ಬೆಂಗಳೂರು: ಮಧ್ಯ ಕರ್ನಾಟಕ, ಹಳೆ ಮೈಸೂರಿಗೆ ಸೀಮಿತವಾಗದೇ ಕಿತ್ತೂರು ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗಗಳಲ್ಲಿ ಜೆಡಿಎಸ್ ಮತ್ತೆ ತನ್ನ ನೆಲೆಗಳನ್ನು ವಿಸ್ತಾರ ಮಾಡಿಕೊಳ್ಳುತ್ತಿದೆ. ಇದಕ್ಕೆ ಮುಖ್ಯಕಾರಣ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಟಿಕೆಟ್ ಸಿಗದೇ ವಂಚಿತರಾಗಿರುವ ನಾಯಕರು ಜೆಡಿಎಸ್ ಕಡೆ ಮುಖ ಮಾಡುತ್ತಿದ್ದಾರೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ತನ್ನ ಸಂಖ್ಯಾಬಲವನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಗಲಿದೆ. ಇದೊಂದು ರೀತಿಯಲ್ಲಿ ಜೆಡಿಎಸ್‌ಗೆ ಸುಗ್ಗಿಯಂತಲೇ ಹೇಳಬಹುದು.
ಜೆಡಿಎಸ್ ಪಕ್ಷಕ್ಕೆ ಮರುಜೀವ: ಉತ್ತರ ಕರ್ನಾಟಕದಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಪ್ರವಾಸ ಮಾಡಿದಾಗಲೆಲ್ಲ ನಿರೀಕ್ಷೆಗೂ ಮೀರಿ ಜನ ಸೇರುತ್ತಿದ್ದರು. ಆದರೆ, ಮತವಾಗಿ ಪರಿವರ್ತನೆ ಆಗುತ್ತಿರಲಿಲ್ಲ. ಜನರು ಜೆಡಿಎಸ್‌ಗೆ ಮತ ನೀಡಲು ಸಿದ್ಧರಿದ್ದರೂ ಮತಗಳನ್ನು ತರುವ ಅಭ್ಯರ್ಥಿಗಳ ಕೊರತೆ ಎದುರಾಗಿತ್ತು. ಆದರೆ, ಈಗ ಬಿಜೆಪಿ, ಕಾಂಗ್ರೆಸ್‌ನಲ್ಲಿ ಟಿಕೆಟ್ ಸಿಗದ ಮಾಜಿ ಶಾಸಕರು, ಮುಖಂಡರು ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಇದರಿಂದ ಪಕ್ಷವು ಪುನಃಶ್ಚೇತನಗೊಂಡಿದೆ. ಜೆಡಿಎಸ್‌ಗೆ ಮಾಜಿ ಶಾಸಕರ ದೊಡ್ಡ ದಂಡೇ ಹರಿದು ಬರುತ್ತಿದೆ. ಅದರಲ್ಲೂ ವಿಶೇಷವಾಗಿ ಕಿತ್ತೂರು ಕರ್ನಾಟಕ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ, ಕಾಂಗ್ರೆಸ್ ತೊರೆದು ಜೆಡಿಎಸ್ ಸೇರುತ್ತಿದ್ದಾರೆ.
ಕಳೆದ ವರ್ಷ ಜೆಡಿಎಸ್‌ನಲ್ಲಿದ್ದ ಹಿರಿಯ ನಾಯಕ ಬಸವರಾಜ ಹೊರಟ್ಟಿ, ಶಾಸಕರಾಗಿದ್ದ ಜೆಡಿಎಸ್ ಎನ್.ಎಚ್.ಕೋನರೆಡ್ಡಿ ಪಕ್ಷ ತೊರೆದಿದ್ದರು. ಬಸವರಾಜ ಹೊರಟ್ಟಿ ಬಿಜೆಪಿ ಸೇರ್ಪಡೆಯಿಂದಾಗಿ ಜೆಡಿಎಸ್‌ಗೆ ದೊಡ್ಡ ಹೊಡೆತ ಬಿದ್ದಿತ್ತು. ಜೆಡಿಎಸ್‌ನಲ್ಲಿದ್ದ ಎಂ.ಸಿ.ಮನಗೂಳಿ ನಿಧನರಾದರು. ಇವರ ಪುತ್ರ ಅಶೋಕ್ ಮನಗೂಳಿ, ಗೋಕಾಕ್ನ ಅಶೋಕ ಪೂಜಾರಿ, ನವಲಗುಂದದ ಎನ್.ಎಚ್.ಕೋನರೆಡ್ಡಿ ಕಾಂಗ್ರೆಸ್ ಕದ ತಟ್ಟಿದರು. ಇದರಿಂದಾಗಿ ಕಿತ್ತೂರು ಕರ್ನಾಟಕ ಭಾಗದಲ್ಲಿ ಜೆಡಿಎಸ್‌ನಲ್ಲಿ ಹೇಳಿಕೊಳ್ಳುವಂತಹ ಮುಖಂಡರು ಇರಲಿಲ್ಲ. ಇದರಿಂದಾಗಿ ಪಕ್ಷ ಕ್ಷೀಣಿಸಿತ್ತು. ಚುನಾವಣೆಗೆ ಸಮರ್ಥ ಅಭ್ಯರ್ಥಿಗಳ ಹುಡುಕಾಟ ಕೂಡ ಕಷ್ಟವಾಗಿತ್ತು.
ಹಳೇ ಮೈಸೂರು ಭಾಗದಲ್ಲಿ ಮಾತ್ರ ತಮ್ಮ ಶಕ್ತಿಯನ್ನು ಹೊಂದಿದ್ದ ಜೆಡಿಎಸ್, ಇದೀಗ ಕಿತ್ತೂರು ಕರ್ನಾಟಕದ ಕಡೆಗೂ ಚಾಚಿಕೊಳ್ಳುತ್ತಿದೆ. ಈ ವಲಸೆ ಪಕ್ಷಕ್ಕೆ ಹೊಸ ಶಕ್ತಿಯನ್ನು ತಂದುಕೊಟ್ಟಿದೆ. ಕಿತ್ತೂರು ಕರ್ನಾಟಕದಲ್ಲಿ ಜೆಡಿಎಸ್ ಈ ಬಾರಿ 15ರಿಂದ 20 ಸ್ಥಾನ ಗೆಲ್ಲುವ ಗುರಿ ಹೊಂದಿದೆ. ಚುನಾವಣೆ ಹಿನ್ನೆಲೆಯಲ್ಲಿ ಪಂಚರತ್ನ ರಥಯಾತ್ರೆ ನಡೆಸಿದ ನಂತರವಂತೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಜೆಡಿಎಸ್‌ಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕದ ಭಾಗದಿಂದಲೂ ಕೆಲವರು ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ.
ಬೆಳಗಾವಿ ಭಾಗದಲ್ಲಿ ಜೆಡಿಎಸ್‌ಗೆ ದೊಡ್ಡ ಬಲ: ಜೇವರ್ಗಿಯ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಶಹಾಪುರದ ಗುರುಲಿಂಗಪ್ಪಗೌಡ ಪಾಟೀಲ್ ಜೆಡಿಎಸ್‌ಗೆ ಸೇರಿದ್ದಾರೆ. ಬೀದರ್ ಉತ್ತರದಿಂದ ಸೂರ್ಯಕಾಂತ್ ನಾಗಮಾರಪಲ್ಲಿ ಬಿಜೆಪಿ ತೊರೆದು ನಿನ್ನೆಯಷ್ಟೇ ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ. ಬೆಳಗಾವಿ ಜಿಲ್ಲೆ ಸವದತ್ತಿ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ವಂಚಿತರಾದ ಸೌರಭ್ ಚೋಪ್ರಾ ಅವರು ಸೇರ್ಪಡೆಗೊಂಡಿರುವುದು ಕೂಡ ಬೆಳಗಾವಿ ಭಾಗದಲ್ಲಿ ಜೆಡಿಎಸ್‌ಗೆ ದೊಡ್ಡ ಶಕ್ತಿ ಬಂದಂತಾಗಿದೆ. ಇನ್ನು ಹಾವೇರಿಯಿಂದ ನೆಹರೂ ಓಲೇಕಾರ್ ಅವರು ಜೆಡಿಎಸ್ ಕದ ತಟ್ಟಿದ್ದಾರೆ. ಅದೇ ರೀತಿ ಕಾರವಾರ ಭಾಗದಲ್ಲಿ ಚೈತ್ರಾ- ಕೋಟೇಕರ್, ಪುತ್ತೂರು ಕ್ಷೇತ್ರದ ದಿವ್ಯಾ ಪ್ರಭಾಗೌಡ ಜೆಡಿಎಸ್ ಸೇರಿದ್ದಾರೆ.
ಉಭಯ ಪಕ್ಷಗಳ ಟಿಕೆಟ್ ವಂಚಿತರಿಗೆ ಗಾಳ: ಮಧ್ಯ ಕರ್ನಾಟಕದಲ್ಲೂ ಜೆಡಿಎಸ್ ಚೇತರಿಸಿಕೊಳ್ಳುತ್ತಿದೆ. ಚಿತ್ರದುರ್ಗ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ರಘು ಆಚಾರ್ ಈಗ ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಮಾಯಕೊಂಡದಲ್ಲಿ ಸವಿತಾಬಾಯಿ, ಎಚ್.ಆನಂದಪ್ಪ, ಪಾವಗಡದಲ್ಲಿ ಶ್ರೀರಾಮ್ ಜೆಡಿಎಸ್ ಸೇರ್ಪಡೆ ಗೊಂಡಿದ್ದಾರೆ. ಇನ್ನು ಬೆಣ್ಣೆ ನಗರಿ ದಾವಣಗೆರೆ ಜಿಲ್ಲೆಯಲ್ಲಿ ಕಾಂಗ್ರೆಸ್-ಬಿಜೆಪಿಗೆ ಬಂಡಾಯದ ಬಿಸಿ ತಟ್ಟಿದ ಬೆನ್ನಲ್ಲೇ ಉಭಯ ಪಕ್ಷಗಳ ಟಿಕೆಟ್ ವಂಚಿತರಿಗೆ ಗಾಳ ಹಾಕುವ ಮೂಲಕ ಜೆಡಿಎಸ್ ತನ್ನ ಬಲ ವೃದ್ಧಿಸಿಕೊಳ್ಳುತ್ತಿದೆ.
ಬಿಜೆಪಿ- ಕಾಂಗ್ರೆಸ್ ಹಣಿಯಲು ಜೆಡಿಎಸ್ ರಣತಂತ್ರ: ಇನ್ನು ಜೆಡಿಎಸ್ನಲ್ಲೇ ಇದ್ದು ಪಕ್ಷ ತೊರೆದ ಅರಸೀಕೆರೆ ಕ್ಷೇತ್ರದ ಶಿವಲಿಂಗೇಗೌಡ, ಗುಬ್ಬಿ ಕ್ಷೇತ್ರದ ಶಾಸಕ ಶ್ರೀನಿವಾಸ್ ಅವರ ಸ್ಥಾನಗಳನ್ನೂ ಜೆಡಿಎಸ್ ತುಂಬಿಕೊಂಡಿದೆ. ಅರಸೀಕೆರೆ ಕ್ಷೇತ್ರಕ್ಕೆ ಬಿಜೆಪಿಯಿಂದ ಟಿಕೇಟ್ ಕೈತಪ್ಪಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸಂಬಂಧಿ ಎನ್.ಆರ್.ಸಂತೋಷ್ಗೆ ಟಿಕೆಟ್ ನೀಡಿದ ಜೆಡಿಎಸ್, ಗುಬ್ಬಿ ಕ್ಷೇತ್ರಕ್ಕೂ ಪ್ರಬಲ ಸ್ಪರ್ಧಿಯನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ತಂತ್ರಕ್ಕೆ ಪ್ರತಿತಂತ್ರ ರೂಪಿಸುತ್ತಿರುವ ಜೆಡಿಎಸ್, ಶತಾಯಗತಾಯ 2023 ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಸ್ವತಂತ್ರ ಸರ್ಕಾರ ರಚನೆ ಮಾಡಬೇಕೆಂದು ಪಣತೊಟ್ಟಿದೆ. ಹಾಗಾಗಿ, ಯಾವೆಲ್ಲಾ ರಾಜಕೀಯ ತಂತ್ರಗಾರಿಕೆ ಮಾಡಬೇಕೋ ಅದೆಲ್ಲವನ್ನೂ ದಳಪತಿಗಳು ಮಾಡುತ್ತಿದೆ. ಎಲ್ಲವೂ ಚುನಾವಣೆಯ ಫಲಿತಾಂಶದ ದಿನ ಗೊತ್ತಾಗಲಿದೆ.
ಇದನ್ನೂ ಓದಿ: ಶೆಟ್ಟರ್ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ..!