ಬೆಂಗಳೂರು: ಚುನಾವಣೆ ಬಂದಾಗ ಐಟಿ, ಇಡಿ ದಾಳಿಯ ನಾಟಕ ಆರಂಭವಾಗುತ್ತದೆ. ಇವುಗಳು ಆಡಳಿತ ಪಕ್ಷದ ಶಸ್ತ್ರಗಳಾಗಿವೆ. ವಿರೋಧ ಪಕ್ಷದ ಮೇಲೆ ದಾಳಿ ಮಾಡಿಸಲಾಗುತ್ತದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಲ್ ದೂರಿದರು.
ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ನಾವು ಕಾನೂನು ಪಾಲಿಸುವವರಾಗಿದ್ದೇವೆ. ಬಿಜೆಪಿ ವಿರುದ್ಧವೂ ಸಾಕಷ್ಟು ಪ್ರಕರಣಗಳಿವೆ. ಕುಮಾರಸ್ವಾಮಿ ಸರ್ಕಾರ ಪತನವಾಗುವ ವೇಳೆ ಸಾಕಷ್ಟು ಹಣದ ಆಮಿಷ ನೀಡಿರುವುದು ಎಲ್ಲಾ ಮಾಧ್ಯಮಗಳಿಗೂ ಗೊತ್ತಿದೆ. ಅವರ ವಿರುದ್ಧ ಇಡಿ, ಆದಾಯ ತೆರಿಗೆ ಅಧಿಕಾರಿಗಳು ಯಾವ ಕ್ರಮಕ್ಕೆ ಮುಂದಾಗಿದ್ದಾರೆ. ಇಡಿಯಲ್ಲಿ ಕೆಲ ಬಿಜೆಪಿ ನಾಯಕರ ವಿರುದ್ಧವೂ ಪ್ರಕರಣಗಳು ದಾಖಲಾಗಿವೆ. ಆದರೆ, ಏನೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕಿಡಿಕಾರಿದರು.
ಕಾಂಗ್ರೆಸ್ ನಾಯಕರ ಮೇಲೆ ಮಾತ್ರ ಈ ದಾಳಿ ಏಕೆ ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಕೇಳುತ್ತಿದ್ದಾರೆ. ಚುನಾವಣಾ ಆಯೋಗವೂ ಪಕ್ಷಪಾತಿಯಾಗಿದೆ. ಡಿ. 1ಕ್ಕೆ ಉಪ ಚುನಾವಣೆ ಘೋಷಣೆಯಾದರೂ ನೀತಿ ಸಂಹಿತೆ ಜಾರಿಯಾಗಿಲ್ಲ. ಅಲ್ಲಿವರೆಗೆ ಸರ್ಕಾರ ಏನನ್ನು ಬೇಕಾದರು ಮಾಡಬಹುದೇ ಎಂದು ಪ್ರಶ್ನಿಸಿದರು.
ಬಿಜೆಪಿ ಅತೃಪ್ತರನ್ನು ಕಾಂಗ್ರೆಸ್ಗೆ ಸೇರಿಸಬೇಕೋ, ಬೇಡವೋ ಎಂಬ ಬಗ್ಗೆ ಅವರ ಯೋಗ್ಯತೆ ಆಧಾರದಲ್ಲಿ ನಿರ್ಧರಿಸಲಿದ್ದೇವೆ. ಬಿಜೆಪಿ ತರಹ ಎಲ್ಲರನ್ನು ಸೇರಿಸಿಕೊಳ್ಳಲಾಗದು ಎಂದು ಸ್ಪಷ್ಟಪಡಿಸಿದರು.