ಇಸ್ರೇಲ್ ಮಾದರಿ ಹನಿ ನೀರಾವರಿ ಪದ್ಧತಿಗೆ 150 ಕೋಟಿ ಮೀಸಲಿಟ್ಟ ಹಣವೆಲ್ಲಿ?: ಜೆಡಿಎಸ್ ಪ್ರಶ್ನೆ, ಉತ್ತರಕ್ಕೆ ಪಟ್ಟು! - ವಿಧಾನಸಭೆಯಲ್ಲಿ ಜೆಡಿಎಸ್ ಪ್ರತಿಭಟನೆ,
ಅಧಿವೇಶನದಲ್ಲಿ ಇಸ್ರೇಲ್ ಮಾದರಿಯ ಹನಿ ನೀರಾವರಿ ಪದ್ಧತಿ ಜಾರಿಗೊಳಿಸಲು ಹಿಂದಿನ ಸರ್ಕಾರ ಮೀಸಲಿಟ್ಟ 150 ಕೋಟಿ ರೂ. ಹಣ ಎಲ್ಲಿ ಹೋಯಿತು ಎಂದು ಪ್ರಶ್ನಿಸಿ ಜೆಡಿಎಸ್ ಸದಸ್ಯರು ಗದ್ದಲ ಎಬ್ಬಿಸಿದರು. ಉತ್ತರಕ್ಕಾಗಿ ಪಟ್ಟು ಹಿಡಿದರು.

ಬೆಂಗಳೂರು : ರಾಜ್ಯದಲ್ಲಿ ಇಸ್ರೇಲ್ ಮಾದರಿಯ ಹನಿ ನೀರಾವರಿ ಪದ್ಧತಿಯನ್ನು ಜಾರಿಗೊಳಿಸಲು ಹಿಂದಿನ ಸರ್ಕಾರ ಮೀಸಲಿಟ್ಟ 150 ಕೋಟಿ ರೂ. ಹಣ ಎಲ್ಲಿ ಹೋಗಿದೆ ಎಂದು ಸ್ವತಃ ಕೃಷಿ ಸಚಿವರಿಗೇ ಗೊತ್ತಿಲ್ಲ ಎಂಬ ಆತಂಕಕಾರಿ ಅಂಶ ಸದನದ ಗಮನಕ್ಕೆ ಬಂತು.
ವಿಧಾನಸಭೆಯಲ್ಲಿ ಇಂದು ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ ಶಾಸಕರ ಆಕ್ರೋಶಕ್ಕೆ ಉತ್ತರಿಸಿದ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರೇ ಇದನ್ನು ಒಪ್ಪಿಕೊಂಡಿದ್ದಾರೆ. ಈ ಹಿಂದೆ ಅಧಿಕಾರದಲ್ಲಿದ್ದ ಕುಮಾರಸ್ವಾಮಿ ಅವರ ಸರ್ಕಾರ ಇಸ್ರೇಲ್ ಮಾದರಿಯಲ್ಲಿ ಹನಿ ನೀರಾವರಿಗಾಗಿ 150 ಕೋಟಿ ರೂ. ಮೀಸಲಾಗಿಟ್ಟಿತ್ತು. ಆದರೆ, ಹನಿ ನೀರಾವರಿಗೆ ಮೀಸಲಾಗಿಟ್ಟ ಈ ಪ್ರಮಾಣದ ಹಣ ಎಲ್ಲಿ ಹೋಗಿದೆ ಎಂದು ನನಗೇ ಗೊತ್ತಿಲ್ಲ ಎಂದು ಬಿ.ಸಿ.ಪಾಟೀಲ್ ಹೇಳಿದರು.
ಹೀಗಾಗಿ ಕೃಷಿ ಇಲಾಖೆಯ ಮತ್ತು ಹಣಕಾಸು ಇಲಾಖೆಯ ಅಧಿಕಾರಿಗಳ ಜತೆ ಚರ್ಚೆ ನಡೆಸಿ ಈ ಹಣ ಎಲ್ಲಿ ಹೋಗಿದೆ ಎಂಬ ಮಾಹಿತಿ ಪಡೆಯುತ್ತೇನೆ ಎಂದರು.
ಜೆಡಿಎಸ್ ಧರಣಿ : ಪ್ರಶ್ನೋತ್ತರ ವೇಳೆಯಲ್ಲಿ ಈ ಅಂಶವನ್ನು ಕೆದಕಿ ಜೆಡಿಎಸ್ ಸದಸ್ಯರು ಸದನದಲ್ಲಿ ಕೋಲಾಹಲವೆಬ್ಬಿಸಿದರು. ಉತ್ತರ ಸಮರ್ಪಕವಾಗಿ ಇಲ್ಲವೆಂದು ಸದನದ ಬಾವಿಗೆ ಇಳಿದು ಧರಣಿ ನಡೆಸಿದರು. ಹೆಚ್.ಡಿ. ಕುಮಾರಸ್ವಾಮಿ ಅವರ ಸರ್ಕಾರ ಇಸ್ರೇಲ್ ಮಾದರಿಯ ಹನಿ ನೀರಾವರಿ ಪದ್ಧತಿ ಅಳವಡಿಕೆಗಾಗಿ 150 ಕೋಟಿ ರೂ. ಮೀಸಲಿಟ್ಟಿತ್ತು. ಆದರೆ, ಸದರಿ ಉದ್ದೇಶಕ್ಕಾಗಿ ಈ ಹಣ ಬಳಕೆಯಾಗಿಲ್ಲ. ರೈತರಿಗೆ ಒದಗಿಸಬೇಕಿದ್ದ ಈ ಹಣ ಎಲ್ಲಿಗೆ ಹೋಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಪೀಕರ್ ಅಸಮಾಧಾನ: ಈ ಸರ್ಕಾರ ರೈತ ವಿರೋಧಿ ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಿಲ್ಲ ಎಂದು ಕೋಲಾಹಲವೆಬ್ಬಿಸಿದಾಗ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಸಮಾಧಾನದಿಂದ ಏರಿದ ಧ್ವನಿಯಲ್ಲಿ ಮಾತನಾಡಿದರು.
ಜೆಡಿಎಸ್ ಸದಸ್ಯರಿಗೆ ಹೇಳುವವರು, ಕೇಳುವವರು ಯಾರೂ ಇಲ್ಲ. ನಿಮ್ಮಿಚ್ಛೆ ಬಂದಂತೆ ಕೂಗಾಡುತ್ತೀರಿ. ನೀವು ಯಾರ ನಿಯಂತ್ರಣದಲ್ಲೂ ಇಲ್ಲ. ನಿಮ್ಮ ಅಶಿಸ್ತನ್ನು ರಾಜ್ಯದ ಜನತೆ ನೋಡುತ್ತಿದ್ದಾರೆ. ನಿಮಗೆ ಯಾವ ಭಾಷೆಯಲ್ಲಿ ಹೇಳಬೇಕು ಹೇಳಿ ಹೇಳುತ್ತೇನೆ ಅಂತಾ ಗರಂ ಆದರು.
ಆದರೂ ಪಟ್ಟು ಬಿಡದೆ ಜೆಡಿಎಸ್ ಸದಸ್ಯರು ಏರಿದ ಧ್ವನಿಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ, ರೈತರ ಬಗ್ಗೆ ಕಾಳಜಿ, ಬದ್ಧತೆ ಇಲ್ಲವೇ? ಎಂದು ಪ್ರಶ್ನಿಸಿದರು. ನಂತರ ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ರೈತರ ಬಗ್ಗೆ ಬದ್ಧತೆ ಇದೆ. ಈ ಬಗ್ಗೆ ಆರ್ಥಿಕ ಇಲಾಖೆಗೆ ಪತ್ರ ಬರೆದು ಹಣದ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದು ಭರವಸೆ ನೀಡಿದರು.