ಬೆಂಗಳೂರು: ಎಸ್ ಎಸ್ ಎಲ್ ಸಿ ಪರೀಕ್ಷೆ ರದ್ಧು ಮಾಡುವುದು ಸರಿಯಲ್ಲ. ಪರೀಕ್ಷೆ ರದ್ಧು ಮಾಡಿದರೆ ಮಕ್ಕಳ ಭವಿಷ್ಯಕ್ಕೆ ಕಷ್ಟ. ಕೋವಿಡ್ ನೆಪ ಹೇಳಿ ಪರೀಕ್ಷೆ ರದ್ಧು ಮಾಡುವ ಪ್ರಯತ್ನ ಬೇಡ ಎಂದು ವಿಧಾನಪರಿಷತ್ನ ಸಭಾಪತಿ ಬಸವರಾಜ ಹೊರಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕೆಲವು ಕಡೆ ಪೋಷಕರು ಪರೀಕ್ಷೆ ಬೇಡ ಅಂತಾರೆ. ಇನ್ನು ಶೇ. 70 ರಷ್ಟು ಪೋಷಕರು ಪರೀಕ್ಷೆ ಬೇಕು ಅಂತಾರೆ. ಈಗಾಗಲೇ ನಾನು ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಪರೀಕ್ಷೆ ನಡೆಸುವುದು ಸೂಕ್ತ ಎಂದರು.
ಬೇರೆ ರಾಜ್ಯಗಳ ವ್ಯವಸ್ಥೆ ಬೇರೆ, ನಮ್ಮಲ್ಲಿ ಬೇರೆ. ಬೇರೆ ರಾಜ್ಯಗಳಲ್ಲಿ ತ್ರಿಟಯರ್ ವ್ಯವಸ್ಥೆ ಇದೆ. ಮೂರು ಹಂತದ ಸ್ಕೂಲ್ ವಿಭಾಗವಿದೆ. ನಮ್ಮಲ್ಲಿ ಅಂತಹ ವ್ಯವಸ್ಥೆ ಇಲ್ಲ. ಎಸ್ ಎಸ್ ಎಲ್ ಸಿ ಪರೀಕ್ಷೆ ಆಗದೇ ಬೇರೆಯದಕ್ಕೆ ಹೋಗಲು ಸಾಧ್ಯವಿಲ್ಲ. ನಮ್ಮಲ್ಲಿರುವ ಎಸ್ಎಸ್ಎಲ್ಸಿ ಪದ್ಧತಿ ಇದು. ಪರೀಕ್ಷೆ ನಡೆಸದಿದ್ದರೆ ಮಕ್ಕಳು ಹಾಳಾಗಿ ಹೋಗುತ್ತಾರೆ ಎಂದು ಹೇಳಿದರು.
ಮಕ್ಕಳಿಗೆ ಸ್ಯಾನಿಟೈಸ್, ಸಾಮಾಜಿಕ ಅಂತರ ಪಾಲನೆ ಬಗ್ಗೆ ತಿಳಿವಳಿಕೆ ಮೂಡಿಸಲಿ. 20 ಮಂದಿಗೆ ಒಂದು ಕೊಠಡಿಯಲ್ಲಿ ಪರೀಕ್ಷೆ ನಡೆಸಲಿ. ಆದರೆ ಪರೀಕ್ಷೆ ರದ್ಧು ಮಾಡುವುದು ಬೇಡ ಎಂದು ಸಲಹೆ ನೀಡಿದರು.
ಎಂಟು ಲಕ್ಷ ಮಕ್ಕಳಿಗೂ ಒಂದೇ ಮಾರ್ಕ್ಸ್ ಕೊಡ್ತಾರೆ. ಒಂದೇ ಮಾರ್ಕ್ಸ್ ಇದ್ದರೆ ಬೇರೆ ಕಾಲೇಜ್ಗೆ ಹೋದರೆ ಕಷ್ಟ. ಕಾಲೇಜ್ ಸೇರುವುದಕ್ಕೆ ಅಂಕ ಮುಖ್ಯವಾಗುತ್ತದೆ. ಅದಕ್ಕೆ ಸರ್ಕಾರ ಪರೀಕ್ಷೆ ನಡೆಸಬೇಕು. ಡಿಹೆಚ್ ಒಡಿಡಿಪಿಐಗೆ ಕಠಿಣ ನಿರ್ದೇಶನ ನೀಡಲಿ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪರೀಕ್ಷೆ ನಡೆದರೆ ಉತ್ತಮ ಎಂದರು.
ಕಠಿಣ ರೂಲ್ಸ್: ಸಚಿವಾಲಯದ ಸಿಬ್ಬಂದಿಗೆ ಕಠಿಣ ರೂಲ್ಸ್ ಮಾಡಲಾಗುತ್ತಿದೆ. ಕಡ್ಡಾಯವಾಗಿ ಬಯೋಮೆಟ್ರಿಕ್ ಮಾಡಿದ್ದೇವೆ. ಸ್ಯಾನಿಟೈಸ್ ಮಾಡಿ ಬಯೋಮೆಟ್ರಿಕ್ ಉಪಯೋಗಿಸಬೇಕು. ಕೊರೊನಾ ಎಂದು ಬಯೋಮೆಟ್ರಿಕ್ ತೆಗೆಯುವಂತಿಲ್ಲ. ತೆಗೆದರೆ ಸಿಬ್ಬಂದಿ ಸರಿಯಾಗಿ ಕರ್ತವ್ಯ ನಿರ್ವಹಿಸಲ್ಲ. ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಬರಲ್ಲ. ಹೀಗಾಗಿ, ಬಯೋಮೆಟ್ರಿಕ್ ಕಡ್ಡಾಯ ಮಾಡಿದ್ದೇವೆ. ಸರಿಯಾದ ಸಮಯಕ್ಕೆ ಬಾರದವರಿಗೆ ಕ್ರಮ ತೆಗೆದುಕೊಳುತ್ತೇವೆ ಎಂದು ಹೇಳಿದರು.
ಡಿ ಗ್ರೂಪ್ ನೌಕರರಿಗೆ ಸಮವಸ್ತ್ರ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೊರಟ್ಟಿ, ನೌಕರರು ಹೇಳಿದಂತೆ ಕುಣಿಯಲು ಸಾಧ್ಯವಿಲ್ಲ. ನಾವು ಯಾವ ನಿಯಮ ಮಾಡುತ್ತೇವೆಯೋ ಅದನ್ನು ಅನುಸರಿಸಬೇಕು. ಯೂನಿಫಾರಂ ಇದ್ದರೆ ಕರ್ತವ್ಯದಲ್ಲಿ ಶಿಸ್ತು ಹೆಚ್ಚಾಗಲಿದೆ. ಕಲರ್ ಚೇಂಜ್ ಮಾಡುವುದಕ್ಕೆ ಸಾಧ್ಯವಿಲ್ಲ. ಈಗಾಗಲೇ ಸಮವಸ್ತ್ರದ ಬಗ್ಗೆ ಹೇಳಿದ್ದೇವೆ. ಸರ್ಕಾರಿ ಮಳಿಗೆಯಿಂದಲೇ ಸಮವಸ್ತ್ರ ಖರೀದಿ ಮಾಡಲಾಗುತ್ತಿದೆ. ಸೀರೆಗೆ ಬದಲು ಚೂಡಿದಾರ್ ಹಾಕಿಕೊಳ್ಳಲು ಅವಕಾಶ ಇದೆ ಎಂದರು.
ಓದಿ: ಇಂಧನ ದರದ ಹೊಡೆತ.. ಆರ್ಥಿಕ ಸಂಕಷ್ಟದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ..