ ಕೆಲಸ ಕಾರ್ಯಗಳು ನಡೆಯಬೇಕು ಎಂದು ಕೆ. ವೈ ವೆಂಕಟೇಶ್ ಒತ್ತಾಯಿಸಿದರು.
ಓದಿ: ಮೇಕೆದಾಟು ಪಾದಯಾತ್ರೆ ಹಿಂದೆ ರಾಜಕೀಯ ಉದ್ದೇಶ ಇಲ್ಲ: ಸಿದ್ದರಾಮಯ್ಯ