ಬೆಂಗಳೂರು: ಮೀಸಲಾತಿ ಸಂಬಂಧದ ಪೂರ್ಣ ವರದಿ ಇನ್ನೂ ಸಿದ್ಧವಾಗಿಲ್ಲ. ಅಂತಿಮ ವರದಿ ಸಿದ್ಧಪಡಿಸಲು ಇನ್ನೂ ಸಮಯಬೇಕು. ಆದರೆ, ಮಧ್ಯಂತರ ವರದಿ ಸದ್ಯದಲ್ಲೇ ಸರ್ಕಾರಕ್ಕೆ ಸಲ್ಲಿಕೆ ಮಾಡುತ್ತೇವೆ ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯದ 2ಎ ವರ್ಗಕ್ಕೆ ಸೇರ್ಪಡೆ ಬೇಡಿಕೆ ವಿಚಾರವಾಗಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ ಸರ್ಕಾರ ವರದಿ ಕೇಳಿರುವ ಹಿನ್ನೆಲೆ ಪ್ರತಿಕ್ರಿಯಿಸುತ್ತ, ಮೀಸಲಾತಿಗಳ ಸಂಬಂಧ ಪೂರ್ಣ ವರದಿ ಇನ್ನೂ ಸಿದ್ಧವಾಗಿಲ್ಲ. ಅಂತಿಮ ವರದಿ ಸಿದ್ಧಪಡಿಸಲು ಸಮಯ ಬೇಕು. ಪಂಚಮಸಾಲಿಯವರಷ್ಟೇ ಅಲ್ಲ, ಅನೇಕ ಸಮುದಾಯಗಳಿಂದ ಮೀಸಲಾತಿ ಬೇಡಿಕೆ ಇದೆ. ಈಗಾಗಲೇ ಆಯೋಗದಿಂದ 16 ಜಿಲ್ಲೆಗಳಲ್ಲಿ ಭೇಟಿ ಮಾಡಿ ಅಧ್ಯಯನ ನಡೆಸಲಾಗಿದೆ.
ಆಯೋಗದ ಸದಸ್ಯರೆಲ್ಲರ ಜತೆ ಚರ್ಚೆ ಮಾಡ್ತೇನೆ. ವರದಿಯನ್ನು ಯಾವಾಗ ಕೊಡಬೇಕು ಅಂತ ಚರ್ಚೆಯ ಬಳಿಕ ಗೊತ್ತಾಗುತ್ತದೆ. ನಾವು ಕೊಡುವ ವರದಿಯನ್ನು ಸರ್ಕಾರ ಮಾತ್ರವಲ್ಲ, ನ್ಯಾಯಾಲಯವೂ ಒಪ್ಪಬೇಕಾಗುತ್ತದೆ. ಅದಕ್ಕಾಗಿ ನಾವು ಸರಿಯಾದ ವರದಿ ಕೊಡಬೇಕು ಅನ್ಕೊಂಡಿದ್ದೇವೆ ಎಂದರು.
ಅಂತಿಮ ವರದಿಗೆ ಎರಡು ಮೂರು ತಿಂಗಳು ಬೇಕು: ವರದಿಯನ್ನು ಇಂಥ ನಿಗದಿತ ದಿನಾಂಕದೊಳಗೆ ಅಧ್ಯಯನ ಮಾಡಿ ಕೊಡಕ್ಕಾಗುವುದಿಲ್ಲ. ಆದರೆ, ನಾವು ಕೆಲವು ದಾಖಲೆಗಳನ್ನು ಕೇಳಿದ್ದೇವೆ, ಪೂರಕ ಮಾಹಿತಿಗಳನ್ನು ತಗೊಳ್ತಿದ್ದೇವೆ. ಖಂಡಿತವಾಗಿಯೂ ಅತೀ ಶೀಘ್ರದಲ್ಲಿ ಅಂತಿಮ ವರದಿಯನ್ನು ಕೊಡ್ತೇವೆ. ಸಾಮಾಜಿಕ ಮತ್ತು ಶೈಕ್ಷಣಿಕ ಪರಿಸ್ಥಿತಿಯ ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಕೊಡ್ತೇವೆ. ಸಂಪೂರ್ಣ ವರದಿ ಕೊಡಲು ಇನ್ನೂ ಎರಡು ಮೂರು ತಿಂಗಳಾಗಬಹುದು. ಮಧ್ಯಂತರ ವರದಿಯನ್ನು ಸಧ್ಯದಲ್ಲೇ ಸರ್ಕಾರಕ್ಕೆ ಸಲ್ಲಿಕೆ ಮಾಡ್ತೇವೆ. ಇದುವರೆಗೆ ಎಷ್ಟು ಅಧ್ಯಯನ ಆಗಿದೆಯೋ ಅದರ ಬಗ್ಗೆ ಮಧ್ಯಂತರ ವರದಿಯಲ್ಲಿ ಮಾಹಿತಿ ಕೊಡ್ತೇವೆ. ವರದಿಯ ಬಗ್ಗೆ ಮಾಹಿತಿಯನ್ನು ಹೊರಗೆ ಹೇಳಲು ಆಗಲ್ಲ ಎಂದಿದ್ದಾರೆ.
ಇನ್ನೂ 14 ಜಿಲ್ಲೆಗಳ ಪ್ರವಾಸ, ಅಧ್ಯಯನ ಬಾಕಿ ಇದೆ. ವರದಿ ಕೊಡಲು ಸರ್ಕಾರ ಆಯೋಗಕ್ಕೆ ಗಡುವು ನಿಗದಿ ಪಡಿಸಿಲ್ಲ. ಸರ್ಕಾರ ನಮ್ಮ ಮೇಲೆ ಯಾವುದೇ ಒತ್ತಡ ಹಾಕಿಲ್ಲ. ಆದರೆ, ವರದಿ ಕೊಡಲು ಸೂಚನೆ ನೀಡಿದೆ. ಮಧ್ಯಂತರ ವರದಿ ಸಲ್ಲಿಸಿ, ಮುಂದಿನ ಅಧ್ಯಯನ ಮುಂದುವರೆಸ್ತೇವೆ. ಅಂತಿಮ ವರದಿ ಸಿದ್ಧಪಡಿಸಲು ನಿರ್ದಿಷ್ಟ ಸಮಯ ಬೇಕು ಅಂತ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಕೊರೊನಾ ಹಾವಳಿ, ಅತಿವೃಷ್ಟಿಯಿಂದ ವರದಿ ಅಧ್ಯಯನ, ಪ್ರವಾಸಕ್ಕೆ ಸ್ಬಲ್ಪ ವಿಳಂಬ ಆಯ್ತು.
ಪಂಚಮಸಾಲಿ ಸಮುದಾಯದ ಶ್ರೀಗಳು, ಪ್ರಮುಖರು ಭೇಟಿ ಮಾಡಿದ್ದಾರೆ. ಅವರಿಗೂ ಆದಷ್ಟು ಬೇಗ ವರದಿ ಕೊಡೋದಾಗಿ ಹೇಳಿದ್ದೇವೆ. ಮಧ್ಯಂತರ ವರದಿ ಆಧರಿಸಿ ಏನು ತೀರ್ಮಾನ ಕೈಗೊಳ್ಳುತ್ತೆ ಅನ್ನೋದು ಸರ್ಕಾರಕ್ಕೆ ಬಿಟ್ಟ ವಿಚಾರ. ಸರ್ಕಾರ ಮಧ್ಯಂತರ ವರದಿ ಮೇಲೆ ಯಾವ ನಿರ್ಧಾರ ತೆಗೆದುಕೊಳ್ಳುತ್ತೆ ಅನ್ನೋದು ಗೊತ್ತಿಲ್ಲ ಎಂದು ವಿವರಿಸಿದರು.
ಒಕ್ಕಲಿಗ ಮೀಸಲಾತಿ ಬಗ್ಗೆನೂ ವರದಿ ನೀಡಲು ಸೂಚನೆ: ಒಕ್ಕಲಿಗ ಸಮುದಾಯದಿಂದ ಮೀಸಲಾತಿ ಹೆಚ್ಚಳ ಬೇಡಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಈ ಬಗ್ಗೆ ಸರ್ಕಾರ ನಮಗೆ ಒಂದು ಟಿಪ್ಪಣಿ ಕಳಿಸಿದೆ. ಒಕ್ಕಲಿಗ ಸಮುದಾಯದ ಬೇಡಿಕೆ ಬಗ್ಗೆಯೂ ಅಧ್ಯಯನ ನಡೆಸಿ ವರದಿ ಕೊಡಲು ಸರ್ಕಾರ ಸೂಚಿಸಿದೆ ಎಂದರು.
ಇದಕ್ಕೂ ಸರ್ಕಾರ ಯಾವುದೇ ಗಡುವು ಕೊಟ್ಟಿಲ್ಲ. ಯಾವುದೇ ಸಮುದಾಯದ ಮೀಸಲಾತಿ ವರದಿ ಚುನಾವಣೆ ಬರೋ ಮುನ್ನ ಸಲ್ಲಿಸ್ತೇವೆ. ನಮಗೆ ಸಮಯಾವಕಾಶ ಕೊಡಿ ಅಂತ ಸಮುದಾಯದವರಿಗೆ ಕೇಳಿಕೊಳ್ತೇನೆ. ನಾವು ಸರಿಯಾದ ವರದಿ ಕೊಡ್ತೇವೆ, ಮುಂದೆ ನ್ಯಾಯಲಯದಲ್ಲೂ ಇದು ಒಪ್ಪಿತ ಆಗಬೇಕು ಎಂದು ಅವರು ಹೇಳಿದರು.
ಇದನ್ನೂ ಓದಿ: ಅವರು ಚೀನಾದಂತೆ ಆಕ್ರಮಣ ಮಾಡಿದ್ರೆ ನಾವು ಭಾರತೀಯ ಸೇನೆಯಂತೆ ಹಿಮ್ಮೆಟ್ಟಿಸುತ್ತೇವೆ: ಮಹಾ ನಾಯಕರಿಗೆ ಸಿಎಂ ಟಾಂಗ್