ಬೆಂಗಳೂರು: ಪಿಎಸ್ಐ ಪರೀಕ್ಷಾ ನೇಮಕಾತಿ ಅಕ್ರಮ ಎಸಗಿರುವ ಆರೋಪದಡಿ ಬಂಧಿತರಾಗಿರುವ ಐಪಿಎಸ್ ಅಧಿಕಾರಿ ಅಮ್ರಿತ್ ಪಾಲ್ ಬುಧವಾರ ಕಸ್ಟಡಿ ಅಂತ್ಯ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಸಿಐಡಿ ಅಧಿಕಾರಿಗಳು ಹಾಜರುಪಡಿಸಿ ಮತ್ತೆ ಮೂರು ದಿನಗಳವರೆಗೆ ಪೊಲೀಸ್ ವಶಕ್ಕೆ ಪಡೆದುಕೊಂಡಿದ್ದಾರೆ.
ಪಿಎಸ್ಐ ನೇಮಕಾತಿ ಹಗರಣದಲ್ಲಿ ಸಿಬ್ಬಂದಿ ಮೂಲಕ ಅಭ್ಯರ್ಥಿಗಳೊಂದಿಗೆ ಕೋಟ್ಯಂತರ ರೂಪಾಯಿ ಪಡೆದ ಆರೋಪ ಹಿನ್ನೆಲೆಯಲ್ಲಿ ಎಡಿಜಿಪಿ ದರ್ಜೆ ಅಧಿಕಾರಿಯನ್ನು ಜುಲೈ 4ರಂದು ಸಿಐಡಿ ಬಂಧಿಸಿ ಬುಧವಾರದವರೆಗೂ ಪೊಲೀಸ್ ಕಸ್ಟಡಿ ಪಡೆದುಕೊಂಡಿತ್ತು. ವಿಚಾರಣೆ ವೇಳೆ ನಾನೇನು ತಪ್ಪು ಮಾಡಿಲ್ಲ.. ನಡೆದಿರುವ ಅವ್ಯವಹಾರ ನನ್ನ ಗಮನಕ್ಕೆ ಬಂದಿಲ್ಲ ಎಂದು ತನಿಖಾಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದರು. ಜೊತೆಗೆ ನೇಮಕಾತಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಡಿವೈಎಸ್ಪಿ ಶಾಂತಕುಮಾರ್, ಸಿಬ್ಬಂದಿ ಶ್ರೀಧರ್, ಹರ್ಷ, ಶ್ರೀನಿವಾಸ್ ಅವರನ್ನು ಬಾಡಿ ವಾರೆಂಟ್ ಮೇರೆಗೆ ಪಡೆದುಕೊಂಡು ಪರಸ್ಪರ ವಿಚಾರಣೆಗೊಳಪಡಿಸಿದ್ದರು.
ಕಸ್ಟಡಿ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಅಮ್ರಿತ್ ಪಾಲ್ರನ್ನು ಮೂರು ದಿನಗಳ ಕಾಲ ನ್ಯಾಯಾಲಯ ಪೊಲೀಸ್ ಕಸ್ಟಡಿಗೆ ನೀಡಿದೆ. ಪ್ರತಿದಿನ 30 ನಿಮಿಷ ಕುಟುಂಬದ ಸದಸ್ಯರ ಭೇಟಿ, ಆನ್ ಲೈನ್ ಮುಖಾಂತರ ವೈದ್ಯರನ್ನು ಸಂಪರ್ಕಿಸಲು 1ನೇ ಎಸಿಎಂಎಂ ಕೋರ್ಟ್ ಅನುಮತಿ ನೀಡಿದೆ. ಡಿವೈಎಸ್ಪಿ ಶಾಂತಕುಮಾರ್ ಸೇರಿ ನಾಲ್ವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇದನ್ನೂ ಓದಿ : ಬೆಂಗಳೂರು ಗ್ರಾಮಾಂತರ ರೌಡಿಗಳಿಗೆ ಎಸ್.ಪಿ ವಂಶಿಕೃಷ್ಣ ಖಡಕ್ ವಾರ್ನಿಂಗ್...!