ಬೆಂಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಹಿಂದೆ ರಾಜಕೀಯ ಬಣ್ಣ ಇದೆ ಎಂದು ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಅಭಿಪ್ರಾಯಪಟ್ಟಿದ್ದಾರೆ. ಪಕ್ಷದ ಕಚೇರಿ ಜೆ.ಪಿ. ಭವನದಲ್ಲಿ ಇಂದು ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಅವರ 131ನೆ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಆ ವಿಚಾರದಲ್ಲಿ ಯಾರು ಏನು ಹೇಳಿದ್ದಾರೆ ಎಂಬುದೆಲ್ಲಾ ಗೊತ್ತಿದೆ. ಯಾರ ಬಗ್ಗೆಯೂ ವೈಯಕ್ತಿಕವಾಗಿ ನಾನು ಮಾತನಾಡುವುದಿಲ್ಲ. ನಾನು ಕೂಡ ಅಧಿಕಾರ ನಡೆಸಿದ್ದೇನೆ. ಯಾರ್ಯಾರ ಕಾಲದಲ್ಲಿ ಏನೇನಾಗಿದೆ ಎಷ್ಟು ಪರ್ಸೆಂಟೇಜ್ ಸರ್ಕಾರ ನಡೆಸಿದ್ದಾರೆ ಎಂಬುದರ ಬಗ್ಗೆ ಮಾತನಾಡಲ್ಲ. ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಅದಕ್ಕೆ ಪರ್ಯಾಯವಾಗಿ ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ಭ್ರಷ್ಟಾಚಾರದ ಗಂಗೋತ್ರಿಯ ಅಧ್ಯಕ್ಷ ಸಿಎಂ ಬೊಮ್ಮಾಯಿ: ಸಿದ್ದರಾಮಯ್ಯ
40 ಪರ್ಸೆಂಟ್ ವಿಚಾರವಾಗಿ 2 ರಾಷ್ಟ್ರೀಯ ಪಕ್ಷಗಳಿಗೆ ಹೇಳುವ ಶಕ್ತಿಯಿಲ್ಲ. ಅಲ್ಪಸಂಖ್ಯಾತರ ವಿಚಾರದಲ್ಲಿ ನಮ್ಮ ಪಕ್ಷವನ್ನು ಕಾಂಗ್ರೆಸ್ ಕೆಟ್ಟದ್ದಾಗಿ ಬಿಂಬಿಸಿದೆ. ನಾನು ಪಾರ್ಲಿಮೆಂಟ್ನಲ್ಲಿ 30 ವರ್ಷ ಕೆಲಸ ಮಾಡಿದ್ದೇನೆ. 10 ತಿಂಗಳು ಪ್ರಧಾನಿಯಾಗಿದ್ದೇನೆ. ನಾವು ಆತ್ಮೀಯವಾಗಿ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದೇವೆ. ಆದರೆ, ಕಾಂಗ್ರೆಸ್ನಲ್ಲಿ ಎಷ್ಟು ಜನ ಹರಿಜನರನ್ನು ಅಧ್ಯಕ್ಷರನ್ನಾಗಿ ಮಾಡಿದರು ಎಂಬುದು ನನಗೆ ಗೊತ್ತಿಲ್ಲ ಎಂದು ಹರಿಹಾಯ್ದರು.
ಚುನಾವಣೆ ಬಂದಾಗ ಬಿಜೆಪಿಯ ದೊಡ್ಡ ಮುಖಂಡರು ತುಳಿತಕ್ಕೆ ಒಳಗಾದವರ ಮನೆಗೆ ಹೋಗಿ ಊಟ ಮಾಡಿ ಪ್ರಚಾರ ಪ್ರಾರಂಭ ಮಾಡುತ್ತಾರೆ. ಅನಂತರ ಮಾರ್ಪಾಡು ಮಾಡುತ್ತಾರೆ. ಕುಂಭ ಮೇಳ ನಡೆದಾಗ ಪ್ರಧಾನಿ ನರೇಂದ್ರ ಮೋದಿ 5 ದಿನಗಳು ಪಾದ ಪೂಜೆ ಮಾಡಿದರು. ತುಳಿತಕ್ಕೆ ಒಳಗಾದ ಸಮಾಜವನ್ನು ಮೆಚ್ಚಿಸುವ ಕೆಲಸ ಮಾಡಿದ್ದಾರೆ. ಈ ರೀತಿಯಲ್ಲಿ ಅವರು ಮತಗಳಿಸಲು ಪ್ರಯತ್ನಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.