ಬೆಂಗಳೂರು : ನನ್ನ ಆರೋಗ್ಯ ಸರಿಯಿಲ್ಲ. ಆದರೂ ನಿಮಗೆ ಸಮಯ ನೀಡಿದ್ದೇನೆ. ಮಾತಿಗೆ ತಪ್ಪಬಾರದು ಎಂಬ ಕಾರಣಕ್ಕೆ ವೈದ್ಯರ ವಿಶ್ರಾಂತಿ ಸಲಹೆಯನ್ನು ಲೆಕ್ಕಿಸದೆ ಇಲ್ಲಿಗೆ ಆಗಮಿಸಿದ್ದೇನೆ. ಜನ ಸೇವೆಯೇ ಜನಾರ್ದನ ಸೇವೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಜನರ ಬಳಿ ತೆರಳಿ ಅವರ ಕಷ್ಟ ಆಲಿಸಿ ಮನವಿ ಸ್ವೀಕರಿಸಿದರು.
ಶಿವಾಜಿನಗರದ ಆರ್ಬಿಎಎನ್ಎಂಎಸ್ ಶಾಲಾ ಮೈದಾನದಲ್ಲಿ ಹಮ್ಮಿಕೊಂಡಿದ್ದ "ಬಾಗಿಲಿಗೆ ಬಂತು ಸರಕಾರ, ಸೇವೆಗೆ ಇರಲಿ ಸಹಕಾರ” ಕಾರ್ಯಕ್ರಮದಲ್ಲಿ, 102 ಡಿಗ್ರಿ ಜ್ವರದ ನಡುವೆಯೂ ಕೈಗೆ ಡ್ರಿಪ್ಸ್ ಸಲೈನ್ ಸೂಜಿ ಹಾಕಿಕೊಂಡೇ ಅಹವಾಲು ಸ್ವೀಕರಿಸಿದರು.
ಟ್ಯಾಕ್ಸ್ ಕಡಿಮೆ ಮಾಡಿಸುತ್ತೇನೆ : ಟ್ಯಾನರಿ ರಸ್ತೆಯಲ್ಲಿ ಜ್ಯೋತಿ ಸೇವಾ ಅಂಧ ಮಕ್ಕಳ ಶಾಲೆ ನಡೆಸುತ್ತಿರುವ ಶ್ವೇತಾ ಎಂಬವರು, ಸಾರ್, ನಮ್ಮದು ಅಂಧ ಮಕ್ಕಳ ಶಾಲೆ. ಬಿಬಿಎಂಪಿಯವರು ವಾಣಿಜ್ಯ ಕಟ್ಟಡ ಎಂದು ಹೆಚ್ಚಿನ ತೆರಿಗೆ ವಸೂಲಿ ಮಾಡುತ್ತಿದ್ದಾರೆ. ಕಡಿಮೆ ಮಾಡಿ ಕೊಡಿ ಸರ್ ಎಂದಾಗ ಟ್ಯಾಕ್ಸ್ ಕಡಿಮೆ ಮಾಡಿಸುತ್ತೇನೆ ಆರಾಮಾಗಿರು ಎಂದು ಹೇಳಿದರು. ಬಳಿಕ ಈ ಬಗ್ಗೆ ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡಿದರು.
ಸಾರ್ ಬೇಗ ಹುಷಾರಾಗಿ, ಮತ್ತೊಮ್ಮೆ ಬನ್ನಿ: ನನ್ನ ಮಗ ಶಿವಾಜಿನಗರದ ಅಲೋಷಿಯಸ್ ಶಾಲೆಯಲ್ಲಿ ಓದುತ್ತಿದ್ದು, ಶಾಲಾ ಶುಲ್ಕ ಬಾಕಿ ಇದ್ದು ಕಟ್ಟುವ ಶಕ್ತಿ ಇಲ್ಲ ಎಂದು ಭವ್ಯ ಅವರು ಹೇಳಿದಾಗ, ಸಂಬಂಧಪಟ್ಟವರಿಗೆ ಸೂಚನೆ ನೀಡುತ್ತೇನೆ. ಮಗನನ್ನು ಚೆನ್ನಾಗಿ ಓದಿಸು ಎಂದರು. ಬಳಿಕ ಡಿಸಿಎಂ ಅವರಿಗೆ ʼ ಸಾರ್ ಬೇಗ ಹುಷಾರಾಗಿ, ಮತ್ತೊಮ್ಮೆ ಬನ್ನಿʼ ಎಂದರು.
ಕಳೆದ 15 ವರ್ಷಗಳಿಂದ ಬಿಬಿಎಂಪಿ ಪೂರ್ವ ವಲಯದ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದೇವೆ. ನಮ್ಮನ್ನು ಖಾಯಂ ಮಾಡಿ ಎಂದು ಶ್ರೀದೇವಿ ಮತ್ತು ಜ್ಯೋತಿ ಅವರು ಅಹವಾಲು ತೋಡಿಕೊಂಡರು. ಬಿಬಿಎಂಪಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವವರ ಖಾಯಂ ಬಗ್ಗೆ ಮತ್ತೊಮ್ಮೆ ಚರ್ಚೆ ಮಾಡಲಾಗುವುದು ಎಂದು ಡಿಸಿಎಂ ಹೇಳಿದರು.
ಏಳು ಸಾವಿರ ಜನರಿಂದ ಭೇಟಿ : ಕಳೆದ ಎರಡು ಕಾರ್ಯಕ್ರಮಗಳಲ್ಲಿ ನೀಡಿದಂತೆ ಹೆಚ್ಚಿನ ಸಮಯವನ್ನು ನಿಮಗೆ ನೀಡಲಾಗದಿದ್ದರೂ ನಿಮ್ಮ ಅಹವಾಲು ಸ್ವೀಕರಿಸುತ್ತೇನೆ. ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುವ ಪ್ರಯತ್ನ ಮಾಡುತ್ತೇನೆ. ಕಳೆದ ಎರಡು ದಿನಗಳ ಕಾರ್ಯಕ್ರಮದಲ್ಲಿ ಸುಮಾರು 7 ಸಾವಿರ ಜನ ನನ್ನನ್ನು ಭೇಟಿ ಮಾಡಿ ತಮ್ಮ ಅಹವಾಲು ಸಲ್ಲಿಸಿದ್ದಾರೆ. ಎಲ್ಲೂ ನ್ಯಾಯ ಸಿಗದಿದ್ದಾಗ ಮಾತ್ರ ಜನರು ರಾಜಕಾರಣಿಗಳನ್ನು ಹುಡುಕಿಕೊಂಡು ಬರುತ್ತಾರೆ. ಈ ಹಿಂದೆ ನನ್ನ ಕ್ಷೇತ್ರದ ಹಳ್ಳಿಗಳಿಗೆ ಅಧಿಕಾರಿಗಳನ್ನು ಕರೆದುಕೊಂಡು ಹೋಗಿ ಜನರ ಸಮಸ್ಯೆ ಆಲಿಸುತ್ತಿದ್ದೆ ಎಂದರು.
ಸಿಎಂ ಸಿದ್ದರಾಮಯ್ಯ ಅವರು ಎಲ್ಲ ಸಚಿವರಿಗೂ ಜನರ ಮಧ್ಯೆ ಹೋಗಿ ಅವರ ಸಮಸ್ಯೆ ಆಲಿಸಲು ಸೂಚನೆ ನೀಡಿದ್ದಾರೆ. ನನ್ನ ಜತೆ ಉತ್ತಮ ಅಧಿಕಾರಿಗಳ ತಂಡವಿದೆ. ನಾನು ಹಾಗೂ ಶಾಸಕರು ಮಾತ್ರ ಇಲ್ಲಿ ಬಂದಿಲ್ಲ. ಸುಮಾರು 200-300 ಅಧಿಕಾರಿಗಳು ಇಲ್ಲಿ ಬಂದು ನಿಮ್ಮ ಸಮಸ್ಯೆ ಆಲಿಸುತ್ತಿದ್ದೇವೆ. ಇದರಿಂದ ಜನಪರ ಆಡಳಿತಕ್ಕೆ ಅನುಕೂಲವಾಗಲಿದೆ ಎಂದು ಡಿ ಕೆ ಶಿವಕುಮಾರ್ ಹೇಳಿದರು.
ಮೂರು ಆ್ಯಪ್‌ಗಳ ಅನಾವರಣ : ಇದೇ ವೇಳೆ ಹಸಿರು ರಕ್ಷಕ, ಉದ್ಯಾನ ಮಿತ್ರ ಮತ್ತು ಕೆರೆ ಮಿತ್ರ ಎಂಬ ಮೂರು ಆ್ಯಪ್ಗಳನ್ನು ಡಿಸಿಎಂ ಅನಾವರಣಗೊಳಿಸಿದರು. ನಗರದಲ್ಲಿ ಹಸಿರು ಹೆಚ್ಚಿಸಲು ಶಾಲಾ ಮಕ್ಕಳೇ ಗಿಡ ಬೆಳೆಸುವ ಯೋಜನೆ ಇದಾಗಿದೆ. 2023-24ನೇ ಸಾಲಿನಲ್ಲಿ 224 ಶಾಲಾ-ಕಾಲೇಜುಗಳ ಜತೆ ಒಡಂಬಡಿಕೆ ಮಾಡಿಕೊಂಡು, 52,015 ಮಕ್ಕಳಿಂದ 1 ಲಕ್ಷ ಗಿಡಗಳನ್ನು ನೆಡಲಾಗಿದೆ. 3 ವರ್ಷಗಳ ಕಾಲ ಗಿಡವನ್ನು ಯಶಸ್ವಿಯಾಗಿ ಬೆಳೆಸಿದ ವಿದ್ಯಾರ್ಥಿಗಳಿಗೆ "ಹಸಿರು ರಕ್ಷಕ" ಪ್ರಮಾಣ ಪತ್ರ ನೀಡಲಾಗುವುದು.
ಉದ್ಯಾನ ಮಿತ್ರ ಯೋಜನೆ ಮೂಲಕ ನಗರದ ಉದ್ಯಾನವನಗಳ ನಿರ್ವಹಣೆಯನ್ನು ಸ್ಥಳೀಯ ಜನರಿಗೆ ನೀಡುವ ನಿರ್ಧಾರ ಮಾಡಲಾಗಿದೆ. ನಗರದಲ್ಲಿ 1200 ಉದ್ಯಾನವನಗಳಿದ್ದು ಇವುಗಳನ್ನು ಜನರೇ ನಿರ್ವಹಣೆ ಮಾಡುವಂತೆ ಪ್ರೇರೇಪಿಸಲಾಗುವುದು.
ಇದನ್ನೂ ಓದಿ : ಎನ್ಪಿಎಸ್ ರದ್ದು ಕೋರಿ ನೌಕರರ ಸಂಘದಿಂದ ಸಿಎಂಗೆ ಮನವಿ: ಸಂಪುಟ ಸಭೆಯಲ್ಲಿ ಚರ್ಚಿಸಿ ಕ್ರಮದ ಭರವಸೆ