ಬೆಂಗಳೂರು: ಬೊಮ್ಮಾಯಿ ಸಂಪುಟಕ್ಕೆ ಸೇರದಿರುವ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ, ಸ್ವಾಭಿಮಾನ ಮತ್ತು ಗೌರವದಿಂದ ಈ ನಿರ್ಧಾರ ಕೈಗೊಂಡಿದ್ದು, ಬಹಳಷ್ಟು ಜನರು ನನ್ನ ನಿರ್ಧಾರವನ್ನು ಸ್ವಾಗತಿಸಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೊಬ್ಬ ಮಾಜಿ ಸಿಎಂ ಆಗಿರುವ ಕಾರಣ ಮುಜುಗರ ಆಗಬಾರದು ಎಂದು ಈ ನಿರ್ಧಾರ ಕೈಗೊಂಡಿದ್ದೇನೆ. ಯಡಿಯೂರಪ್ಪ ದೊಡ್ಡನಾಯಕ ಹೀಗಾಗಿ ನಾನು ಮಾಜಿ ಸಿಎಂ ಆದರೂ ಅವರ ಮಂತ್ರಿಮಂಡಲ ಸೇರಿದ್ದೆ. ಹಿಂದಿನ ಸರ್ಕಾರದಲ್ಲಿ ಯಡಿಯೂರಪ್ಪ ಬಿಟ್ಟು ಯಾರೇ ಸಿಎಂ ಆಗಿದ್ದರೂ ನಾನು ಸಂಪುಟ ಸೇರುತ್ತಿರಲಿಲ್ಲ ಈಗಲೂ ಅಷ್ಟೇ ಬೊಮ್ಮಾಯಿ ಮಾತ್ರವಲ್ಲ ಈಗ ಯಾರೇ ಸಿಎಂ ಆಗಿದ್ದರೂ ನಾನು ಸಚಿವನಾಗುತ್ತಿರಲಿಲ್ಲ ಎಂದರು.
ನನ್ನ ನಿರ್ಧಾರವನ್ನು ಈಗಾಗಲೇ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಿಎಂ ಬಸವರಾಜ ಬೊಮ್ಮಾಯಿ ಅವರಿಗೂ ತಿಳಿಸಿದ್ದೇನೆ. ಹೈಕಮಾಂಡ್ ನನಗೆ ಯಾವುದೇ ಸೂಚನೆ ಕೊಟ್ಟಿಲ್ಲ ಇದು ನನ್ನ ವೈಯಕ್ತಿಕ ನಿರ್ಧಾರ. ಸ್ವಾಭಿಮಾನ ಗೌರವದಿಂದ ಈ ನಿರ್ಧಾರ ಮಾಡಿದ್ದು, ಬಹಳ ಜನ ನನ್ನ ನಿರ್ಧಾರವನ್ನು ಸ್ವಾಗತಿಸಿದ್ದಾರೆ ಎಂದರು.
ಓದಿ: ಹುಬ್ಬಳ್ಳಿ ನನ್ನ ಪ್ರೀತಿಯ ಊರು, ಇಲ್ಲಿನ ಅಭಿವೃದ್ಧಿಗೆ ಶ್ರಮಿಸುತ್ತೇನೆ: ಸಿಎಂ ಬೊಮ್ಮಾಯಿ ಭರವಸೆ