ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ಗೆ ಡಬಲ್ ಶಾಕ್ ಆಗಿದೆ. 32 ಮತಗಳ ಪೈಕಿ ಒಂದು ಮತ ಕಾಂಗ್ರೆಸ್ಗೆ ಬಂದರೆ ಮತ್ತೊಂದು ಮತ ಅಸಿಂಧು ಆಗಿದೆ. ಗುಬ್ಬಿ ಶ್ರೀನಿವಾಸ್ ಯಾರಿಗೂ ಮತದಾನ ಮಾಡದೇ ಖಾಲಿ ಮತ ಪತ್ರವನ್ನು ಬಾಕ್ಸ್ಗೆ ಹಾಕಿದ್ದಾರೆ ಎನ್ನಲಾಗಿದೆ.
ಜೆಡಿಎಸ್ ಶಾಸಕರಿಗೆ ಪತ್ರ ಬರೆದಿದ್ದ ಸಿದ್ದರಾಮಯ್ಯ, ಆತ್ಮಸಾಕ್ಷಿಯ ಮತವನ್ನು ಕಾಂಗ್ರೆಸ್ಗೆ ನೀಡಿ ಎಂದು ಮನವಿ ಮಾಡಿದ್ದರು. ಹೀಗಾಗಿ ಚುನಾವಣೆ ಸಾಕಷ್ಟು ಕುತೂಹಲ ಮೂಡಿಸಿತ್ತು. ಅಂತೆಯೇ, ಕೋಲಾರ ಶಾಸಕ ಶ್ರೀನಿವಾಸ್ ಗೌಡ ಕಾಂಗ್ರೆಸ್ಗೆ ಮತ ಚಲಾಯಿಸಿದ್ದೇನೆ ಎಂದು ಬಹಿರಂಗವಾಗಿಯೇ ಘೋಷಿಸಿದ್ದರು.
ಇದೀಗ ಗುಬ್ಬಿ ಶ್ರೀನಿವಾಸ್ ಕೂಡ ಯಾರಿಗೂ ಮತದಾನ ಮಾಡದೆ ನಿಗೂಢ ಹೆಜ್ಜೆ ಇಟ್ಟಿದ್ದಾರೆ. ಅಲ್ಲದೇ, ಅವರ ನಡೆ ಸಾಕಷ್ಟು ಕುತೂಹಲ ಮೂಡಿಸಿದ್ದು, ತಮ್ಮ ಒಲವನ್ನು ಬಿಜೆಪಿ ಕಡೆಗೂ ಉಳಿಸಿಕೊಂಡಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಇನ್ನು, ಕಾಂಗ್ರೆಸ್ ಅಭ್ಯರ್ಥಿ ಜೈರಾಮ್ ರಮೇಶ್ಗೆ 46 ಮತಗಳು ಚಲಾವಣೆಯಾಗಿವೆ. ಎರಡನೇ ಅಭ್ಯರ್ಥಿ ಮನ್ಸೂರ್ ಆಲಿ ಖಾನ್ಗೆ 25+2 ಮತಗಳು ಬಂದಿದ್ದು, ಜೈರಾಂ ರಮೇಶ್ ಕಡೆಯಿಂದ ಒಂದು ಮತ ವರ್ಗಾವಣೆ ಆಗಲಿದೆ. ಹೀಗಾಗಿ 25+2+1=28 ಮತಗಳು ಮನ್ಸೂರ್ಗೆ ಚಲಾವಣೆಗೊಂಡಂತೆ ಆಗಿದೆ.
ಇತ್ತ, ಬಿಜೆಪಿಯ ಮೂರನೇ ಅಭ್ಯರ್ಥಿ ಲೆಹರ್ ಸಿಂಗ್ ಸೋಲಿಸಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಲು 6 ಮತಗಳ ಕೊರತೆ ಬೀಳಲಿದೆ. ಪಕ್ಷೇತರ ಶಾಸಕ ಎಚ್.ನಾಗೇಶ್ ಒಂದು ವೇಳೆ ಕಾಂಗ್ರೆಸ್ ಅಭ್ಯರ್ಥಿಗೆ ಮತ ಚಲಾವಣೆ ಮಾಡಿರುವ ಸಾಧ್ಯತೆ ಇದೆ ಎಂಬ ಮಾತು ಸಹ ಕೇಳಿಬರುತ್ತದೆ.
ಈ ನಡುವೆ ಸಂಜೆ 4 ಗಂಟೆಯವರೆಗೆ ಮತದಾನಕ್ಕೆ ಅವಕಾಶವಿದ್ದರೂ ಸಹ ಮಧ್ಯಾಹ್ನ 1.30ರ ಹೊತ್ತಿಗಾಗಲೇ ಎಲ್ಲ ಶಾಸಕರು ಮತ ಚಲಾಯಿಸಿದ್ದಾರೆ. ಸಂಜೆ 5 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದ್ದು 6 ಗಂಟೆ ಹೊತ್ತಿಗೆ ಅಧಿಕೃತ ಪ್ರಕಟಣೆ ಹೊರಬೀಳಲಿದೆ.
ಜೆಡಿಎಸ್ಗೆ ಮತ: ನಾನು ಜೆಡಿಎಸ್ಗೆ ಮತ ಹಾಕಿದ್ದೇನೆ. ನಾನು ಯಾವತ್ತೂ ಕ್ರಾಸ್ ಮತದಾನ ಮಾಡಿಲ್ಲ. ನಾಯಕರ ನಡುವೆ ಭಿನ್ನಾಭಿಪ್ರಾಯ ಇರಬಹುದು. ಆದರೆ, ನನ್ನನ್ನು ಜೆಡಿಎಸ್ ಮತದಾರರು ಗೆಲ್ಲಿಸಿರುವುದು. ಈ ಕಾರಣಕ್ಕಾಗಿ ನಾನು ಜೆಡಿಎಸ್ಗೆ ಮತ ಹಾಕದೆ ಹೋದರೆ ತಪ್ಪು ಆಗುತ್ತಿತ್ತು ಎಂದು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಹೇಳಿದ್ದಾರೆ.
ಮತದಾರರು ತಪ್ಪು ತಿಳಿದುಕೊಳ್ಳಬಾರದು ಎಂದು ನಾನು ಜೆಡಿಎಸ್ಗೆ ಮತಹಾಕಿದ್ದೇನೆ. ಇವತ್ತಿನ ರಾಜಕಾರಣ ನೋಡಿ ಬೇಸರವಾಗಿದೆ. ರಾಜ್ಯದ ಜನರು ಕೂಡ ಬೇಸತ್ತಿದ್ದಾರೆ. ಮುಂದೆ ಚುನಾವಣೆಯಲ್ಲಿ ನಿಲ್ಲಬೇಕಾ? ಬೇಡವೇ? ಎಂಬ ಗೊಂದಲವಿದೆ. ಜನರು ಏನು ಹೇಳ್ತಾರೆ, ಅದರಂತೆ ನಡೆದುಕೊಳ್ತೇನೆ ಎಂದೂ ಅವರು ಹೇಳಿದರು.
ಹೈಜಾಕ್ ಮಾಡಿಲ್ಲ: ಹೈಜಾಕ್ ಮಾಡಬೇಕಾದರೆ 12 ಜನ ಶಾಸಕರು ಇದ್ದರು. ನಮಗೆ ಅದರ ಅವಶ್ಯಕತೆ ಇಲ್ಲ. ಜೆಡಿಎಸ್ ಶಾಸಕ ಶ್ರೀನಿವಾಸ್ ಗೌಡ ಯಾರಿಗೆ ಮತ ಹಾಕಿದ್ದಾರೆ ಎಂದು ನನಗೆ ತೋರಿಸಿಲ್ಲ. ನಮ್ಮ ಹೋರಾಟದಲ್ಲಿ ಅವರು ಸಹಾಯ ಮಾಡಿದ್ದಾರೆ. ಸ್ನೇಹಿತರಿಗೆ ಆತ್ಮಸಾಕ್ಷಿ ಮತ ಹಾಕಿ ಎಂದು ಕೇಳಿಕೊಂಡಿದ್ವಿ. ಆದರೆ, ಯಾರು ನನಗೆ ತೋರಿಸಿ ಮತ ಹಾಕಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಶಾಸಕರ ಹೈಜಾಕ್ ಬಗ್ಗೆ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಒಳ್ಳೆಯ ಸ್ನೇಹಿತರು ಇದ್ದಾರೆ. ಅವರಿಗೆ ಯಾಕೆ ನಾವು ಮುಜುಗರ ಮಾಡಬೇಕು. ನೀವು ಶಾಸಕರನ್ನೇ ಕೇಳಿಕೊಳ್ಳಿ. ಅವರಿಗೆ ನಾವೇನಾದರೂ ಸಲಹೆ ಮಾಡಿದ್ದೀವಾ ಎಂದು ಟಾಂಗ್ ಕೊಟ್ಟರು.
ಅಡ್ಡಮತದಾನದ ಬಗ್ಗೆ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಪಕ್ಷದ ಅಧ್ಯಕ್ಷನಾಗಿ ನಾನು ನೋಡಿದ್ದನ್ನು ಹೇಳಬಹುದು. 69 ಶಾಸಕರಿಗೆ ನಾವು ವಿಪ್ ನೀಡಿದ್ದೆವು. ಅಷ್ಟು ಜನ ಮತ ಹಾಕಿದ್ದನ್ನು ನೋಡಿದ್ದೇನೆ. ಬೇರೆಯವರು ಏನು ಮಾಡಿದ್ದಾರೆ ಗೊತ್ತಿಲ್ಲ. ಜೆಡಿಎಸ್ ಮತ ನಮಗೆ ಬಂದಿರುವ ಬಗ್ಗೆ ನನಗೆ ಗೊತ್ತಿಲ್ಲ ಎಂದರು. ಎಚ್.ಡಿ.ರೇವಣ್ಣ ಮತಪತ್ರ ತೋರಿಸಿದ ವಿಚಾರವಾಗಿ ಪ್ರತಿಕ್ರಿಯಿಸಿ, ಒಳಗೆ ನಡೆದಿರುವುದನ್ನು ಹೇಳೋಕೆ ಹೋಗಲ್ಲ ಎಂದಷ್ಟೇ ಉತ್ತರಿಸಿದರು.
ಇದನ್ನೂ ಓದಿ: ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದೇನೆ: ಜೆಡಿಎಸ್ ಶಾಸಕ ಶ್ರೀನಿವಾಸ್ ಗೌಡ