ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂಪುಟದಿಂದ ಅಬಕಾರಿ ಸಚಿವ ಹೆಚ್. ನಾಗೇಶ್ ಬಹುತೇಕ ಹೊರಬಿದ್ದಿದ್ದು, ಭ್ರಷ್ಟಾಚಾರದ ಆರೋಪವೇ ಅವರಿಗೆ ಮುಳುವಾಗಿದೆ. ಜೊತೆಗೆ ಶಾಸಕ ಮುನಿರತ್ನಗೂ ಸಂಪುಟದಲ್ಲಿ ಸ್ಥಾನ ಸಿಗದಿರಲು ಭ್ರಷ್ಟಾಚಾರದ ಗುರುತರ ಆರೋಪಗಳೇ ಕಾರಣವಾಗಿವೆ ಎನ್ನಲಾಗಿದೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರಿ ಸಚಿವರಾಗಿರುವ 10 ಜನರಲ್ಲಿ ಓರ್ವ ಸದಸ್ಯ ಸಂಪುಟದಿಂದ ಹೊರಬೀಳುವ ಸನಿಹದಲ್ಲಿದ್ದಾರೆ. ಅಬಕಾರಿ ಖಾತೆ ನಿರ್ವಹಿಸುತ್ತಿರುವ ನಾಗೇಶ್ ಅವರೇ ಮಿತ್ರ ಮಂಡಳಿಯ ಮೊದಲಿಗರಾಗಿ ರಾಜೀನಾಮೆ ನೀಡುವ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದ್ದಾರೆ.
ನಾಗೇಶ್ ಅವರಿಗೆ ಖುದ್ದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ನೀಡುವಂತೆ ಸೂಚನೆ ನೀಡಿದ್ದಾರೆ. ಹಾಗಾಗಿ ಇಂದು ನಡೆದ ಸಚಿವ ಸಂಪುಟ ಸಭೆ ನಾಗೇಶ್ಗೆ ಕೊನೆಯ ಸಂಪುಟ ಸಭೆಯಾಗಲಿದೆ. ಸಂಪುಟ ಸಭೆಯಲ್ಲಿಯೂ ಈ ಕುರಿತು ಚರ್ಚೆ ನಡೆಸಿ ಮತ್ತೊಮ್ಮೆ ಸೂಚನೆ ನೀಡಲಾಗುತ್ತದೆ.
ಇನ್ನು ಈ ನಿರ್ಧಾರಕ್ಕೆ ಅಧಿಕಾರಿಯೊಬ್ಬರ ಪುತ್ರಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ವೀಟ್ ಮೂಲಕ ನೀಡಿದ ದೂರು ಪ್ರಮುಖ ಕಾರಣವಾಗಿದೆ ಎನ್ನಲಾಗಿದೆ. ಅಧಿಕಾರಿಯೊಬ್ಬರ ವರ್ಗಾವಣೆಗೆ ಒಂದು ಕೋಟಿ ಲಂಚದ ಬೇಡಿಕೆ ಇಟ್ಟ ಆರೋಪ ಇದೀಗ ನಾಗೇಶ್ಗೆ ಕುರ್ಚಿ ಕಳೆದುಕೊಳ್ಳುವಂತೆ ಮಾಡಿದೆ ಎಂದು ಬಿಜೆಪಿ ವಲಯದಲ್ಲಿ ಚರ್ಚೆಯಾಗಿದೆ.
ಅಬಕಾರಿ ಇಲಾಖೆಯಲ್ಲಿ ಹೊಸಪೇಟೆ ವಿಭಾಗದ ಅಧಿಕಾರಿ ಮೋಹನ್ ಕುಮಾರ್ ಬೆಂಗಳೂರಿನಲ್ಲಿ ಖಾಲಿ ಇದ್ದ ಜಂಟಿ ಆಯುಕ್ತರ ಹುದ್ದೆಗೆ ಬರಲು ಯತ್ನಿಸಿದಾಗ, ಹೆಚ್.ನಾಗೇಶ್ ಒಂದು ಕೋಟಿ ರೂ. ಲಂಚದ ಬೇಡಿಕೆ ಇಟ್ಟಿದ್ದರು. ಲಂಚ ನೀಡಲು ನಿರಾಕರಿಸಿದ ನಂತರ ಆ ಅಧಿಕಾರಿಯನ್ನು ರಜೆ ಮೇಲೆ ತೆರಳಲು ಬಲವಂತ ಮಾಡಲಾಯಿತು ಎನ್ನಲಾಗಿದ್ದು, ಖುದ್ದು ಈ ವಿವರಗಳೊಂದಿಗೆ ಅಧಿಕಾರಿ ಪುತ್ರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ವೀಟ್ ಮಾಡಿ ದೂರು ನೀಡಿದ್ದರು.
ಈ ದೂರನ್ನು ಗಂಭೀರವಾಗಿ ಪರಿಗಣಿಸಿದ ಬಿಜೆಪಿ ಹೈಕಮಾಂಡ್, ಭ್ರಷ್ಟಾಚಾರ ಸಹಿಸಲು ಸಾಧ್ಯವಿಲ್ಲ, ಅವರನ್ನು ಸಂಪುಟದಿಂದ ಕೈಬಿಡಿ ಎಂದು ಸಿಎಂ ಯಡಿಯೂರಪ್ಪಗೆ ಸೂಚನೆ ನೀಡಿತ್ತು. ದೆಹಲಿಗೆ ಕರೆಸಿಕೊಂಡು ಚರ್ಚೆ ನಡೆಸಿದ ವೇಳೆಯಲ್ಲಿಯೂ ಈ ಸೂಚನೆ ನೀಡಿದ್ದು, ತಡರಾತ್ರಿ ಮತ್ತೊಮ್ಮೆ ನಾಗೇಶ್ ರನ್ನು ಸಂಪುಟದಿಂದ ಕೈಬಿಡಲು ನಿರ್ದೇಶನ ನೀಡಲಾಗಿದೆ.
ಹೇಗಾದರೂ ಮಾಡಿ ಅಳೆದು, ತೂಗಿ ಕೆಲ ದಿನಗಳವರೆಗಾದರೂ ನಾಗೇಶ್ ರನ್ನು ಸಚಿವ ಸ್ಥಾನದಲ್ಲಿ ಮುಂದುವರೆಸೋಣ ಎಂದು ಸಿಎಂ ಶತಾಯುಗತಾಯ ಪ್ರಯತ್ನ ನಡೆಸಿದರೂ ಸಹ ಹೈಕಮಾಂಡ್ ಭ್ರಷ್ಟಾಚಾರದ ವಿಚಾರದಲ್ಲಿ ರಾಜಿ ಇಲ್ಲ ಎಂದು ಸ್ಪಷ್ಟ ಸಂದೇಶ ರವಾನಿಸಿದೆ. ಆದ್ದರಿಂದ ಕಡೆಗೂ ನಾಗೇಶ್ರನ್ನು ಸಂಪುಟದಿಂದ ಕೈಬಿಡಲು ಸಿಎಂ ನಿರ್ಧರಿಸಿದ್ದು, ಹಿರಿಯ ಸಚಿವರೊಂದಿಗೆ ಸಮಾಲೋಚನೆ ನಡೆಸಿ ನಂತರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸಿಎಂ ಸೂಚನೆ ನೀಡಿದ್ದಾರೆ.
ಇನ್ನು, ನಾನು ಸಚಿವನಾಗಿಯೇ ಬಿಟ್ಟಿದ್ದೇನೆ ಎಂದುಕೊಂಡಿದ್ದ ಮುನಿರತ್ನಗೂ ಸಹ ಬಿಜೆಪಿ ಹೈಕಮಾಂಡ್ ಶಾಕ್ ನೀಡಿದೆ. ಸಚಿವರ ಪಟ್ಟಿಯಲ್ಲಿ ಮುನಿರತ್ನ ಹೆಸರನ್ನು ಕೈಬಿಟ್ಟಿದ್ದು, ಕೇವಲ ಏಳು ಶಾಸಕರಿಗೆ ಮಾತ್ರ ಅನುಮತಿ ನೀಡಿದೆ. ಮುನಿರತ್ನ ಹೆಸರು ಪಟ್ಟಿಯಿಂದ ಹೊರಗುಳಿಯಲು ಭ್ರಷ್ಟಾಚಾರದ ಆರೋಪಗಳೇ ಕಾರಣ ಎನ್ನಲಾಗುತ್ತಿದೆ.
ಬಿಬಿಎಂಪಿಯಲ್ಲಿ ನಡೆದಿದ್ದ ಬಹುಕೋಟಿ ಟೆಂಡರ್ ಹಗರಣದಲ್ಲಿ ಮುನಿರತ್ನ ಕೈವಾಡವಿದೆ ಎನ್ನುವ ಆರೋಪ ಕೇಳಿಬಂದಿತ್ತು. ಪ್ರಧಾನಿ ನರೇಂದ್ರ ಮೋದಿ ಕೂಡ ಮುನಿರತ್ನ ಕಾಂಗ್ರೆಸ್ನಲ್ಲಿದ್ದ ವೇಳೆ ಅವರ ವಿರುದ್ಧದ ಭ್ರಷ್ಟಾಚಾರದ ಆರೋಪಗಳ ಬಗ್ಗೆ ಭಾಷಣದಲ್ಲಿ ಪ್ರಸ್ತಾಪ ಮಾಡಿದ್ದರು, ಟೀಕಿಸಿದ್ದರು. ಈಗ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡಲ್ಲಿ ಭ್ರಷ್ಟಾಚಾರದ ವಿರುದ್ಧದ ನಮ್ಮ ನಿಲುವಿಗೆ ವಿರುದ್ಧವಾಗಲಿದೆ, ಈ ಹಿಂದೆ ಯಡಿಯೂರಪ್ಪ ಅವರನ್ನೇ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ನಿದರ್ಶನ ಇದೆ. ಹಾಗಾಗಿ ಮುನಿರತ್ನರನ್ನು ಸಂಪುಟಕ್ಕೆ ತೆಗೆದುಕೊಳ್ಳುವುದು ಬೇಡ ಎಂದು ಅಮಿತ್ ಶಾ ಸ್ಪಷ್ಟ ಸಂದೇಶ ನೀಡಿದ್ದಾರೆ. ಆದ್ದರಿಂದ ಮುನಿರತ್ನ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.