ಬೆಂಗಳೂರು: ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳದ ಬಗ್ಗೆ ಸಚಿವ ಸಂಪುಟ ತೆಗೆದುಕೊಂಡ ಮಹತ್ವದ ತೀರ್ಮಾನವನ್ನು ಸರಕಾರಿ ಆದೇಶದ ಮೂಲಕ ತಕ್ಷಣವೇ ಜಾರಿಗೊಳಿಸಲು ಯಾವುದೇ ಕಾನೂನು ತೊಡಕುಗಳು ಅಡ್ಡಿಬರುವುದಿಲ್ಲ ಎಂದು ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳಾದ ಎಸ್ಸಿ - ಎಸ್ಟಿ ಮೀಸಲು ಹೆಚ್ಚಳ ವಿಚಾರಣೆ ಆಯೋಗದ ಅಧ್ಯಕ್ಷರಾಗಿದ್ದ ನ್ಯಾ. ಹೆಚ್ ಎನ್ ನಾಗಮೋಹನದಾಸ್ ಅವರು ತಿಳಿಸಿದ್ದಾರೆ.
ರಾಜ್ಯ ಸರಕಾರವು ತಮ್ಮ ನೇತೃತ್ವದ ವಿಚಾರಣೆ ಆಯೋಗದ ಶಿಫಾರಸುಗಳನ್ನು ಜಾರಿಗೆ ತರುವ ಬಗ್ಗೆ ತೆಗೆದುಕೊಂಡ ನಿರ್ಣಯದ ಬಗ್ಗೆ ನ್ಯಾಯಮೂರ್ತಿ ನಾಗಮೋಹನದಾಸ್ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಆದೇಶ ಜಾರಿಗೆ ತರುವ ಕುರಿತು ''ಈ ಟಿವಿ ಭಾರತ'' ಕ್ಕೆ ನೀಡಿದ ಎಕ್ಸ್ಕ್ಲೂಸಿವ್ ಸಂದರ್ಶನದಲ್ಲಿ ರಾಜ್ಯ ಸರಕಾರವು ತಕ್ಷಣವೇ ಕ್ಯಾಬಿನೆಟ್ ನಲ್ಲಿ ಕೈಗೊಂಡ ತೀರ್ಮಾನದ ಬಗ್ಗೆ ಸರಕಾರಿ ಆದೇಶ ಮೂಲಕ ಅನುಷ್ಟಾನಕ್ಕೆ ತರಬೇಕೆಂದು ಸಲಹೆ ನೀಡಿದ್ದಾರೆ.
ಮೀಸಲು ಹೆಚ್ಚಳ ಮಾಡಿದರೂ ಮತ್ತು ಮಾಡದಿದ್ದರೂ ಕೆಲವರು ನ್ಯಾಯಾಲಯಕ್ಕೆ ಹೋಗುತ್ತಾರೆ. ಈ ಬಗ್ಗೆ ರಾಜ್ಯ ಸರಕಾರ ಅಂಜುವ ಅವಶ್ಯಕತೆಯಿಲ್ಲ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳವನ್ನು ಬಲವಾಗಿ ಸಮರ್ಥಿಸಿಕೊಳ್ಳುವ ಎಲ್ಲ ಅಗತ್ಯ ಮಾಹಿತಿಗಳು ಹಾಗು ಅಂಕಿ - ಅಂಶಗಳ ವಿವರವನ್ನು ಆಯೋಗದ ವರದಿಯಲ್ಲಿ ನೀಡಲಾಗಿದೆ ಎಂದು ನ್ಯಾ. ನಾಗಮೋಹನದಾಸ್ ಅವರು ಹೇಳಿದ್ದಾರೆ.
ಎಸ್ಸಿ-ಎಸ್ಟಿ ಜನಾಂಗದವರು ಶೈಕ್ಷಣಿಕವಾಗಿ ಸಾಕಷ್ಟು ಹಿಂದುಳಿದಿದ್ದಾರೆ. ಸರ್ಕಾರಿ ಉದ್ಯೋಗದಲ್ಲಿ ಸೂಕ್ತ ಅವಕಾಶ ಅವರಿಗೆ ಸಿಕ್ಕಿಲ್ಲ. ಮಾನವ ಸೂಚ್ಯಂಕದಲ್ಲಿ ಹಿಂದೆ ಇದ್ದಾರೆ . ಹೀಗೆ ಹಲವಾರು ಮಾನದಂಡಗಳ ಉದಾಹರಣೆಯನ್ನು ಆಯೋಗದ ವರದಿಯಲ್ಲಿ ಪ್ರಸ್ಥಾಪಿಸಲಾಗಿದೆ ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ.
ಓದಿ: ನಕಲಿ ದಾಖಲೆ ನೀಡಿ ಶ್ಯೂರಿಟಿ : ಆನ್ಲೈನ್ ಮೂಲಕ ದಾಖಲೆಗಳ ಪರಿಶೀಲನೆಗೆ ಹೈಕೋರ್ಟ್ ನಿರ್ದೇಶನ