ಬೆಂಗಳೂರು: ಮಾಜಿ ಸಚಿವ ಜನಾರ್ದನ್ ರೆಡ್ಡಿ ಅವರು ಇಲ್ಲಿನ ತಮ್ಮ ನಿವಾಸ ಪಾರಿಜಾತದಲ್ಲಿ ಸೋಮವಾರ ಬೆಳಗ್ಗೆ 10.30ಕ್ಕೆ ಮಹತ್ವದ ಮಾಧ್ಯಮಗೋಷ್ಟಿ ಕರೆದಿದ್ದು, ತಮ್ಮ ಹೊಸ ರಾಜಕೀಯ ಹೆಜ್ಜೆ ಬಗ್ಗೆ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗ್ತಿದೆ.
ಈ ಮಾಧ್ಯಮಗೋಷ್ಟಿ ಭಾರಿ ಕುತೂಹಲ ಮೂಡಿಸಿದೆ. ಜನಾರ್ದನ್ ರೆಡ್ಡಿ ನಾಳೆ ಬಿಜೆಪಿಗೆ ಶಾಕ್ ಕೊಡ್ತಾರಾ ಎಂಬ ಬಲವಾದ ಅನುಮಾನ ಮೂಡಿದೆ. ಈಗಾಗಲೇ ಹೊಸ ಪಕ್ಷ ಕಟ್ಟುವ ವದಂತಿ ಹಿನ್ನೆಲೆಯಲ್ಲಿ ಮಾಧ್ಯಮಗೋಷ್ಟಿ ಕುತೂಹಲ ಕೆರಳಿಸಿದೆ.
ಇದೇ ಡಿ.30ಕ್ಕೆ ಮಂಡ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಲಿದ್ದು, ಅಮಿತ್ ಶಾ ಎಂಟ್ರಿ ಹೊತ್ತಲ್ಲಿ ಮಹತ್ವದ ರಾಜಕೀಯ ನಿರ್ಧಾರ ಪ್ರಕಟ ಮಾಡ್ತಿದಾರಾ ಜನಾರ್ದನ್ ರೆಡ್ಡಿ ಎಂಬ ಅನುಮಾನ ಕೂಡ ವ್ಯಕ್ತವಾಗಿದೆ. ಕಳೆದ ಒಂದು ವಾರದಿಂದ ಮಠ ಮಾನ್ಯಗಳು, ದರ್ಗಾಗಳಿಗೆ ಮಾಜಿ ಸಚಿವ ಗಾಲಿ ಜನಾರ್ದನ್ ರೆಡ್ಡಿ ಭೇಟಿ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಡಿ.19ರಂದು ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದರು. ಬಳಿಕ ಹುಬ್ಬಳ್ಳಿಯ ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿದ್ದರು. ಡಿ.20ಕ್ಕೆ ಗದಗದ ತೋಂಟದಾರ್ಯಾ ಶ್ರೀಗಳ ಗದ್ದುಗೆ ಹಾಗೂ ಪುಟ್ಟರಾಜ ಗವಾಯಿಗಳ ಗದ್ದುಗೆಯ ದರ್ಶನ ಪಡೆದಿದ್ದರು. ಡಿ.21ರಂದು ಮಸ್ಕಿಯಲ್ಲಿ ಪ್ರಮುಖ ಮುಖಂಡರ ಭೇಟಿಯಾಗಿದ್ದರು.
ಡಿ.22ರಂದು ಗಂಗಾವತಿಗೆ ತೆರಳಿ ಗ್ರಾಮ ದೇವತೆ ದುರ್ಗಾದೇವಿಯ ಜಾತ್ರಾ ಮಹೋತ್ಸವ ಹಾಗೂ ಪ್ರಮುಖ ಮುಖಂಡರನ್ನು ಭೇಟಿಯಾಗಿದ್ದರು. ಗಂಗಾವತಿಯಲ್ಲಿ ಮನೆ ಮಾಡಿರುವ ರೆಡ್ಡಿ, ಕರ್ನೂಲಸಾಬರ ದರ್ಗಾ ಹಾಗೂ ಖಾಲಿಲುಲ್ಲ ಖಾದ್ರಿ ದರ್ಗಾಕ್ಕೆ ಭೇಟಿ ನೀಡಿದ್ದರು. ಹೊಸ ಪಕ್ಷ ಕಟ್ಟುತ್ತಾರೆ ಎಂಬ ಸುದ್ದಿಯ ಮಧ್ಯೆ ಜನಾರ್ದನ್ ರೆಡ್ಡಿ ಅವರು ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿದ್ದು, ಭಾನುವಾರ ಎಲ್ಲ ಕುತೂಹಲಕ್ಕೂ ಉತ್ತರ ಸಿಗಲಿದೆ. ಬೆಂಗಳೂರಿನಲ್ಲಿ ಮಾಧ್ಯಮಗೋಷ್ಟಿ ಕರೆದಿದ್ದೇನೆ. ಅಂದೇ ಎಲ್ಲವನ್ನು ಹೇಳುತ್ತೇನೆ ಎಂದು ರೆಡ್ಡಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.
ಗಂಗಾವತಿ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ರೆಡ್ಡಿ.. ಜನಾರ್ದನ್ ರೆಡ್ಡಿ ಅವರು ಇತ್ತೀಚೆಗೆ ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ಮಾತನಾಡಿದ್ದ ವೇಳೆ ಗಂಗಾವತಿ ತಮ್ಮ ಕರ್ಮಭೂಮಿ, ಮೊದಲಿನಿಂದಲೂ ನಮ್ಮ ತಂದೆಯವರು ಅಲ್ಲೇ ವೃತ್ತಿ ಮಾಡುತ್ತಿದ್ದರು. ಆ ಕ್ಷೇತ್ರದ ಜನರೊಂದಿಗೆ ನಮ್ಮ ಕುಟುಂಬಕ್ಕೆ ಒಡನಾಟ ಹೆಚ್ಚಿದೆ. ಹಾಗಾಗಿ ಅದೇ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿರುವುದಾಗಿ ಬಹಿರಂಗ ಪಡಿಸಿದ್ದರು.
ಜನಾರ್ದನ್ ರೆಡ್ಡಿಯನ್ನು ಬಿಜೆಪಿ ಬಿಟ್ಟುಕೊಡಲ್ಲ.. ಮತ್ತೊಂದೆಡೆ ಇಂದು ಬಳ್ಳಾರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಸಾರಿಗೆ ಸಚಿವ ಬಿ ಶ್ರೀರಾಮು ಅವರು, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಈ ಭಾಗದ ಹಿರಿಯ ನಾಯಕರು, ನಮ್ಮ ಪಕ್ಷದ ಹಿರಿಯ ನಾಯಕರು ರೆಡ್ಡಿ ಅವರ ಮನವೊಲಿಸುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ರಾಜಕೀಯ ನಿರ್ಧಾರದ ಕುರಿತು ನಾಳೆ ಜನಾರ್ದನ ರೆಡ್ಡಿ ಮಾಧ್ಯಮಗೋಷ್ಟಿ ನಡೆಸಲಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬಳ್ಳಾರಿಯಲ್ಲಿ ಇಂದು ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಅವರನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಮುಖ್ಯಮಂತ್ರಿ ಅವರು ಸೇರಿದಂತೆ ರಾಜ್ಯದ ನಾಯಕರು, ಪಕ್ಷದ ಅಧ್ಯಕ್ಷರು ಅವರ ಜತೆಗೆ ಈಗಾಗಲೇ ಮಾತನಾಡಿದ್ದಾರೆ. ಜನಾರ್ದನ ರೆಡ್ಡಿ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲಿದ್ದೇವೆ ಎಂದು ತಿಳಿಸಿದರು.
2023ರಕ್ಕೆ ಬಿಜೆಪಿ ಮತ್ತೆ ಅಧಿಕಾರಕ್ಕೆ: ರಾಜ್ಯದಲ್ಲಿ 2023ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರೋದು ನಿಶ್ಚಿತ, ಕಾಂಗ್ರೆಸ್ ಪಕ್ಷದವರು ತಿರುಕನಂತೆ ಕನಸು ಕಾಣುತ್ತಿದ್ದಾರೆ ಎಂದು ಶ್ರೀರಾಮುಲು ವ್ಯಂಗ್ಯವಾಗಿ ವಿಶ್ವಾಸ ವ್ಯಕ್ತಪಡಿಸಿದ್ದರು.
(ಓದಿ: ನನ್ನ ಜೊತೆ ಯಾರು ಬರ್ತಾರೆ ಎಂಬುದು ವಾಜಪೇಯಿ ಜನ್ಮದಿನದವರೆಗೆ ಕಾಯಿರಿ: ಮಾಜಿ ಸಚಿವ ಜನಾರ್ದನ ರೆಡ್ಡಿ )