ಬೆಂಗಳೂರು: ನಕಲಿ ಜಾತಿ ಪ್ರಮಾಣ ಪತ್ರದ ಸಂಬಂಧ ಕಠಿಣ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಬುಡಕಟ್ಟು ಜನಾಂಗ ಆಯೋಗದ ಅಧ್ಯಕ್ಷ ನಂದ್ ಕುಮಾರ್ ಸಾಯ್ ರಾಜ್ಯದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಂದು ಕರ್ನಾಟಕದಲ್ಲಿ ಪರಿಶಿಷ್ಟ ಪಂಗಡದ ಶೈಕ್ಷಣಿಕ, ಸಾಮಾಜಿಕ ಸುಧಾರಣೆ, ಲೋಪದೋಷ, ಇತರ ಯೋಜನೆಗಳ ಸಂಬಂಧ ಸಮಗ್ರವಾಗಿ ಚರ್ಚೆ ನಡೆಸಲಾಗಿದೆ. ಈ ವೇಳೆ, ಎಸ್ಟಿ ನಕಲಿ ಜಾತಿ ಪ್ರಮಾಣಪತ್ರದ ಬಗ್ಗೆ ವಿಸ್ತೃತವಾಗಿ ಸಮಾಲೋಚನೆ ನಡೆಸಲಾಗಿದೆ. ನಕಲಿ ಜಾತಿ ಪತ್ರ ಹೊಂದಿರುವ ಬಗ್ಗೆ ಕೂಡಲೇ ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ. 15 ದಿನಗಳಲ್ಲಿ ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ನಮಗೆ ವರದಿ ನೀಡುವಂತೆ ನಿರ್ದೇಶನ ನೀಡಿದ್ದೇವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಎಸ್ಟಿ ಸಮುದಾಯಕ್ಕೆ ಶೇ3ರಷ್ಟು ಮೀಸಲಾತಿ ದೊರೆಯುತ್ತಿದ್ದು, ಅದನ್ನು ಶೇ 7.5ಕ್ಕೆ ಹೆಚ್ಚಳ ಮಾಡಬೇಕೆಂಬ ಬೇಡಿಕೆ ಇದೆ. ಈ ಬಗ್ಗೆ ರಾಜ್ಯ ಸರ್ಕಾರ ನ್ಯಾಯಮೂರ್ತಿ ನಾಗಮೋಹನ ದಾಸ್ ನೇತೃತ್ವದಲ್ಲಿ ಸಮಿತಿ ರಚಿಸಿದ್ದಾರೆ. ಸಮಿತಿ ವರದಿ ಬಂದ ಮೇಲೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ಎಸ್ಟಿ ಸಮುದಾಯಕ್ಕೆ ಉತ್ತಮ ಯೋಜನೆಗಳನ್ನು ರೂಪಿಸಿದೆ ಅವುಗಳನ್ನು ಸರಿಯಾಗಿ ನಡೆಯುವುಂತೆ ನೋಡಿಕೊಳ್ಳಲು ಸೂಚಿಸಲಾಗಿದೆ ಎಂದರು. ಪಾರಂಪರಿಕ ಆರೋಗ್ಯ ಪದ್ಧತಿ ಮಾಡುವವರಿಗೆ ಸೂಕ್ತ ತರಬೇತಿ ನೀಡಿ ಅವರ ಆರೋಗ್ಯ ಪದ್ಧತಿಯನ್ನು ಆಯುಷ್ ಇಲಾಖೆ ಮೂಲಕ ಪ್ರೋತ್ಸಾಹ ನೀಡುವಂತೆ ಸೂಚಿಸಲಾಗಿದೆ. ರಾಜ್ಯ ಸರ್ಕಾದ ಅಧಿಕಾರಿಗಳ ಜೊತೆ ಮಾತುಕತೆ ಉತ್ತಮ ರೀತಿಯಲ್ಲಿ ನಡೆದಿದ್ದು, ರಾಜ್ಯ ಸರ್ಕಾರದಿಂದ ಎಸ್ಟಿ ಸಮುದಾಯದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಎಸ್ಟಿ ಸಮುದಾಯದ ಖಾಲಿ ಹುದ್ದೆಗಳು ಸಾಕಷ್ಟಿವೆ. ಗುಡ್ಡಗಾಡು ಪ್ರದೇಶದಲ್ಲಿ ಶಿಕ್ಷಕರ ಕೊರತೆ ಇದ್ದು, ಅದನ್ನು ಆದಷ್ಟು ಬೇಗ ನೇಮಕ ಮಾಡಲು ಸೂಚಿಸಲಾಗಿದೆ ಎಂದು ಇದೇ ವೇಳೆ ತಿಳಿಸಿದರು.
ಇದೇ ವೇಳೆ, ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಕುಮಾರ ನಾಯ್ಕ್ ಮಾತನಾಡಿ, ಶೀಘ್ರವೇ ಖಾಲಿ ಹುದ್ದೆಗಳನ್ನು ನೇಮಕ ಮಾಡಿಕೊಳ್ಳುವುದಾಗಿ ಭರವಸೆ ನೀಡಿದ್ದೇವೆ. ಸಮೃದ್ಧಿ ಯೋಜನೆ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶಿಕ್ಷಣ ವ್ಯವಸ್ಥೆಯಲ್ಲಿ ಇನ್ನಷ್ಟು ಸುಧಾರಣೆ ತರಲು ಹಲವು ಮಾರ್ಗದರ್ಶನಗಳನ್ನು ನೀಡಿದ್ದಾರೆ ಎಂದರು.