ಬೆಂಗಳೂರು : ಸಚಿವ ಸಂಪುಟ ಪುನಾರಚನೆ ಬಗ್ಗೆ ಸಿಎಂ ಬಿ.ಎಸ್. ಯಡಿಯೂರಪ್ಪ ಚರ್ಚೆ ಮಾಡಿಲ್ಲ. ಆದರೆ, ಸಂಪುಟ ವಿಸ್ತರಣೆ ಕುರಿತು ಮಾತ್ರ ಸಿಎಂ ಆಲೋಚಿಸಿದ್ದಾರೆ ಎಂದು ಕಾನೂನು, ಸಂಸದೀಯ ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪ್ರಸ್ತುತ ಇರುವ ಸಚಿವರನ್ನು ತೆಗೆದು ಬೇರೆಯವರನ್ನು ಮಂತ್ರಿ ಮಾಡುವ ಬಗ್ಗೆ ಸಿಎಂ ಯಾವುದೇ ಚರ್ಚೆ ಮಾಡಿಲ್ಲ, ನಿನ್ನೆ ಗಣರಾಜ್ಯೋತ್ಸವ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳು, ಸಂಪುಟ ವಿಸ್ತರಣೆ ವೇಳೆ ಸಿಎಂಗೆ ಸಮಸ್ಯೆ ಆದರೆ ಏನು ಮಾಡ್ತೀರಾ ಅಂತಾ ಕೇಳಿದರು. ಅದಕ್ಕೆ ನಾನು ಸಚಿವ ಸ್ಥಾನ ತ್ಯಾಗ ಮಾಡುವ ಬಗ್ಗೆ ಹೇಳಿದೆ. ಸರ್ಕಾರ ಉಳಿಯ ಬೇಕಾದರೆ ನಾನು ತ್ಯಾಗ ಮಾಡಲು ಸಿದ್ದ ಎಂದಿದ್ದೆ ಅಷ್ಟೆ. ಹಾಗಂತ ನಾನೇನು ಸಚಿವ ಸ್ಥಾನ ತ್ಯಾಗ ಮಾಡುವ ಬಗ್ಗೆ ತೀರ್ಮಾನ ಮಾಡಿಲ್ಲ, ಈ ಕುರಿತು ಸಿಎಂ ನಮ್ಮ ಬಳಿ ಚರ್ಚೆ ಕೂಡ ಮಾಡಿಲ್ಲ ಎಂದರು.
ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಾಧುಸ್ವಾಮಿ, ಯತ್ನಾಳ್ ಅವರ ಅಭಿಪ್ರಾಯ ಹೇಳಿದ್ದಾರೆ. ಆದರೆ ನಾನು ರಾಜೀನಾಮೆ ನೀಡುವ ಸಂದರ್ಭ ಬಂದಿಲ್ಲ ಎಂದರು.
ಅಟಲ್ ಭೂಜಲ ಯೋಜನೆಯಡಿ ಅಂತರ್ಜಲ ಹೆಚ್ಚಳ : ಕೇಂದ್ರ ಸರ್ಕಾರದ ಉದ್ದೇಶಿತ ಅಟಲ್ ಭೂಜಲ ಯೋಜನೆಯಡಿ ಅಂತರ್ಜಲ ವೃದ್ಧಿಗೆ ರಾಜ್ಯದಲ್ಲಿ 14 ಜಿಲ್ಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು. ಯಾವ ಭಾಗದಲ್ಲಿ ಅಂತರ್ಜಲ ಗಣನೀಯವಾಗಿ ಕುಸಿತ ಕಂಡಿದೆಯೋ ಅಂತಹ ಕಡೆ ಈ ಯೋಜನೆಯನ್ನು ಜಾರಿ ಮಾಡಲಾಗುವುದು. ಇದು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, 1200 ಕೋಟಿ ರೂ. ಅನುದಾನ ನೀಡಲಿದೆ. ಕೇಂದ್ರ ಸರ್ಕಾರವೇ ಉಪಗ್ರಹದ ಮೂಲಕ ಸಮೀಕ್ಷೆ ನಡೆಸಿ ಯಾವ ಪ್ರದೇಶದಲ್ಲಿ ಗಣನೀಯವಾಗಿ ಕುಸಿತವಾಗಿದೆಯೋ ಅಂತಹ ಪ್ರದೇಶಗಳನ್ನು ಆಯ್ಕೆ ಮಾಡಲಾಗಿದೆ. ಈ ಯೋಜನೆಗೆ ರಾಜ್ಯದ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಸೇರಿದಂತೆ 14 ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ.
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು ಸೇರಿದಂತೆ ಹಲವು ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರು ಪೂರೈಕೆ ಮಾಡುವ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಗಳು ಹಂತಹಂತವಾಗಿ ಪೂರ್ಣಗೊಳ್ಳಲಿದೆ. ಈ ಯೋಜನೆಗಳು ಕೆಲವು ತಾಂತ್ರಿಕ ಕಾರಣಗಳಿಂದ ವಿಳಂಬವಾಗಿರಬಹುದು. ಆದರೆ ಯೋಜನೆಯನ್ನು ಕೈಬಿಡುವ ಪ್ರಶ್ನೆ ಇಲ್ಲ ಎಂದು ಸಚಿವರು ಹೇಳಿದರು.