ಬೆಂಗಳೂರು: ಪಕ್ಷ ಸಂಘಟನೆ ದೃಷ್ಟಿಯಿಂದ ಮುಂಬರುವ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಹೆಚ್ಚು ಆದ್ಯತೆ ನೀಡುವುದಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದಾರೆ.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಪಕ್ಷ ಸಂಘಟನೆ ದೃಷ್ಟಿಯಿಂದ ಇಂದು ಕರೆದಿರುವ ವೀರಶೈವ ಲಿಂಗಾಯತ ಮುಖಂಡರ ಸಭೆಯಲ್ಲಿ ಮಾತನಾಡುತ್ತ, ಉತ್ತರ ಕರ್ನಾಟಕಕ್ಕೆ ಜೆಡಿಎಸ್ ನೀಡಿದಷ್ಟು ಕೊಡುಗೆಯನ್ನು ಬೇರೆ ಯಾವ ಪಕ್ಷವೂ ನೀಡಿಲ್ಲ. ಕೃಷ್ಣ ಮೇಲ್ದಂಡೆ ಯೋಜನೆ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದು ಆ ಜನರಿಗಾಗಿ ದೇವೇಗೌಡರು ತಮ್ಮ ಬದುಕನ್ನೇ ಮುಡಿಪಿಟ್ಟವರು. ಅವರ ಬಗ್ಗೆ ಕೆಲವರು ಅಪಪ್ರಚಾರ ಮಾಡಿದರು. ಮಾಜಿ ಪ್ರಧಾನಿಗಳು ಉತ್ತರ ಕರ್ನಾಟಕಕ್ಕೆ ಕೊಟ್ಟ ಕೊಡುಗೆ ಬಗ್ಗೆ ನಾನು ಬಹಿರಂಗ ಚರ್ಚೆಗೆ ಸಿದ್ಧ ಇದ್ದೇನೆ ಎಂದು ಕುಮಾರಸ್ವಾಮಿ ಸವಾಲು ಹಾಕಿದರು.
ಸಾಲಮನ್ನಾ ಮಾಡಲು ವಿರೋಧಿಸಿದ್ದ ಕಾಂಗ್ರೆಸ್: ನಾನು ಸಾಲಮನ್ನಾ ಮಾಡಬೇಕಾಗಿರಲ್ಲಿಲ್ಲ. ಆದರೆ ರೈತರ ನೋವು ನನ್ನ ಮನಸ್ಸನ್ನು ನೋಯಿಸಿತ್ತು. ಅವತ್ತು ಸಿದ್ದರಾಮಯ್ಯ ಅವರು ತಮ್ಮ ಸರ್ಕಾರ ಜಾರಿಗೆ ತಂದ ಯೋಜನೆಗಳಿಗೆ, ಭಾಗ್ಯಗಳಿಗೆ ಹಣಕಾಸು ತೊಂದರೆ ಆಗಬಾರದು ಎಂದು ಷರತ್ತು ಹಾಕಿದ್ದರು. ಸಾಲಮನ್ನಾ ನಮ್ಮ ಭರವಸೆ ಅಲ್ಲ ಎನ್ನುತ್ತಿದ್ದರು. ಆಗ ನಾನು ಕೂಡ ನನ್ನ ಮಾತು ಉಳಿಸಿಕೊಳ್ಳಬೇಕಾಗಿತ್ತು. ಆ ಕಾರಣಕ್ಕೆ ಸಾಲಮನ್ನಾ ಮಾಡಿದ್ದೆ. ಉತ್ತರ ಕರ್ನಾಟಕದ ಅಸಂಖ್ಯಾತ ರೈತರಿಗೆ ಅನುಕೂಲ ಆಯಿತು ಎಂದು ಕುಮಾರಸ್ವಾಮಿ ಹೇಳಿದರು.
ಕೆಂಪೇಗೌಡರ ಹೆಸರಿನಲ್ಲಿ ಕೌಶಲ್ಯ ವಿವಿ ಸ್ಥಾಪನೆ: ಅತಿವೃಷ್ಟಿ, ಅನಾವೃಷ್ಟಿ ಸೇರಿದಂತೆ ಬೆಲೆ ಇಳಿಕೆ ಇತ್ಯಾದಿ ಕಾರಣಗಳಿಂದ ರೈತರ ಬವಣೆ ಹೇಳ ತೀರದಾಗಿದೆ. ಈ ಮೊದಲೇ ಕೋವಿಡ್ನಿಂದ ಜನರು ಅತಿಯಾದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಮಯದಲ್ಲಿ ಸರ್ಕಾರವು ನಾಡಪ್ರಭು ಕೆಂಪೇಗೌಡರ ಪ್ರತಿಮೆ ನಿಲ್ಲಿಸುತ್ತಿದೆ ಎಂದರು. ನಾಡಪ್ರಭುಗಳು ಬೆಂಗಳೂರು ಮಹಾನಗರ ಕಟ್ಟಿದರು. ಜಾತಿ ಧರ್ಮ ಮೀರಿ ಜೀವನೋಪಾಯ ಕಲ್ಪಿಸಿದರು. ಕೌಶಲ್ಯ ಆಧಾರಿತ ಉದ್ಯೋಗ ಸೃಷ್ಟಿ ಮಾಡಿದರು. ಮಾದರಿ ಆಡಳಿತ ನಡೆಸಿದರು. ಆದರೆ ಈ ಸರ್ಕಾರ ಅವರ ಪ್ರತಿಮೆ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ. ನರೇಂದ್ರ ಮೋದಿ ಬರುತ್ತಾರೆ ಎಂದು ಸಚಿವರೆಲ್ಲ ಹೋಗಿ ಜಾತ್ರೆ ಮಾಡುತ್ತಿದ್ದಾರೆ. ನೆರೆ ಬಂದಾಗ, ಬರ ಬಂದಾಗ, ಜನರು ಕಷ್ಟಕ್ಕೆ ಸಿಲುಕಿದಾಗ ಮೋದಿ ರಾಜ್ಯಕ್ಕೆ ಬರಲಿಲ್ಲ ಎಂದು ಟೀಕಿಸಿದರು.
ಸರ್ಕಾರ ನಿಜಕ್ಕೂ ಕೆಂಪೇಗೌಡರ ಮೇಲೆ ಗೌರವ, ಭಕ್ತಿ ಇದ್ದರೆ ಅವರ ಹೆಸರಲ್ಲಿ ಉದ್ಯೋಗ ಕೊಡುವ ಕೆಲಸ ಮಾಡಬೇಕು. ಜನತೆಗೆ ಅನ್ನ ಸಿಗುವ ಕಾರ್ಯ ಮಾಡಬೇಕು. ಅವರ ಕೌಶಲ್ಯಪೂರ್ಣ ಆಡಳಿತಕ್ಕೆ ಗೌರವ ತರುವ ಕಾರ್ಯ ಮಾಡಬೇಕು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ, ನಾಡಪ್ರಭುಗಳ ಹೆಸರಿನಲ್ಲಿ ಕೆಂಪೇಗೌಡ ಕೌಶಲ್ಯ ವಿಶ್ವವಿದ್ಯಾಲಯ ಸ್ಥಾಪನೆ ಮಾಡಲಾಗುವುದು ಎಂದು ಕುಮಾರಸ್ವಾಮಿ ಘೋಷಣೆ ಮಾಡಿದರು.
ನ.1 ರಂದು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಇದಕ್ಕೂ ಮುನ್ನ ದಾಸರಹಳ್ಳಿ ಶಾಸಕ ಮಂಜುನಾಥ್ ಅವರ ಕಚೇರಿಯಲ್ಲಿ ಇಂದು ಹಮ್ಮಿಕೊಂಡಿದ್ದ ಆಮ್ ಆದ್ಮಿ ಪಕ್ಷದ ಮುಖಂಡರ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನವೆಂಬರ್1 ರಂದು ಪಂಚರತ್ನ ಯಾತ್ರೆಯ ದಿನ ನಮ್ಮ ವಿಧಾನಸಭೆ ಚುನಾವಣಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದರು.
(ಓದಿ: ದೇಶದಲ್ಲಿ ಜನರಿಗೆ ಕೊಟ್ಟ ಮಾತು ಉಳಿಸಿಕೊಂಡ ಏಕೈಕ ನಾಯಕ ಕುಮಾರಸ್ವಾಮಿ: ಹೆಚ್ ಡಿ ದೇವೇಗೌಡ)