ಬೆಂಗಳೂರು : ಬಿಜೆಪಿ ಸರ್ಕಾರಗಳಿಂದ ರೈತರ ಬದುಕು ನಾಶ ಎನ್ನುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ಅತ್ಯಂತ ಹಾಸ್ಯಾಸ್ಪದವಾಗಿದ್ದು ಜವಾಬ್ದಾರಿಯುತ ಪ್ರತಿಪಕ್ಷದ ನಾಯಕರಾಗಿ ಸರ್ಕಾರಕ್ಕೆ ಸೂಕ್ತ ಸಲಹೆಗಳನ್ನು ಕೊಡುವುದು ಬಿಟ್ಟು ಈ ರೀತಿಯಾಗಿ ಬೇಜವಾಬ್ದಾರಿ ಹೇಳಿಕೆ ಕೊಡುವುದು ಸೂಕ್ತವಲ್ಲ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ತಿಳಿಸಿದ್ದಾರೆ.
ಕಾಂಗ್ರೆಸ್ ಕಳೆದ ಅರವತ್ತು ವರ್ಷಕ್ಕೂ ಹೆಚ್ಚು ಸಮಯ ಕೇಂದ್ರ ಹಾಗೂ ರಾಜ್ಯಗಳಲ್ಲಿ ಆಡಳಿತ ನಡೆಸಿದೆ. ರೈತರ ಸಂಕಷ್ಟಗಳಿಗೆ ಸ್ಪಂದಿಸುವ, ಕೃಷಿ ಸುಧಾರಣೆಗಳಿಗೆ ಯಾವುದೇ ವಿಶಿಷ್ಟ ಯೋಜನೆಗಳನ್ನು ರೂಪಿಸಿದೆ ಬರೀ ಹಗರಣಗಳಲ್ಲಿ ಕಾಲಹರಣ ಮಾಡಿತು. ಅಧಿಕಾರ ಕಳೆದುಕೊಂಡ ಮೇಲೆ ಈಗ ರೈತರ ಮೇಲೆ ಪ್ರೀತಿಯನ್ನು ತೋರಿಸುತ್ತಿರುವುದು ಇವರ ಕಪಟ ನಾಟಕವಲ್ಲದೇ ಮತ್ತಿನ್ನೇನು ಅಲ್ಲ? ಇವರು ಸುರಿಸುವ ಮೊಸಳೆ ಕಣ್ಣೀರನ್ನು ರಾಜ್ಯದ ರೈತರು ಅರ್ಥಮಾಡಿಕೊಳ್ಳಬಲ್ಲರು ಎಂದು ಪತ್ರಿಕಾ ಹೇಳಿಕೆ ಮೂಲಕ ಟೀಕಿಸಿದ್ದಾರೆ.
ರೈತರ ವಾರ್ಷಿಕ ವರಮಾನ ದ್ವಿಗುಣಗೊಳಿಸಲು ಯೋಜನೆಗಳನ್ನು ರೂಪಿಸಿ ಹಂತ ಹಂತವಾಗಿ ಅನುಷ್ಠಾನ ಮಾಡುತ್ತಾ, ರೈತರ ಆರ್ಥಿಕ ಸದೃಢತೆಗೆ ಅನೇಕ ದಿಟ್ಟ ನಿಲುವುಗಳನ್ನು ತೆಗೆದುಕೊಂಡಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ರಾಜಕೀಯ ಕಾರಣಗಳಿಗೆ ವಿರೋಧಿಸುತ್ತಾ ಹತಾಶರಾಗಿ ಈ ಹೇಳಿಕೆ ಕೊಟ್ಟು ತಮ್ಮ ಅಸ್ತಿತ್ವ ಉಳಿಸಿಕೊಳ್ಳುವುದಕ್ಕೆ ನಡೆಸಿದ ವ್ಯರ್ಥ ಪ್ರಯತ್ನ ಇದಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ, ಕೃಷಿ ಸಿಂಚಾಯಿ ಯೋಜನೆ, ಭೂ ಸುಧಾರಣೆ ಕಾಯ್ದೆ ಹಾಗೂ ಎಪಿಎಂಸಿ ಕಾಯ್ದೆಗಳಿಗೆ ತಿದ್ದುಪಡಿ, ರೈತರ ಬೆಳೆಗಳಿಗೆ ಉತ್ತಮ ಬೆಲೆ ಸಿಗಲು ತೆಗೆದುಕೊಂಡಿರುವ ನಿರ್ಣಯಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಪ್ರತಿವರ್ಷ ಕಿಸಾನ್ ಸಮ್ಮಾನ್ ಯೋಜನೆ ಅಡಿ ಹತ್ತು ಸಾವಿರ ರೂ.ಗಳು ರೈತರ ಖಾತೆಗೆ ನೇರವಾಗಿ ಜಮಾ ಆಗುತ್ತಿರುವುದು, ಶೂನ್ಯ ಬಡ್ಡಿದರದಲ್ಲಿ 3 ಲಕ್ಷದವರೆಗೆ ಸಾಲ ಇನ್ನೂ ಹಲವಾರು ಮಹತ್ವದ ಯೋಜನೆಗಳನ್ನು ಅನುಷ್ಠಾನಗೊಳಿಸಿರುವುದು ಬಿಜೆಪಿ ಸರ್ಕಾರಗಳು ಎನ್ನುವುದು ಸಿದ್ದರಾಮಯ್ಯ ಅವರಿಗೆ ಕಾಣಿಸದೇ ಇರುವುದು ವಿಪರ್ಯಾಸವೇ ಸರಿ ಎಂದು ಈರಣ್ಣ ಕಡಾಡಿ ಟಾಂಗ್ ನೀಡಿದ್ದಾರೆ.