ಬೆಂಗಳೂರು: ಜಿಂದಾಲ್ ಸಂಪುಟ ಉಪ ಸಮಿತಿ ರಚನೆ ವಿಳಂಬವಾಗುತ್ತಿದ್ದು, ಆದಷ್ಟು ಬೇಗ ಸಂಪುಟ ಉಪಸಮಿತಿ ರಚನೆಯಾಗಬೇಕು ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ಆಗ್ರಹಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಂಪುಟ ಉಪ ಸಮಿತಿ ರಚನೆ ಬಗ್ಗೆ ತೀರ್ಮಾನ ಕೈಗೊಂಡು ಎರಡು ವಾರ ಕಳೆಯುತ್ತಾ ಬಂತು, ಇದು ಇನ್ನೂ ವಿಳಂಬ ಆಗಬಾರದು. ಅದು ತಡವಾಗಬಾರದು ಎಂದರೆ ಸರ್ಕಾರ ಕೆಲ ಹೆಜ್ಜೆಗಳನ್ನು ಇಡಬೇಕು ಎಂದು ಒತ್ತಾಯಿಸಿದರು.
ಉಪಸಮಿತಿಯವರು ಜಿಂದಾಲ್ಗೆ ನೀಡಿದ ಭೂಮಿಯ ಅಡಿಟ್ ಮಾಡಬೇಕು. ಜಿಂದಾಲ್ಗೆ ಎಷ್ಟು ಭೂಮಿ ನೀಡಲಾಗಿದೆ. ಆ ಭೂಮಿಯ ಲ್ಯಾಂಡ್ ಆಡಿಟ್ ಮಾಡಿಸಬೇಕು. ಅವರು ಕೇಳಿದ್ದೆಷ್ಟು, ಸರ್ಕಾರ ಕೊಟ್ಟಿದ್ದೆಷ್ಟು? ಅವರಿಗೆ ಭೂಮಿ ಅವಶ್ಯಕತೆಯಿದೆಯೇ? ಇದರ ಬಗ್ಗೆ ತಪಾಸಣೆ ಆಗಬೇಕು. ಇದರ ಬಗ್ಗೆ ಸಬ್ ಕಮಿಟಿ ಮೊದಲು ಗಮನಹರಿಸಬೇಕು ಎಂದು ಆಗ್ರಹಿಸಿದರು.
ಇನ್ನು ಲೋಕಸಭೆ ಚುನಾವಣೆ ಸೋಲಿಗೆ ಮೈತ್ರಿ ಕಾರಣ ಎಂಬ ವೀರಪ್ಪ ಮೊಯ್ಲಿ ಮತ್ತು ಕೆ.ಎಚ್.ಮುನಿಯಪ್ಪ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸೋಲಿಗೆ ಮೈತ್ರಿಯೇ ಕಾರಣ ಅಲ್ಲ. ಸೋಲಿನ ಕಾರಣಗಳಲ್ಲಿ ಮೈತ್ರಿಯೂ ಒಂದಾಗಿರಬಹುದು. ಅವರಿಬ್ಬರ ಕ್ಷೇತ್ರಗಳ ಪರಿಸ್ಥಿತಿ ನನಗೆ ಗೊತ್ತಿಲ್ಲ. ಆದರೆ, ಉತ್ತರ ಕರ್ನಾಟಕದಲ್ಲಾದ ಸೋಲಿಗೂ ಮೈತ್ರಿಗೂ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.