ಬೆಂಗಳೂರು: ಬೆಂಗಳೂರು, ತುಮಕೂರು, ನೆಲಮಂಗಲದಲ್ಲಿ ಮಾಜಿ ಡಿಸಿಎಂ ಪರಮೇಶ್ವರ್ ಹಾಗೂ ಅವರ ಆಪ್ತರಿಗೆ ಸೇರಿದ ಆಸ್ತಿ ಪಾಸ್ತಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ಮುಂದುವರೆಸಿದ್ದಾರೆ. ತುಮಕೂರಿನ ಮೆಡಿಕಲ್ ಕಾಲೇಜು, ನೆಲಮಂಗಲ ಕಾಲೇಜ್ ಬೆಂಗಳೂರಿನ ಪರಂ ನಿವಾಸ ಹೀಗೆ ಪರಮೇಶ್ವರ್ ಅವರಿಗೆ ಸೇರಿದ ಎಲ್ಲೆಡೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಸುಮಾರು 4.52 ಕೋಟಿಗೂ ಹೆಚ್ಚು ನಗದು ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಈ ಬಗ್ಗೆ ಐಟಿ ಅಧಿಕಾರಿಗಳು ಅಧಿಕೃತವಾಗಿ ಖಚಿತ ಪಡಿಸಿಲ್ಲ.
ಸಧ್ಯ ಐಟಿ ದಾಳಿ ವೇಳೆ ಸಿಕ್ಕ ನಗದು, ಅಪಾರ ಪ್ರಮಾಣದ ಆಸ್ತಿ ಖರೀದಿ ಮಾಡಿರುವ ಬಗ್ಗೆ ದಾಖಲೆ ಹಾಗೆಯೇ ಪರಮೇಶ್ವರ್ ಆಪ್ತರ ಜೊತೆ ಹೊಂದಿರುವ ಆಸ್ತಿಯ ವಿವರಗಳ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ.
ತುಮಕೂರು, ಬೆಂಗಳೂರು, ಮೈಸೂರು ಭಾಗದಲ್ಲಿರುವ ಆಸ್ತಿಗಳು ಹಾಗೂ ಶಿಕ್ಷಣ ಸಂಸ್ಥೆಗಳಿಗೆ ದೇಣಿಗೆ ನೀಡಿರುವ ಕಾರ್ಪೋರೇಟ್ ಕಂಪನಿಗಳ ದಾಖಲೆಗಳ ಬಗ್ಗೆ ಐಟಿ ವಿಚಾರಣೆ ನಡೆಸುತ್ತಿದೆ ಎನ್ನಲಾಗಿದೆ. ಮಗಳು ಹೊಂದಿರುವ ಕಾರುಗಳ ಬಗ್ಗೆಯೂ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.