ಬೆಂಗಳೂರು: ಜನತಾ ಜಲಧಾರೆ ಗಂಗಾ ರಥಯಾತ್ರೆ ನಿಮಿತ್ತ ರಾಜ್ಯದ ಎಲ್ಲಾ ಜೀವನದಿ ಹಾಗೂ ಉಪ ನದಿಗಳಿಂದ ಸಂಗ್ರಹ ಮಾಡಿದ ಪವಿತ್ರ ಗಂಗಾ ಜಲದ ಕಳಸ ಪ್ರತಿಷ್ಠಾಪನೆಯ ಮಹಾಪೂಜೆ ಹಾಗೂ ಕಳಸ ಪ್ರತಿಷ್ಠಾಪನೆ ಕಾರ್ಯಕ್ರಮ ಇಂದು ಶಾಸ್ತ್ರೋಕ್ತವಾಗಿ ನಡೆಯಿತು.
ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಇರಿಸಿರುವ ಬೃಹತ್ ಬ್ರಹ್ಮ ಕಳಸಕ್ಕೆ ಪಂಡಿತ ಡಾ.ಭಾನುಪ್ರಕಾಶ್ ಶರ್ಮಾ ನೇತೃತ್ವದ ಪಂಡಿತರ ತಂಡದಿಂದ ಪೂಜಾ ಕೈಂಕರ್ಯ ಜರುಗಿತು. 10 ಅಡಿಯ ಎತ್ತರದ 500 ಲೀಟರ್ ಜಲ ತುಂಬಲಿರುವ ಕಳಸವನ್ನು ಪ್ರತಿಷ್ಠಾಪನೆ ಮಾಡಲಾಯಿತು. ಬೆಳಗ್ಗೆ 9 ಗಂಟೆಯಿಂದಲೇ ಗಣ ಹೋಮ, ನವಗ್ರಹ ಹೋಮ, ಗಂಗಾ ಪೂಜೆ, ಪರ್ಜನ್ಯ ಹೋಮ, ಪೂರ್ಣಾಹುತಿ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ಸಾಂಗೋಪಾಂಗವಾಗಿ ನೆರವೇರಿದವು. ಪೂಜೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಅವರು ಪಾಲ್ಗೊಂಡಿದ್ದರು.
ದೇಶದ ಏಳು ಮಹಾನದಿಗಳ ಹೆಸರಿನಲ್ಲಿ ಇಡಲಾಗಿದ್ದ ಹದಿನೈದು ಪುಟ್ಟ ಕಳಸಗಳಿಗೆ ಕುಮಾರಸ್ವಾಮಿ ಅವರು ಶಾಸ್ತ್ರಬದ್ಧವಾಗಿ ಪೂಜೆ, ವಿಧಿ - ವಿಧಾನ ನೆರವೇರಿಸಿದರು. ಸುಮಾರು ಎರಡು ಗಂಟೆಗಳ ಕಾಲ ನಡೆದ ಪೂಜಾ ಕೈಂಕರ್ಯ ಬೆಳಗ್ಗೆ 12 ಗಂಟೆಗೆ ಸಮಾಪ್ತಿಯಾಯಿತು. ಇದಾದ ಮೇಲೆ ಬ್ರಹ್ಮ ಕಳಸ ಪ್ರತಿಷ್ಠಾಪನೆ ನಡೆಯಿತಲ್ಲದೇ, ರಾಜ್ಯದ ಉದ್ದಗಲಕ್ಕೂ ಸಂಗ್ರಹ ಮಾಡಲಾಗಿದ್ದ ಜಲವನ್ನು ಅದಕ್ಕೆ ತುಂಬಿಸಲಾಯಿತು. ಮೊದಲು ಕುಮಾರಸ್ವಾಮಿ ಅವರು ಪುಟ್ಟ ಕಳಸದ ಮೂಲಕ ಬ್ರಹ್ಮ ಕಳಸಕ್ಕೆ ಪವಿತ್ರ ಜಲವನ್ನು ತುಂಬಿಸಿದರು.
ಪಕ್ಷದ ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇಂದಿನಿಂದ ಕಳಸಕ್ಕೆ ಮುಂದಿನ ಒಂದು ವರ್ಷ ಕಾಲ ಸಂಪ್ರದಾಯದಂತೆ ನಿತ್ಯ ಗಂಗಾಪೂಜೆ ನಡೆಯುತ್ತದೆ ಎಂದು ಕುಮಾರಸ್ವಾಮಿ ಅವರು ತಿಳಿಸಿದರು.
ಓದಿ: ಮಂಗಳೂರು ವಿವಿ ಕಾಲೇಜಿನಲ್ಲಿ ಹಿಜಾಬ್ ವಿವಾದ: ನೋಟಿಸ್ ಬೋರ್ಡ್ನಲ್ಲಿ ಸೂಚನಾ ಪತ್ರ ಹಾಕಿದ ಪ್ರಾಂಶುಪಾಲರು