ಬೆಂಗಳೂರು: ಸಚಿವ ಸಿ.ಪಿ. ಯೋಗೇಶ್ವರ್ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಮಧ್ಯೆ ತಿಕ್ಕಾಟ ಜೋರಾಗಿದ್ದು, ಇದೀಗ ಜೆಡಿಎಸ್ ಮುಖಂಡರು ಸಚಿವರ ವಿರುದ್ಧ ಗುಡುಗಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಮಾಜಿ ಸಚಿವ ಸಾ.ರಾ. ಮಹೇಶ್, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ, ಚನ್ನಪಟ್ಟಣದಲ್ಲಿ 'ಸರ್ವಪಕ್ಷ ಸದಸ್ಯ' ಸಿ.ಪಿ. ಯೋಗೇಶ್ವರ್ ಬೆಂಬಲಿತ ಅಭ್ಯರ್ಥಿಗಳು ಹೇಳ ಹೆಸರಿಲ್ಲದೇ ಸೋತಿದ್ದಾರೆ. ಶೇ 80 ರಷ್ಟು ಸ್ಥಾನಗಳಲ್ಲಿ ಜೆಡಿಎಸ್ ಗೆದ್ದಿದೆ. ದಿನೇ ದಿನೆ ಚನ್ನಪಟ್ಟಣ ಕ್ಷೇತ್ರ ದೂರವಾಗುತ್ತಿರುವುದು ನೋಡಲಾಗದೇ ಕ್ಷೇತ್ರ ಕಳೆದುಹೋಗಿರುವ ನೋವು ತಡೆಯಲಾಗದೇ ಯೋಗೇಶ್ವರಗೆ ಮತಿ ಭ್ರಮಣೆಯಾಗಿದೆ. ಅದಕ್ಕೇ ಉರಿ ಮಾತು ಎಂದು ಕಿಡಿ ಕಾರಿದ್ದಾರೆ.
ಚನ್ನಪಟ್ಟಣದ ಚಕ್ಕೆರೆ 'ಸರ್ವಪಕ್ಷ ಸದಸ್ಯ' ಯೋಗೇಶ್ವರ್ ಹುಟ್ಟೂರು. ಯಾವುದೇ ನಾಯಕನಿಗೆ ಹುಟ್ಟೂರಿನಲ್ಲಾದರೂ ಮರ್ಯಾದೆ ಇರುತ್ತದೆ. ಆದರೆ, ಯೋಗೇಶ್ವರ್ಗೆ ಹುಟ್ಟೂರಿನಲ್ಲೇ ನಾಲ್ಕಾಣೆ ಬೆಲೆ ಇಲ್ಲ. ಮೊನ್ನೆ ನಡೆದ ಗ್ರಾ.ಪಂ ಚುನಾವಣೆಯಲ್ಲಿ ಇಡೀ ಚಕ್ಕರೆ ಗ್ರಾಮ ಪಂಚಾಯಿತಿ ಜೆಡಿಎಸ್ ಬೆಂಬಲಿಸಿದೆ. ಈ ನೋವು ಆವರನ್ನು ಕಾಡುತ್ತಿರಬಹುದು. ಹುಟ್ಟೂರಲ್ಲೇ ಗೆಲ್ಲದ ಯೋಗೇಶ್ವರ್ ಕ್ಷೇತ್ರ ಗೆಲ್ಲಲು ಸಾಧ್ಯವೇ?. ಮುಂದಿನ ದಿನಗಳಲ್ಲಿ ಎಚ್‌ಡಿಕೆಯನ್ನು ಚನ್ನಪಟ್ಟಣದಿಂದ ಹೊರಹಾಕುತ್ತೇನೆ ಎಂಬ ಯೋಗೇಶ್ವರ್ ಮಾತು ವಾಸ್ತವವೇ?. ಯೋಗೇಶ್ವರ್ ಲೀಲೆಗಳು ಅಲ್ಲಿನ ಜನರಿಗೆ ಮನದಟ್ಟಾಗಿವೆ. ಸಿಡಿಯಿಂದಲೋ, ಫೋಟೊಗಳಿಂದಲೋ ಬಿಜೆಪಿ ಪರಿಷತ್ ಸ್ಥಾನ ಕೊಟ್ಟು ಮಂತ್ರಿ ಮಾಡಿದೆ. ಅದನ್ನು ಅಚ್ಚುಕಟ್ಟಾಗಿ ಮಾಡಲಿ ಎಂದು ಸಲಹೆ ನೀಡಿದ್ದಾರೆ.
ರಾಜಕೀಯ ಜೋಕರ್:
ಕಾಂಗ್ರೆಸ್ನಿಂದ ಬಿಜೆಪಿಗೆ, ಬಿಜೆಪಿಯಿಂದ ಕಾಂಗ್ರೆಸ್‌ಗೆ ಸಮಾಜವಾದಿ ಪಕ್ಷಕ್ಕೆ, ನಂತರ ಕಾಂಗ್ರೆಸ್‌ಗೆ, ಬಿಜೆಪಿಗೆ... ಹೀಗೆ ವಿಭಿನ್ನ ಸಿದ್ಧಾಂತದ ಪಕ್ಷಗಳಿಗೆ ಅಧಿಕಾರಕ್ಕಾಗಿ ನೆಗೆದು ಜಿಗಿದ "ರಾಜಕೀಯದ ಜೋಕರ್" ಯೋಗೇಶ್ವರ್ ಜೆಡಿಎಸ್, ಎಚ್ಡಿಕೆ ಬಗ್ಗೆ ಮಾತಾಡಲು ಅರ್ಹರೆ? ರಾಜಕೀಯದ ಮದಗಜವೆಲ್ಲಿ, ಮರ್ಕಟ ಮನಸ್ಥಿತಿಯ ಜೋಕರ್ ಎಲ್ಲಿ? ಎಂದು ಬೋಜೇಗೌಡ ವಾಗ್ದಾಳಿ ನಡೆಸಿದ್ದಾರೆ.
ಟ್ವೀಟ್ ಮಾಡಿರುವ ಅವರು, ಏನದು... ಜೋಕರ್...? ಇಸ್ಪೀಟ್ ಆಡಿದ ಅನುಭವ ಇದ್ದವರುಗೇ ಅಲ್ಲವೇ ಜೋಕರ್‌ನ ಮಹತ್ವ ಗೊತ್ತು?. ಹಾಗಾಗಿಯೇ ನಿಮ್ಮ ನಾಲಿಗೆ ಮೇಲೆ ಜೋಕರ್‌ಗಳು ನಲಿದಾಡುತ್ತಾರೆ. ನೀವು ಇಷ್ಟು ದಿನ ಮಾಡಿಕೊಂಡು ಬಂದಿದ್ದೂ ಜೋಕರ್ ರಾಜಕೀಯವೇ ಅಲ್ಲವೇ? ಮದಗಜ ಎಚ್ಡಿಕೆಯನ್ನು ಹಣಿಯಲು ನೀವು ಡಿ.ಕೆ. ಶಿವಕುಮಾರ್ ಪಾದ ನೆಕ್ಕಿದ್ದನ್ನು ನಾವು ನೋಡಿಲ್ಲವೇ? ನಿಮ್ಮ ಚಿಲ್ಲರೆ ರಾಜಕೀಯದಿಂದ, ಮರ್ಕಟ ಬುದ್ಧಿಯಿಂದ, ಜೋಕರ್ ಆಟದಿಂದ, ಕಳೆದು ಹೋಗಿದ್ದ ಚನ್ನಪಟ್ಟಣದ ಘನತೆ ಮರುಸ್ಥಾಪಿಸಿದ್ದು ಎಚ್ಡಿಕೆ. ಚನ್ನಪಟ್ಟಣದವರೆಂದು ಹೇಳಿಕೊಳ್ಳಲು ಮುಜುಗರಪಡುತ್ತಿದ್ದ ಜನ ಇಂದು ಚನ್ನಪಟ್ಟಣದವರೆಂದು ಎದೆ ತಟ್ಟಿಕೊಂಡು ಹೇಳುತ್ತಿದ್ದಾರೆ. ಯಾಕೆಂದರೆ ಈಗ ಚನ್ನಪಟ್ಟಣದ ನಾಯಕ ಜೋಕರ್ ಅಲ್ಲ. ಕಿಂಗ್ ಎಚ್ಡಿಕೆ ಎಂದು ಗುಡುಗಿದ್ದಾರೆ.
ಬಿಜೆಪಿಯಲ್ಲಿ ಸಂಘಟನೆಯಿಂದ ನಾಯಕರಾಗುತ್ತಿದ್ದಾರೆ ಎಂದು ಹೇಳುತ್ತಿದ್ದರು. ಆದರೆ, ಜೇಬಿನಲ್ಲಿ ಸಿಡಿ ಇದ್ದರೂ ಸಚಿವ, ನಾಯಕರಾಗಬಹುದು ಎಂಬುದನ್ನು ನೀವು ಸಾಬೀತು ಮಾಡಿದ್ದೀರಿ. ಸಿಡಿಗಳು, ಫೋಟೊಗಳ ಸಂತ್ರಸ್ತರು ಬಿಜೆಪಿಯಲ್ಲಿ ಇರಬಹುದು. ಆದರೆ, ಜೆಡಿಎಸ್‌ನಲ್ಲಿ ನಿಮ್ಮ ಕ್ಯಾಮೆರಾಗಳಿಗೆ ಬೀಳುವವರು ಇಲ್ಲ. ನಿಮ್ಮ ಫೋಟೊಗಳಿಗೆ ಬೆದರುವುದೂ ಇಲ್ಲ. ಸಿಡಿ, ಫೋಟೊಗಳ ವಿಷಯದಲ್ಲಿ ಹುಷಾರಾಗಿರಿ 'ಸಿಡಿ ಯೋಗೇಶ್ವರ'. ಕಡೆಗೆ ನಿಮ್ಮ ಮಾತು ನಿಮ್ಮ ಮನೆಯವರನ್ನೇ ಬೀದಿಗೆ ತಂದು ಬಿಟ್ಟೀತು. ಡ್ರಗ್ಸ್ ದಂಧೆಯಲ್ಲಿ ಜೈಲು ಸೇರಿದವರ ಪಲ್ಲಂಗದಲ್ಲಿ ಪಂದ್ಯವಾಡಿದ ನಿಮ್ಮವರ ಫೋಟೋಗಳು, ವೀಡಿಯೊಗಳು ನಿಮ್ಮನ್ನು ಬಟಾ ಬಯಲು ಮಾಡಲಿವೆ. ಗಾಜಿನ ಮನೆಯಲ್ಲಿ ನಿಂತು ಕಲ್ಲೆಸೆಯಬೇಡಿ. ಬಾಯಿ ಚಪಲಕ್ಕೆ ಮಾತಾಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.
ಯೋಗೇಶ್ವರ್ ಮನಸ್ಸು ಮಂಗನಂತೆ ಚಂಚಲ:
ಇದೇ ವೇಳೆ ಟ್ವೀಟ್ ಮೂಲಕ ಯೋಗೇಶ್ವರ್ ವಿರುದ್ಧ ಕಿಡಿ ಕಾರಿರುವ ಮಾಜಿ ಪರಿಷತ್ ಸದಸ್ಯ ಶರವಣ, ಯೋಗೇಶ್ವರ್ ರಾಜಕೀಯ ಪ್ರಬುದ್ಧನಲ್ಲ. ಆತನ ಮನಸ್ಸು ಮಂಗನಂತೆ ಚಂಚಲ. ಹೀಗಾಗಿಯೇ ಊರಲ್ಲಿರುವ ಪಕ್ಷಗಳನ್ನೆಲ್ಲ ಸುತ್ತಿ ಬಂದಿದ್ದಾನೆ. ಈಗ ಬಿಜೆಪಿಯಲ್ಲಿ ಕುಳಿತು ಸಿದ್ಧಾಂತದ ಮಾತಾಡುತ್ತಾನೆ. ಆತನ ಬಾಯಲ್ಲಿ ಸಿದ್ಧಾಂತ ಕೇಳಿ ನಗಲಾರದವರೂ ನಕ್ಕರೆ ಆಶ್ಚರ್ಯವಿಲ್ಲ. ಯೋಗೇಶ್ವರ್ ತಾನೊಬ್ಬ ಸಾಚಾ ವ್ಯಕ್ತಿತ್ವದವನೆಂದು ಬಿಂಬಿಸಿಕೊಳ್ಳುವ ಪ್ರಯತ್ನ ಮಾಡುತ್ತಾನೆ. ಆದರೆ, ಮೆಗಾಸಿಟಿ ಹಗರಣದಲ್ಲಿನ ಅವನ ಪಾತ್ರ, ಅವನಿಂದ ನೊಂದವರು, ಆತ್ಮಹತ್ಯೆ ಮಾಡಿಕೊಂಡವರನ್ನು ಆತ ಮರೆಯುತ್ತಾನೆ. ವಂಚನೆ, ದಂಧೆ, ಜೂಜು ಎಂದರೆ ಕಣ್ಣೆದುರಿಗೆ ಬರುವುದೇ ಯೋಗೇಶ್ವರ. ಇಂಥವನು ಜನನಾಯಕನೊಬ್ಬನನ್ನು ಹೀಯಾಳಿಸುವುದು ಅಪಚಾರವೇ ಸರಿ ಎಂದು ಟೀಕಿಸಿದ್ದಾರೆ.
ಸುಳ್ಳು, ಬೆದರಿಕೆ, ಸೀಡಿ, ಫೋಟೊಗಳಿಂದ ಮಂತ್ರಿಯಾದ ಏಕೈಕ ಉದಾಹರಣೆ ಯೋಗೇಶ್ವರ. ಇಂಥ ನಾಲಾಯಕ್ ವ್ಯಕ್ತಿತ್ವದ ವ್ಯಕ್ತಿ, ಎಚ್‌ಡಿಕೆ ಅವರಂಥವರನ್ನು ಟೀಕಿಸುತ್ತಿರುವುದು ಸರಿಯಲ್ಲ. ಬಿಜೆಪಿ ವಿರುದ್ಧ ಎಚ್‌ಡಿಕೆ ವಿಷಯಾಧಾರಿತವಾಗಿ ಮಾತಾಡುತ್ತಾರೆ. ದ್ವೇಷ ಸಾಧಿಸಲ್ಲ. ಹಾಗಿದ್ದು, ಎಚ್ಡಿಕೆ ವಿರುದ್ಧ ಬಿಜೆಪಿ ಇಂಥವರನ್ನು ಛೂ ಬಿಡಬಾರದು ಎಂದು ವಾಗ್ದಾಳಿ ನಡೆಸಿದ್ದಾರೆ.