ಬೆಂಗಳೂರು : ರಾಜ್ಯ ವಿಧಾನಸಭೆ ಚುನಾವಣೆ ಕೆಲವೇ ತಿಂಗಳು ಬಾಕಿ ಇರುವಾಗ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಈಗಿನಿಂದಲೇ ಪ್ರಚಾರ ಆರಂಭಿಸಿವೆ. ಮೂರೂ ಪಕ್ಷಗಳ ಹಾಲಿ ಶಾಸಕರು ಸೋಲು, ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಮೂರೂ ಪಕ್ಷಗಳಲ್ಲಿ ಈಗಿರುವ ಹಾಲಿ ಶಾಸಕರ ಪೈಕಿ ಬಿಜೆಪಿ 20, ಕಾಂಗ್ರೆಸ್ 15 ಹಾಗೂ ಜೆಡಿಎಸ್‌ನ 5 ಶಾಸಕರ ಗೆಲುವು ಕಷ್ಟ ಎಂಬ ಮಾಹಿತಿ ಆಂತರಿಕವಾಗಿ ನಡೆಸಿರುವ ಸಮೀಕ್ಷೆಯಲ್ಲಿ ಗೊತ್ತಾಗಿದೆ. ಹಾಗಾಗಿ, ಆ ಕ್ಷೇತ್ರಗಳಲ್ಲಿ ಗೆಲುವಿಗೆ ಏನು ಮಾಡಬೇಕು ಎಂಬ ಬಗ್ಗೆ ನಾಯಕರ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ.
ಸತತ ಎರಡು ಬಾರಿ ಗೆದ್ದವರು, ಕ್ಷೇತ್ರದ ಅಭಿವೃದ್ಧಿ ನಿರ್ಲಕ್ಷ್ಯ ಮಾಡಿದವರು, ಸಮುದಾಯದ ವಿರೋಧ ಕಟ್ಟಿಕೊಂಡವರು ಹೀಗೆ ನಾನಾ ಕಾರಣಗಳಿಗೆ ಹಾಲಿ ಶಾಸಕರಿಗೆ 40 ಕ್ಷೇತ್ರಗಳಲ್ಲಿ ಕಷ್ಟ ಎಂಬುದು ಮೂರೂ ಪಕ್ಷಗಳು ನಡೆಸಿರುವ ಸಮೀಕ್ಷೆಯಲ್ಲಿ ಕಂಡು ಬಂದಿದ್ದು, ಇದು ಆತಂಕಕ್ಕೆ ಕಾರಣವಾಗಿದೆ. 2018ರ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದ 104 ಕ್ಷೇತ್ರಗಳ ಜೊತೆಗೆ ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ರಾಜೀನಾಮೆ ನೀಡಿ ಬಂದ 14 ಮಂದಿ ಬಿಜೆಪಿ ಚಿಹ್ನೆಯಡಿ ಆಯ್ಕೆಯಾಗಿದ್ದರಿಂದ ಸಂಖ್ಯಾಬಲ 118ಕ್ಕೆ ಏರಿದೆ. ಈ ಪೈಕಿ 20 ಕ್ಷೇತ್ರಗಳಲ್ಲಿ ಕಷ್ಟಕರ ವಾತಾವರಣವಿದೆ ಎಂಬುದು ಆಂತರಿಕ ಸಮೀಕ್ಷೆಯಲ್ಲಿ ತಿಳಿದುಬಂದಿದೆ.
ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ ಶಾಸಕರ ಪಕ್ಷಾಂತರ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿ ಹಳೇ ಮೈಸೂರು ಭಾಗದ ಒಕ್ಕಲಿಗ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಬಲ ಹೆಚ್ಚಿಸಿಕೊಂಡು ಈ ಬಾರಿ ಹೆಚ್ಚುವರಿಯಾಗಿ 10 ರಿಂದ 15 ಸ್ಥಾನ ಗೆದ್ದರೆ ಸಾಕು ಎಂಬ ಗುಂಗಿನಲ್ಲಿದ್ದ ಬಿಜೆಪಿ ನಾಯಕರಿಗೆ ಆಂತರಿಕ ಸಮೀಕ್ಷೆ ಶಾಕ್ ನೀಡಿದೆ. ಬಿಜೆಪಿಗೆ ಇದುವರೆಗೂ ಗೆಲ್ಲದಿರುವ 60 ಕ್ಷೇತ್ರಗಳ ಬಗ್ಗೆ ಹೆಚ್ಚು ಗಮನ ಹರಿಸುವುದರ ಜೊತೆಗೆ ಇದೀಗ ಸೋಲುವ ಸಾಧ್ಯತೆ ಇರುವ ಕ್ಷೇತ್ರಗಳ ಬಗ್ಗೆಯೂ ತಲೆಬಿಸಿಯಾಗಿದೆ. ಹೀಗಾಗಿಯೇ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಸ್ವ ಸಾಮರ್ಥ್ಯ, ಪ್ರಭಾವಿ ನಾಯಕರಿಗೆ ಗಾಳ ಹಾಕಿ ಪ್ರಾಥಮಿಕ ಮಾತುಕತೆ ಮುಗಿಸಿದೆ ಎನ್ನಲಾಗ್ತಿದೆ.
ಮೊದಲಿಗೆ 10 ರಿಂದ 15 ಶಾಸಕರನ್ನು ಸೆಳೆಯಲು ಕಾರ್ಯತಂತ್ರ ರೂಪಿಸಲಾಗಿತ್ತಾದರೂ ಇದೀಗ 20 ರಿಂದ 25 ಜನರನ್ನು ಕರೆತರುವ ಪ್ರಯತ್ನಕ್ಕೆ ಕೈ ಹಾಕಲಾಗಿದೆ ಎಂದು ಹೇಳಲಾಗುತ್ತಿದೆ.
ಮುಂಬರುವ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವ ಅತೀವ ವಿಶ್ವಾಸದಲ್ಲಿರುವ ಕಾಂಗ್ರೆಸ್ ನಲ್ಲೂ ಆಂತರಿಕ ಸಮೀಕ್ಷೆಯ ತಳಮಳ ಶುರುವಾಗಿದೆ. ಬಣ ರಾಜಕೀಯ, ನಾಯಕರಲ್ಲಿನ ಸಮನ್ವಯ ಕೊರತೆ ದೊಡ್ಡ ಮಟ್ಟದ ಪೆಟ್ಟು ಕೊಡಲಿದೆ. ಹಾಲಿ ಶಾಸಕರ ಸೋಲಿಗೂ ಇದು ಕಾರಣವಾಗಲಿದೆ ಎಂದು ಸಮೀಕ್ಷೆಯಲ್ಲಿ ಕಂಡುಬಂದಿದೆ. ಜೊತೆಗೆ, ಕಾಂಗ್ರೆಸ್ ನಿಂದ ಬಿಜೆಪಿಗೆ ಹೋಗಿರುವವರ ಕ್ಷೇತ್ರಗಳಲ್ಲಿ ಇನ್ನೂ ಸಮರ್ಥ ಅಭ್ಯರ್ಥಿಗಳು ಸಿಕ್ಕಿಲ್ಲ. ಇದು ಕಾಂಗ್ರೆಸ್‌ಗೆ ಸವಾಲಾಗಿದೆ. ಜೆಡಿಎಸ್‌ನಲ್ಲಿ ಹಾಲಿ ಶಾಸಕರ ಪೈಕಿ ಐವರು ಗೆಲ್ಲುವುದು ಕಷ್ಟ ಎಂಬುವರ ಪೈಕಿ ಕಾಂಗ್ರೆಸ್ ಹಾಗೂ ಬಿಜೆಪಿಯತ್ತ ತಮ್ಮ ಚಿತ್ತ ಹರಿಸಿರುವವರೂ ಇದ್ದಾರೆ.
ಇನ್ನು, ಹಳೇ ಮೈಸೂರು ಭಾಗದಲ್ಲಿ ತಮ್ಮ ಸ್ಥಾನಗಳನ್ನು ಹಾಗೇ ಉಳಿಸಿಕೊಳ್ಳುವುದರ ಜೊತೆಗೆ ಹುಣಸೂರು, ಕೆ.ಆರ್. ನಗರ ಮತ್ತಿತರ ಕ್ಷೇತ್ರಗಳ ಮೇಲೂ ಜೆಡಿಎಸ್ ಕಣ್ಣಿಟ್ಟಿದೆ. ಇದರ ಜೊತೆಗೆ ಉತ್ತರ ಕರ್ನಾಟಕ, ಮಧ್ಯ ಕರ್ನಾಟಕದ ಹಲವು ಕ್ಷೇತ್ರಗಳ ಮೇಲೂ ಕಣ್ಣಿಟ್ಟಿರುವ ಜೆಡಿಎಸ್, ಹೊಸ ಮುಖಗಳಿಗೆ ತಲಾಶ್ ಮಾಡುತ್ತಿದೆ.
ಶತಾಯಗತಾಯ 2023 ಕ್ಕೆ ರಾಜ್ಯದ ಚುಕ್ಕಾಣಿ ಹಿಡಿಯಲೇಬೇಕೆಂದು ಪಣತೊಟ್ಟಿರುವ ಜೆಡಿಎಸ್‍ನ ದಳಪತಿಗಳು, ನವೆಂಬರ್ 1 ರಿಂದ ಪಂಚರತ್ನ ರಥಯಾತ್ರೆ ಆರಂಭಿಸುತ್ತಿದ್ದಾರೆ. ರಾಜ್ಯದ ಮನೆಮಾತಾಗಿದ್ದ ಗ್ರಾಮ ವಾಸ್ತವ್ಯವನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮತ್ತೆ ಪ್ರಾರಂಭಿಸುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ರಾಜ್ಯದ ಮತದಾರ ಯಾರಿಗೆ ಒಲಿಯುತ್ತಾನೆ ಎಂಬುದನ್ನು ಕಾದುನೋಡಬೇಕು.
ಇದನ್ನೂ ಓದಿ: ಯಾರ‍್ಯಾರನ್ನೋ ಕರ್ಕೊಂಡು ಸರ್ಕಾರ ಮಾಡಿದ್ದೇವೆ, 8 ಶಾಸಕರು ರಾಜೀನಾಮೆ ನೀಡಿದ್ರೆ ಸರ್ಕಾರ ಬಿದ್ದು ಹೋಗುತ್ತೆ: ಸಂಸದ ಸಿದ್ದೇಶ್ವರ್