ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನವೆಂಬರ್ 27ರಂದು ಬೆಳಿಗ್ಗೆ 9.30ಕ್ಕೆ ಗೃಹ ಕಚೇರಿ ಕೃಷ್ಣಾದಲ್ಲಿ ಜನತಾ ದರ್ಶನ ನಡೆಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ. ಜನರ ಹತ್ತಿರ ಆಡಳಿತ ಯಂತ್ರ ಕೊಂಡೊಯ್ಯುವ ನಿಟ್ಟಿನಲ್ಲಿ ಸಿಎಂ, ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಪ್ರತಿ ತಿಂಗಳು ಜನತಾ ದರ್ಶನ ನಡೆಸುವಂತೆ ಸೂಚನೆ ನೀಡಿದ್ದರು. ಇದೀಗ ಸ್ವತಃ ಮುಖ್ಯಮಂತ್ರಿ ಬೆಂಗಳೂರಿನಲ್ಲಿ ಜನತಾ ದರ್ಶನ ನಡೆಸಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ, ಬಗೆಹರಿಸಲು ಕ್ರಮ ಕೈಗೊಳ್ಳುತ್ತಿದ್ದಾರೆ.
ಆಡಳಿತಕ್ಕೆ ಚುರುಕು ಮುಟ್ಟಿಸಿ, ಸರ್ಕಾರಿ ಯಂತ್ರವನ್ನು ಕ್ರಿಯಾಶೀಲಗೊಳಿಸುವ ಪ್ರಯತ್ನವಾಗಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಸಿದ್ದರಾಮಯ್ಯ ಈ ಸಂಬಂಧ ಸೂಚನೆ ನೀಡಿದ್ದರು. ಜಾತಿ ಪ್ರಮಾಣಪತ್ರ, ಖಾತೆ ಬದಲಾವಣೆ, ಟ್ರಾನ್ಸ್ ಫಾರ್ಮರ್ ರಿಪೇರಿ, ವಿದ್ಯುತ್ ಕಂಬ ಅಳವಡಿಕೆಯಂತಹ ಸಣ್ಣಪುಟ್ಟ ಕೆಲಸಗಳಿಗೂ ಜನ ನನ್ನ ಬಳಿಗೆ ಬರುತ್ತಿದ್ದಾರೆ. ನಾನು ಜಿಲ್ಲೆಗಳಿಗೆ ಭೇಟಿ ನೀಡಿದಾಗ ಜನರು ಇಷ್ಟು ಸಣ್ಣ ಪುಟ್ಟ ಕೆಲಸಗಳಿಗೂ ನನ್ನನ್ನು ಹುಡುಕಿಕೊಂಡು ಬರುವಂತಾಗಿದೆ ಎಂದರೆ ನಿಮಗೆ ತಿಳಿದಿದ್ದರೂ ಏನು ಪ್ರಯೋಜನ? ಎಂದು ಸಭೆಯಲ್ಲಿ ಗರಂ ಆಗಿದ್ದರು. ಬಳಿಕ ಪ್ರತಿ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲೂ ಜನತಾ ದರ್ಶನ ನಡೆಸಬೇಕು ಎಂದು ತಿಳಿಸಿದ್ದರು.
ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಸೆ. 25ರಿಂದ ಜನತಾ ದರ್ಶನ ನಡೆಸಲಾಗಿತ್ತು. ಪ್ರತಿ ತಿಂಗಳು ಜನತಾ ದರ್ಶನ ನಡೆಸಲು ಸಿಎಂ ಉಸ್ತುವಾರಿ ಸಚಿವರಿಗೆ ಸೂಚನೆ ಕೊಟ್ಟಿದ್ದರು. ಅದಾಗಿ ಎರಡು ವಾರಗಳ ಬಳಿಕ ಮುಖ್ಯಮಂತ್ರಿಗಳ ಜನತಾ ದರ್ಶನ ಕಾರ್ಯಕ್ರಮವನ್ನು ಅಧಿಕೃತವಾಗಿ ನಡೆಸಲು ಸರ್ಕಾರ ಮುಂದಾಗಿತ್ತು. ಅಕ್ಟೋಬರ್ 9ರಂದು ಜನತಾದರ್ಶನ ನಡೆಸಲು ಮುಂದಾಗಿದ್ದರು. ಆದರೆ, ಸಿಎಂ ಅಂದು ದೆಹಲಿಗೆ ತೆರಳಬೇಕಿದ್ದ ಕಾರಣದಿಂದ ಮುಂದೂಡಲಾಗಿತ್ತು. ಇದೀಗ ಸಿಎಂ ನ.27ರಂದು ಜನತಾ ದರ್ಶನ ಮಾಡಲು ನಿರ್ಧರಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಯಜಮಾನ ಇಲ್ಲದಿದ್ದರೆ ಅನ್ನಭಾಗ್ಯ, ಗೃಹಲಕ್ಷ್ಮಿ ಹಣ ಮನೆಯ 2ನೇ ಹಿರಿಯ ವ್ಯಕ್ತಿಯ ಖಾತೆಗೆ ವರ್ಗಾವಣೆ