ಬೆಂಗಳೂರು: ಪೀಣ್ಯ ಮತ್ತು ಎಲೆಕ್ಟ್ರಾನಿಕ್ ಸಿಟಿ ಮಾದರಿಯಲ್ಲಿ ಹುಬ್ಬಳ್ಳಿ-ಧಾರವಾಡ ವ್ಯಾಪ್ತಿಯಲ್ಲಿ ಕೈಗಾರಿಕಾ ವಸಾಹತುಗಳಿಗೆ ಶೇ. 70 ಮತ್ತು 30ರ ಪ್ರಮಾಣದಲ್ಲಿ ನಿರ್ವಹಣೆ ಜವಾಬ್ದಾರಿಗೆ ಅನುಮತಿ ನೀಡುವ ಸಂಬಂಧ ಕಾನೂನಾತ್ಮಕವಾಗಿ ಪರಿಶೀಲಿಸಲು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಸೂಚನೆ ನೀಡಿದ್ದಾರೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಸಂಬಂಧಿಸಿದಂತೆ ವಲಯ ನಿಯಮಾವಳಿ ಪರಿಷ್ಕರಣೆ, ಪಿಂಚಣಿ ಅನುದಾನ, ನೀರಿನ ಶುಲ್ಕದ ಬಡ್ಡಿ ಮನ್ನಾ, ಕೈಗಾರಿಕೆಗಳಿಗೆ ಸಂಬಂಧಿಸಿದಂತೆ ಆಸ್ತಿ ತೆರಿಗೆ, ಪೌರಕಾರ್ಮಿಕರ ನೇರ ನೇಮಕಾತಿ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಧಾರವಾಡ ಜಿಲ್ಲಾ ಉಸ್ತುವಾರಿ ಹಾಗೂ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಮತ್ತು ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜು ನೇತೃತ್ವದಲ್ಲಿ ಸಭೆ ನಡೆಲಾಯಿತು.
ಸರ್ಕಾರದಿಂದ ಒಟ್ಟು ಪಿಂಚಣಿ ಅನುದಾನ 115 ಕೋಟಿ ರೂ. ನೀಡುವುದು ಬಾಕಿ ಇದೆ. ಈಗಾಗಲೇ 52 ಕೋಟಿ ರೂ. ಬಿಡುಗಡೆಗೆ ಅನುಮೋದನೆ ನೀಡಲಾಗಿದೆ. ಈ ಪೈಕಿ 26 ಕೋಟಿ ರೂಪಾಯಿಯನ್ನು ವಿತರಿಸಲಾಗಿದೆ. ಇನ್ನು ಉಳಿದ 26 ಕೋಟಿಯನ್ನು ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ, ಒಂದು ವಾರದೊಳಗೆ ಬಿಡುಗಡೆಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರದ ಕಾರ್ಯದರ್ಶಿಗಳಿಗೆ ಸಚಿವ ಶೆಟ್ಟರ್ ಸೂಚನೆ ನೀಡಿದರು.
ರಾಜ್ಯದಲ್ಲಿ ಕೈಗಾರಿಕೆಗಳಿಗೆ ಮಹಾನಗರ ಪಾಲಿಕೆಗಳು ಹಾಗೂ ಸ್ಥಳೀಯ ಸಂಸ್ಥೆಗಳ ವತಿಯಿಂದ ಆಸ್ತಿ ತೆರಿಗೆ ಪಾವತಿಸಲು ನೋಟಿಸ್ ನೀಡಲಾಗುತ್ತಿದೆ. ನಾಗಶೆಟ್ಟಿ ಕೊಪ್ಪ ಮತ್ತು ಹಳೇ ಹುಬ್ಬಳ್ಳಿಯಲ್ಲಿ ಈಗಾಗಲೇ ಹಂಚಿಕೆ ಮಾಡಲಾದ ನಿವೇಶನದಾರರಿಗೆ ಹಕ್ಕುಪತ್ರ ನೀಡುವ ಸಂಬಂಧ ಕಾನೂನಾತ್ಮಕವಾಗಿ ಪರಿಶೀಲಿಸಿ ಕೂಡಲೇ ಕ್ರಮ ವಹಿಸಲು ಸೂಚನೆ ನೀಡಿದರು.
ಪೌರಕಾರ್ಮಿಕರ ನೇರ ನೇಮಕಾತಿ:
ಘನತ್ಯಾಜ್ಯ ನಿರ್ವಹಣೆಗಾಗಿ ಲೋಡರ್ಸ್, ಕ್ಲೀನರ್ಸ್, ಡ್ರೈವರ್ಸ್ ಮತ್ತು ಸಹಾಯಕರು ಈ ಹುದ್ದೆಗಳಿಗೆ ನೇಮಕಾತಿ ಮಾಡುವ ಸಂಬಂಧ ಪರಿಶೀಲಿಸಿ ವರದಿ ನೀಡುವಂತೆ ಹುಬ್ಬಳ್ಳಿ ಮಹಾನಗರ ಪಾಲಿಗೆ ಆಯುಕ್ತರಿಗೆ ಸೂಚನೆ ನೀಡಿದರು.
ವಲಯ ನಿಯಮಾವಳಿ ಪರಿಷ್ಕರಿಸುವ ಬಗ್ಗೆ:
ಕ್ರೆಡಾಯ್ ಸಂಸ್ಥೆಯಿಂದ ಬಂದಂತಹ ಪ್ರತಿನಿಧಿಗಳು ಹುಬ್ಬಳ್ಳಿ-ಧಾರವಾಡ ನಗರಕ್ಕೆ ಈಗಾಗಲೇ ಮಂಜೂರಾದ ವಲಯ ನಿಯಮಾವಳಿಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿದರು. ಅದರಲ್ಲಿದ್ದ ಕೆಲವೊಂದು ನ್ಯೂನತೆ ಹಾಗೂ ಲೋಪದೋಷಗಳನ್ನು ವಿವರಿಸುತ್ತಾ, ಈ ಸಂಬಂಧವಾಗಿ ಸರಿಪಡಿಸಲು ಕೂಡಲೇ ತಿದ್ದುಪಡಿ ಮಾಡಲು ಅಗತ್ಯ ಕ್ರಮವನ್ನು ಒಂದು ತಿಂಗಳ ಒಳಗೆ ತಗೆದುಕೊಳ್ಳುವಂತೆ ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ್ ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚಿಸಿದರು.