ಬೆಂಗಳೂರು: ಬಸವಕಲ್ಯಾಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಸಯ್ಯದ್ ಯಸ್ರಬ್ ಆಲಿ ಖಾದರಿ ಅವರ ಪರವಾಗಿ ಜೆಡಿಎಸ್ ನಾಯಕರು ಸೋಮವಾರದಿಂದ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೋಮ್ ಕ್ವಾರಂಟೈನ್‍ನಲ್ಲಿರುವುದರಿಂದ ಚುನಾವಣಾ ಪ್ರಚಾರಕ್ಕೆ ತೆರಳುವುದು ಕೆಲ ದಿನ ವಿಳಂಬವಾಗುವ ಸಾಧ್ಯತೆ ಇದೆಯೆಂದು ಪಕ್ಷದ ಮೂಲಗಳು ತಿಳಿಸಿವೆ.
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ, ಮಾಜಿ ಸಚಿವರಾದ ಬಂಡೆಪ್ಪ ಕಾಶೆಂಪೂರ್, ವೆಂಕಟರಾವ್ ನಾಡಗೌಡ, ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ ಸೇರಿದಂತೆ ಪಕ್ಷದ ನಾಯಕರು ಬಸವಕಲ್ಯಾಣ ಉಪ ಚುನಾವಣೆಯ ಪ್ರಚಾರಕ್ಕಿಳಿಯಲಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಅವರು ಚುನಾವಣಾ ಪ್ರಚಾರಕ್ಕೆ ಹೋಗುವ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ ಎನ್ನಲಾಗ್ತಿದೆ.
ಇದನ್ನೂ ಓದಿ: ಬಸವಕಲ್ಯಾಣ ಉಪ ಕದನ.. ಮರಾಠಾ ಸಭೆಯಲ್ಲಿ ಸಂಸದ ಭಗವಂತ ಖೂಬಾಗೆ ತೀವ್ರ ಮುಖಭಂಗ
ಬೆಳಗಾವಿ ಲೋಕಸಭಾ ಕ್ಷೇತ್ರ ಹಾಗೂ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ. ಬಸವಕಲ್ಯಾಣ ಒಂದೇ ಕ್ಷೇತ್ರದಲ್ಲಿ ಮಾತ್ರ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು, ಶತಾಯಗತಾಯ ಹೋರಾಟ ನಡೆಸಿ ಗೆಲುವು ಸಾಧಿಸಬೇಕೆಂಬ ವಿಶ್ವಾಸವನ್ನು ಪಕ್ಷದ ವರಿಷ್ಠರು ಹೊಂದಿದ್ದಾರೆ. ಚುನಾವಣಾ ಪ್ರಚಾರ ಮುಗಿಯುವವರೆಗೂ ಕ್ಷೇತ್ರದಲ್ಲಿ ಬೀಡು ಬಿಟ್ಟು ಗೆಲುವಿಗಾಗಿ ತಮ್ಮದೇ ಆದ ಕಾರ್ಯತಂತ್ರಗಳನ್ನು ರೂಪಿಸಲಿದ್ದಾರೆ.